Advertisement

ಮರಳಿ ತೀರ್ಥಹಳ್ಳಿಗೆ ಅಭಿಯಾನ ಕೈಗೊಳ್ಳಿ : ಸಿಎಂ

03:30 PM Apr 11, 2022 | Niyatha Bhat |

ಶಿವಮೊಗ್ಗ: ನಿಮ್ಮ ಶ್ರಮದ ಫ‌ಲ ನಿಮ್ಮ ಮಣ್ಣಿಗೆ ಸಲ್ಲಬೇಕು. ಈ ನಿಟ್ಟಿನಲ್ಲಿ ನಗರದಲ್ಲಿರುವ ಮಲೆನಾಡಿಗರು ಮರಳಿ ತೀರ್ಥಹಳ್ಳಿಗೆ ಎಂಬ ಅಭಿಯಾನ’ವನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

Advertisement

ಭಾನುವಾರ ಅರಮನೆ ಮೈದಾನದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳಿಗಾಗಿ ಆಯೋಜಿಸಿದ್ದ ಮಲೆನಾಡಿಗರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿರುವ ಮಲೆನಾಡಿಗರ ಶ್ರಮ ಮತ್ತು ಅವರ ಕೊಡುಗೆ ತಮ್ಮ ಊರಿಗೆ ಸಲ್ಲಬೇಕಿದೆ. ಪ್ರಕೃತಿ, ಪಾಠ ಕಲಿತ ಶಾಲೆ, ಊರು ಮತ್ತು ತಂದೆ-ತಾಯಿಗಳಿಗೆ ನ್ಯಾಯ ನೀಡಬೇಕಿದೆ. ಇದಕ್ಕಾಗಿ ಅಭಿಯಾನದ ಅವಶ್ಯಕತೆ ಇದೆ ಎಂದರು.

ಶಿವಮೊಗ್ಗ ಜಿಲ್ಲೆ ನೈಸರ್ಗಿಕ ಪರಿಸರವುಳ್ಳ ವಿಶಿಷ್ಟ ಜಿಲ್ಲೆ. ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿರುವವರು ಶ್ರಮಜೀವಿಗಳಾಗಿದ್ದಾರೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಒಕ್ಕಲುತನ ಮಾಡುವುದು ಸುಲಭದ ಮಾತಲ್ಲ. ಅಲ್ಲದೆ, ಅಲ್ಲಿನ ಜನ ಬುದ್ಧಿವಂತರಿದ್ದಾರೆ. ಕಡಿದಾಳ್‌ ಮಂಜಪ್ಪ, ಎಸ್‌. ಬಂಗಾರಪ್ಪ, ಜೆ.ಎಚ್‌. ಪಟೇಲ್‌ರಿಂದ ಹಿಡಿದು ನೆಚ್ಚಿನ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ತನಕ ರಾಜಕಾರಣಕ್ಕೆ ಜಿಲ್ಲೆಯ ಕೊಡುಗೆ ಅಪಾರ. ನಾಡಿನ ಶ್ರೇಷ್ಠ ಸಾಹಿತಿಗಳಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಆದರ್ಶಗಳು ಎಂದಿಗೂ ಪ್ರಸ್ತುತ ಎಂದು ಬಣ್ಣಿಸಿದರು.

ಬೆಂಗಳೂರಿನ ಅಭಿವೃದ್ಧಿಯಲ್ಲಿಯೂ ಶಿವಮೊಗ್ಗದವರ ಬುದ್ಧಿವಂತಿಕೆ ಮತ್ತು ಶ್ರಮ ಎರಡೂ ಇದೆ. ಎಲ್ಲಿ ಹೋದರೂ ಆ ಪ್ರದೇಶವನ್ನು ತಮ್ಮದೇ ಎಂದೇ ಭಾವಿಸಿ, ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ತೀರ್ಥಹಳ್ಳಿ ಎಂದರೆ ದೇವರ ದರ್ಶನವಾಗುವ ಸ್ಥಳ, ಅದು ದೇವರು ವಾಸಿಸುವ ಸ್ಥಳ ಎಂದು ಹೇಳಿದರು.

Advertisement

ವಿಎಎಸ್‌ಐಎಲ್‌ ಪುನಶ್ಚೇತನಕ್ಕೆ ಚಿಂತನೆ

ಒಂದು ಕಾಲದಲ್ಲಿ ಪೇಪರ್‌ ಮಿಲ್‌ ಆಗಿದ್ದ ವಿಐಎಸ್‌ಎಲ್‌ ಜಾಗತೀಕರಣದಲ್ಲಿ ಮುಚ್ಚುವ ಪರಿಸ್ಥಿತಿ ಬಂದಿವೆ. ಅಲ್ಲಿನ ನೌಕರರಿಗೆ ಯಾವುದೇ ತೊಂದರೆಯಾಗದಂತೆ ವಿಎಎಸ್‌ಐಎಲ್‌ ನ್ನು ಖಾಸಗಿಯವರ ಮೂಲಕ ಪುನಶ್ಚೇತನಗೊಳಿಸಲು ಚಿಂತನೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಶಿವಮೊಗ್ಗಕ್ಕೆ ಶುಭಸುದ್ದಿ ಸಿಗಲಿದೆ ಎಂದರು.

ದೊಡ್ಡ ಪ್ರವಾಸಿ ತಾಣವಾಗಲಿದೆ

ಶಿವಮೊಗ್ಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಮಾನನಿಲ್ದಾಣ ನಿರ್ಮಾಣವಾಗುತ್ತಿದೆ. ಜೋಗ ವನ್ನೂ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. 270 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ರೋಪ್‌ವೇ ಮತ್ತು ಇನ್ನಿತರೆ ವ್ಯವಸ್ಥೆಗಳಾಗುತ್ತಿದೆ. ಇದರಿಂದ ಶಿವಮೊಗ್ಗ ದೊಡ್ಡ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.

ಆರಗ ಜ್ಞಾನೇಂದ್ರ ಅವರು ಶಿವಮೊಗ್ಗದ ಅಭಿವೃದ್ಧಿಗೆ ಶ್ರಮವಹಿಸುತ್ತಿದ್ದು, ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ. ಈ ವರ್ಷದಲ್ಲಿ ಬಹಳ ದೊಡ್ಡ ಅಭಿವೃದ್ಧಿಯನ್ನು ಜಿಲ್ಲೆ ಕಾಣಲಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ ಉನ್ನತ ಶಿಕ್ಷಣ ಸಚಿವ ಡಾ| ಸಿ. ಎನ್‌. ಅಶ್ವತ್ಥ ನಾರಾಯಣ, ಶಾಸಕರಾದ ಹಾಲಪ್ಪ, ಕುಮಾರ ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ. ಎನ್‌. ಜೀವರಾಜ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next