Advertisement
ಒಂದು ಕಡೆ ಹೆಣ್ಣಿನ ಬಗ್ಗೆ ಭಾವನಾತ್ಮಕವಾಗಿ ಧನಾತ್ಮಕ ಅಂಶಗಳಿಂದ ಹೇಳಿರುವ ಮನು ಇನ್ನೊಂದು ಕಡೆ ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಗಂಡ, ವೃದ್ಧಾಪ್ಯದಲ್ಲಿ ಮಕ್ಕಳ ಅಡಿಯಲ್ಲಿ ಆಶ್ರಯ ಪಡೆಯಬೇಕೆಂದು ಹೇಳುವ ಮೂಲಕ ಹೆಣ್ಣನ್ನು ಸಮಾಜದ ಒಂದು ಮೂಲೆಗೆ ಸೀಮಿತಗೊಳಿಸಿರುವುದನ್ನು ನಾವು ಕಾಣುತ್ತೇವೆ.
Related Articles
Advertisement
ಚಿಟಿಕೆಯಲ್ಲಿ ಹೇಳಿ ಮುಗಿಸುವಂತಹ ಸಾಧನೆಯೇನೂ ಅಲ್ಲ ಅವಳದ್ದು. ಬರೆದರೆ ಪುಟಗಳ ಲೆಕ್ಕ ತಪ್ಪುವುದು. ಹೇಳಿದರೆ ಮಾತುಗಳು ಖಾಲಿ ಆಗುವುದು
ಹೆಣ್ಣಿನ ಸ್ವರೂಪ ಒಂದೆರಡಲ್ಲ. ಸಮಾಜಕ್ಕಾಗಿ, ಕುಟುಂಬಕ್ಕಾಗಿ ಅವಳು ಮಾಡಿದ ತ್ಯಾಗ ಅಪಾರ ಮತ್ತು ಅದ್ಭುತ. ಹೊಂದಾಣಿಕೆ ಎನ್ನುವ ಶಿಖರದ ತುತ್ತ ತುದಿಯನ್ನು ತಲುಪಿದ ತಾಳ್ಮೆಯ ಜಯದ ಸಂಕೇತ ಅವಳು. ಸುರಿವ ಮಳೆಗೆ ತಂಪಾಗಿ, ಉರಿವ ಬಿಸಿಲಿಗೆ ಕೆಂಪಾಗಿ, ಸುಳಿ ಗಾಳಿಗೆ ಧೂಳಾಗಿ ಎಲ್ಲದರಲ್ಲಿಯೂ ಮೌನಿಯಾಗಿ ಸಹನಾ ಮೂರ್ತಿಯಾಗಿ ಇರುವ ವಸುಂಧರೆಯಂತೆ ಅವಳು. ಏಲ್ಲಿಲ್ಲ ಅವಳು? ಅವಳ ಸಾಧನೆಗಳ ಪಟ್ಟಿ ಮಾಡಲು ಗೆರೆಗಳಿಲ್ಲ. ಅವಳು ಎಲ್ಲ ಕ್ಷೇತ್ರದಲ್ಲಿಯೂ ಗಂಡಿಗೆ ಸಮನಾಗಿ ನಿಂತ ಸದೃಢ ಸಬಲೆ. ವಿದ್ಯಾವಂತೆಯಾಗಿ ಸರಕಾರಿ ನೌಕರರಿಗೂ ಸೈ ರಾಜಕಾರಣಕ್ಕೂ ಸೈ. ನೌಕರಿಗೆ ವಿದ್ಯೆ ಇಲ್ಲದಿದ್ದರೂ ಬದುಕಿನ ಕೌಶಲ ತಿಳಿದು ಮಾದರಿಯಾಗಿ ಬದುಕಲು ಸೈ.
ಕಲ್ಲು ಉಜ್ಜಿ ಬೆಂಕಿ ಹತ್ತಿಸುವ ಆಗಿನಿಂದ ಬೆಂಕಿ ಕಡ್ಡಿಯ ಸಹಾಯ ಇಲ್ಲದೆ ಗ್ಯಾಸ್ ಹೊತ್ತಿಸುವ ಇಲ್ಲಿಯವರೆಗೆ ಆಧುನಿಕತೆಯ ಎಲ್ಲ ಕ್ಷೇತ್ರದಲ್ಲೂ ಎಲ್ಲರಿಗೂ ಸವಾಲಾಗಿ ಇರುವವಳು. ನಾಲ್ಕು ಗೋಡೆಯ ನಡುವೆ ಕುಟುಂಬಕ್ಕೆ ಅಡುಗೆ ಬೇಯಿಸುವ ಕಲೆಯನ್ನೇ ಉದ್ಯೋಗವನ್ನಾಗಿಸಿ ಗೆದ್ದವಳು.
ಅವಳ ಬೆನ್ನು ತಟ್ಟುವ ಒಂದು ಕೈ ಇದ್ದರೆ ಚಪ್ಪಾಳೆ ಹೊಡೆಯುವ ಸಾವಿರ ಕೈಗಳನ್ನು ಅವಳು ಸಂಪಾದಿಸಬಲ್ಲಳು ಇದು ಅವಳ ಶಕ್ತಿ.
ಹೆಂಡತಿಯಾಗಿ ಹಾಸಿಗೆಯಲಿ ಶೃಂಗಾರ ಕಾವ್ಯ ಹಾಡುವವಳು.ಗೆಳತಿಯಾಗಿ ಕಷ್ಟದಲಿ ಧೈರ್ಯತುಂಬುವವಳು. ಸಹೋದರಿಯಾಗಿ ಬದುಕಿನಲಿ ಸಂಬಂಧಗಳ ಹೊಸೆಯುವಳು. ಹೀಗೆ ಬದುಕಿನಲ್ಲಿ ತಾಯಿಯಾಗಿ, ಹೆಂಡತಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ ಬದುಕಿನ ಎಲ್ಲ ಪಾತ್ರಗಳನ್ನು ನಿಭಾಯಿಸುವ ಅವಳು ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಉಜ್ವಲ ಭವಿಷ್ಯ ರೂಪಿಸುವ ಗುರುವೂ ಆಗಿದ್ದಾಳೆ.
ಅಲ್ಲಲ್ಲಿ ಕೇಳಿ ಬರುವ ಅತ್ಯಾಚಾರ, ಕೊಲೆ ಇಂತಹ ಭಯಾನಕ ಕೃತ್ಯಗಳ ನಡುವೆಯೂ ಒಬ್ಬಳೇ ನಿಂತು ಬದುಕಿನೊಡನೆ ಹೋರಾಡುವ ಧೈರ್ಯ ತೋರುವಷ್ಟು ಆಧುನಿಕತೆಗೆ ಹೊಂದಿಕೊಂಡಿ ದ್ದಾಳೆ. ಸಮಾಜಕ್ಕೆ ಅಂಜಿ ನಾಚಿಕೆ, ಮಾನ ಮರ್ಯಾದೆ ಎಂದು ಹಿಂಜರಿಯುತ್ತಿದ್ದ ಅವಳು, ಇಂದು ಯಾವುದನ್ನೂ ಲೆಕ್ಕಿಸದೆ ಅನ್ಯಾಯದ ವಿರುದ್ಧ ನಿಲ್ಲುತ್ತಿದ್ದಾಳೆ. ಅವಳ ಏಳಿಗೆಯೆ ಈ ಆಧುನಿಕ ಜಗತ್ತಿಗೆ ಅವಳ ಕೊಡುಗೆ. ಆಧುನಿಕ ಜಗತ್ತು ಎಷ್ಟೇ ಮುಂದುವರಿಯಲಿ ಏನೆಲ್ಲಾ ಬದಲಾವಣೆಗಳಾಗಲಿ ಅವಳ ತಾಯ್ತನದ ಮಮಕಾರ ಮತ್ತು ಜವಾಬ್ದಾರಿಯಲ್ಲಿ ಮಾತ್ರ ಯಾವುದೇ ಬದಲಾವಣೆಗಳು ಆಗುವುದಿಲ್ಲ. ತಾಯಾಗುವ ಕ್ಷಣದಿಂದ ಮುಪ್ಪಾಗಿ ಮರೆಯಾಗುವವರೆಗೂ ಅವಳು ಅವಳ ತಾಯ್ತನ ಜವಾಬ್ದಾರಿಯಿಂದ ಮುಕ್ತಳಾಗುವುದಿಲ್ಲ.
ಹೆಣ್ಣಿನ ಕುರಿತು ಹೇಳುವಾಗ ನಾನೇನು ಹೊರತಲ್ಲ. ಹೀಗೊಂದು ಸ್ವಲ್ಪ ವರ್ಷಗಳ ಕಾಲದ ಹಿಂದೆ ಜನ ಸಂಪರ್ಕವಿಲ್ಲದೆ ಕುಟುಂಬವೇ ಪ್ರಪಂಚವೆಂದು ಬದುಕುತ್ತಿರುವ ನಾನು ಆಧುನಿಕತೆಯ ಬೆಳೆವಣಿಗೆಯ ಪ್ರಭಾವದಿಂದ ಇಂದು ನನ್ನ ಅಸ್ತಿತ್ವವನ್ನು ನಾನೇ ರೂಪಿಸಿಕೊಂಡು ನನಗೊಂದು ಸ್ವಂತಿಕೆ ತಂದುಕೊಳ್ಳುವಲ್ಲಿ ನಾಲ್ಕಾರು ಜನ ನನ್ನನ್ನು ಗುರುತಿಸುವ ಮಟ್ಟಿಗೆ ನನ್ನ ನಾನು ರೂಪಿಸಿಕೊಂಡಿದ್ದೇನೆ.
ನನ್ನ ಪ್ರತಿಭೆಗಳನ್ನು ನಾನು ಅನಾವರಣಗೊಳಿಸಲು ಸಹಾಯಕವಾಗಿದ್ದು ಮುಂದುವರಿದ ಆಧುನಿಕ ಜಗತ್ತಿನ ಸೋಷಿಯಲ್ ಮೀಡಿಯಾಗಳು. ನನ್ನ ಇರುವಿಕೆಯನ್ನು ದೃಢೀಕರಿಸಲು ನನಗೆ ಸಹಕರಿಸಿದ್ದು ಸಮಾಜಕ್ಕೆ ಅತಿವೇಗದಲ್ಲಿ ತಲುಪುವ ಆಧುನೀಕರಣ ತಂತ್ರಜ್ಞಾನ. ಪ್ರಪಂಚದ ಆಗು ಹೋಗುಗಳನ್ನು ತಿಳಿದುಕೊಳ್ಳುತ್ತ, ಆಧುನೀಕರಣಗೊಳ್ಳುತ್ತಿರುವ ಈ ಸಮಾಜಕ್ಕೆ ತನ್ನದೇ ಕೊಡುಗೆ ಕೊಡು ವುದರ ಜತೆಗೆ ತನಗೊಂದು ಘನತೆ ತಂದುಕೊಳ್ಳುವಲ್ಲಿ ಮಹಿಳೆಯ ಶ್ರಮ ಶ್ಲಾಘನೀಯ.
ಎಂ. ಎನ್. ನೇಹಾ
ಹೊನ್ನಾವರ