Advertisement

ಕ್ಯಾನ್ಸರ್‌ ಪೀಡಿತರಿಗೆ ತಲೆಗೂದಲು ಕೊಡುಗೆ

11:33 PM Jan 04, 2020 | Sriram |

ವಿಶೇಷ ವರದಿ- ಕುಂದಾಪುರ: ನೀಳವೇಣಿ, ಉದ್ದನೆಯ ತಲೆಗೂದಲು ಎಂದರೆ ಮಹಿಳಾಮಣಿಯರಿಗೆ ಪಂಚಪ್ರಾಣ. ಆದರೆ ಇಲ್ಲೊಬ್ಬರು ತಮ್ಮ ನೀಳ ಕೇಶವನ್ನೇ ಬರಿದು ಮಾಡಿ ಕ್ಯಾನ್ಸರ್‌ ಪೀಡಿತರಿಗೆ ದಾನ ಮಾಡಿದ್ದಾರೆ. ಕುಂದಾಪುರದ ವೆಸ್ಟ್‌ ಬ್ಲಾಕ್‌ ರಸ್ತೆ ನಿವಾಸಿ ಆಶಾ ಶಿವಾನಂದ ನಾಯಕ್‌ ಮುಂಬೈಯಲ್ಲಿದ್ದಾಗ ಸಮಾಜಸೇವಕಿಯಾಗಿ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದರು.

Advertisement

ನೀಳ ಕೂದಲು ದಾನ
ಆಸ್ಪತ್ರೆಯಲ್ಲಿ ನಾನು ಕ್ಯಾನ್ಸರ್‌ ಪೀಡಿತ ವಾರ್ಡ್‌ ನಲ್ಲಿ ಮಾತನಾಡಿಸುತ್ತಿದ್ದ ರೋಗಿಯ ಬೆಡ್‌ನ‌ ಹಿಂದೆ ಹದಿನಾರು ವರ್ಷದ ಬಾಲಕಿ ಇದ್ದಳು. ನನ್ನನ್ನು ನೋಡಿ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದಳು. ಯಾಕೆಂದು ಕರೆದು ಕೇಳಿದಾಗ, ನನ್ನ ನೀಳಕೂದಲನ್ನು ನೋಡಿ ನಿಮಗೆ ಎಷ್ಟು ಚಂದದ ಉದ್ದನೆಯ ತಲೆಗೂದಲು ಇದೆ. ನನಗೆ ಕಿಮೋಥೆರಪಿ ಮಾಡಿ ತಲೆಗೂದಲೆಲ್ಲ ಉದುರಿದೆ ಎಂದು ಅಳುತ್ತಿತ್ತು. ನನಗೋ ಉದ್ದನೆಯ ತಲೆಗೂದಲೆಂದರೆ ಪಂಚಪ್ರಾಣ. ಆದರೂ ನೀಳ ಗೂದಲನ್ನು ಕತ್ತರಿಸಿ ಚಿಕಿತ್ಸೆಗೆ ಒಳಗಾಗಿ ಕೂದಲು ಕಳೆದುಕೊಂಡ ಮಹಿಳಾ ಕ್ಯಾನ್ಸರ್‌ ರೋಗಿಗಳಿಗೆ ವಿಗ್‌ ಮಾಡಲು ಕೊಡತೊಡಗಿದೆ. ಕೂದಲು ಉದ್ದ ಬರುತ್ತಲೇ ದಾನ ಮಾಡುತ್ತಿದ್ದೆ. ಈಗ ಬಣ್ಣ ಮಾಸಿದ ಕಾರಣ ಸ್ವೀಕರಿಸುತ್ತಿಲ್ಲ. ಆಸ್ಪತ್ರೆಯಲ್ಲಿ ಕಂಡ ಮಕ್ಕಳ ವೇದನೆ ಕರುಳು ಹಿಂಡಿತು. ಎರಡು ತಿಂಗಳ ಮಗುವಿನ ಹೊಟ್ಟೆಯ ಹೊರಗೆ ಗಡ್ಡೆಯೊಂದು ಕಂಡು ಅದರ ಅಮ್ಮ ಅಳುತ್ತಿದ್ದ, ಮಗುವನ್ನು ಬದುಕಿಸಲು ಪ್ರಯತ್ನ ಪಡುತ್ತಿದ್ದ ದೃಶ್ಯ ಮನದಲ್ಲಿ ಅಚ್ಚೊತ್ತಿತು. ನನ್ನ ಆದಾಯದ ಬಹುಪಾಲನ್ನು ಸಮಾಜಸೇವೆಗೆ ನೀಡಲು ನಿರ್ಧರಿಸಿದೆ’ ಎನ್ನುತ್ತಾರೆ ಆಶಾ ಶಿವಾನಂದ ನಾಯಕ್‌.

ಜ್ಯೋತಿಷ, ಸಂಗೀತ, ಸಾಮವೇದ
ಸತತ ಎರಡು ವರ್ಷ ಪ್ರತಿ ಶನಿವಾರ ಉಡುಪಿ ಸರಕಾರಿ ಆಸ್ಪತ್ರೆಯ 101 ರೋಗಿಗಳಿಗೆ ಹಣ್ಣುಹಂಪಲು ಕೊಟ್ಟದ್ದೂ ಸೇರಿದಂತೆ ವಿವಿಧ ಶಾಲೆಗಳಿಗೆ ಕೊಡುತ್ತಿರುವ ಶೈಕ್ಷಣಿಕೆ ಸಹಕಾರ ದೊಡ್ಡದಿದೆ. ದೇಹಿ ಎಂದು ಬಂದವರಿಗೆ ಬರಿಗೈಯಲ್ಲಿ ಕಳಿಸಿದ್ದಿಲ್ಲ. ಆದರೆ ದಾನ ಹೆಗ್ಗಳಿಕೆ ಅಲ್ಲ, ಆಡಂಬರ ಅಲ್ಲ ಎನ್ನುವ ಆಶಾ ನಾಯಕ್‌, ಜ್ಯೋತಿಷ, ಸಂಗೀತ, ಸಾಮವೇದ ಅರಿತಿದ್ದು, ಲೇಖನಗಳ ಮೂಲಕ ಸಾಮವೇದದಿಂದ ಸಂಗೀತ ಹುಟ್ಟಿದ ಬಗೆ, ಶಿವನ ಕಾಲದಿಂದ ಬಂದ ಸಂಗೀತ ಎನ್ನುವುದು ಏನು ಇತ್ಯಾದಿ ಕುರಿತು ಅಧ್ಯಯನಭರಿತ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ.

ಸಮಾಜ ಸೇವೆಗೆ ದಾನ
ಕ್ಯಾನ್ಸರ್‌ಗೆ ಒಳಗಾದ ರೋಗಿಗಳಿಗೂ ತಿಳಿಯದಂತೆ ಆಸ್ಪತ್ರೆಗೆ ನೇರ ಹಣ ಪಾವತಿ ಮಾಡುತ್ತಿರುವ ಇವರು ಸಂಗೀತಗಾರರಾಗಿ ಅಪಾರ ಹಣ, ಹೆಸರು ಸಂಪಾದನೆ ಮಾಡಲು ಸಾಧ್ಯವಿದ್ದರೂ ಸಂಗೀತದಿಂದ ಬಂದ ಹಣವನ್ನು ಆದಿವಾಸಿಗಳಿಗೆ, ರೋಗಿಗಳಿಗೆ ಹಂಚಿ ನೆಮ್ಮದಿ ಕಾಣುತ್ತಿದ್ದಾರೆ. ರಾಂಚಿಯಲ್ಲಿರುವ ಆಶ್ರಮದ ಮೂಲಕ ಆದಿವಾಸಿಗಳ ಶಿಕ್ಷಣದ ವೆಚ್ಚ ಭರಿಸುತ್ತಿದ್ದಾರೆ. ಅಲ್ಲದೇ ಅಗೋಚರವಾಗಿ ಬಡವರು, ಅನಾಥರಿಗೆ, ರೋಗಿಗಳಿಗೆ, ಶೈಕ್ಷಣಿಕ ಉದ್ದೇಶಕ್ಕೆ ನೆರವಾಗುತ್ತಿದ್ದಾರೆ.

ಸಂಗೀತ ಹುಟ್ಟಿದ ಬಗೆ, ಶಿವನ ಕಾಲದಿಂದ ಬಂದ ಸಂಗೀತ ಎನ್ನುವುದು ಏನು ಇತ್ಯಾದಿ ಕುರಿತೂ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next