Advertisement

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕನ್ನಡಿಗರ ಕೊಡುಗೆ ಅನುಪಮ

05:50 PM Aug 29, 2022 | Shwetha M |

ವಿಜಯಪುರ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿಜಯಪುರ ಜಿಲ್ಲೆ ಸೇರಿದಂತೆ ಅಖಂಡ ಕರ್ನಾಟಕದ ಕನ್ನಡಿಗರ ಕೊಡುಗೆ ಅಪಾರ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ-ಬಲಿದಾನ ಇಂದಿನ ನಮಗೂ, ಭಾರತದ ಭವಿಷ್ಯದ ಪೀಳಿಗೆಗೂ ಸದಾ ಸ್ಮರಣೀಯ ಹಾಗೂ ಸ್ಫೂರ್ತಿದಾಯಕ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ| ಎನ್‌.ಜಿ. ಕರೂರ ಹೇಳಿದರು.

Advertisement

ನಗರದ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ಕನ್ನಡ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ನಿಮಿತ್ತ ಹಮ್ಮಿಕೊಂಡಿದ್ದ ಪುಸ್ತಕ ಮಾರಾಟ ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವುದು ಎಂದರೆ ಭಾರತೀಯರಾದ ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.

ನಾನು ಹೈಸ್ಕೂಲ್‌ನಲ್ಲಿ ಓದುವಾಗ 1947, ಆ.15ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸುದ್ದಿ ತಿಳಿಯುತ್ತಲೇ ಸಂಭ್ರಮೋತ್ಸವ, ಎಲ್ಲ ವಿದ್ಯಾರ್ಥಿಗಳು ಧ್ವಜ ಹಿಡಿದುಕೊಂಡು ಬೀದಿ ಬೀದಿಯಲ್ಲಿ ತಿರುಗಾಡಿ ಸಂತಸ, ಹುರುಪು, ಹುಮ್ಮಸನ್ನು ನೆನೆಸಿಕೊಂಡರೆ ಈಗಲೂ ಮೈ ನವಿರೇಳುತ್ತದೆ ಎಂದು ಅನುಭವ ಹಂಚಿಕೊಂಡರು.

ಪುಸ್ತಕ ಮಾರಾಟ ಮಳಿಗೆ ಎಂದರೆ ಕೇವಲ ಪ್ರದರ್ಶನವಲ್ಲ, ಗ್ರಂಥಗಳ ಅಧ್ಯಯನದಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಮಹತ್ವದ ವಿಷಯ ತಿಳಿಯಲು ಸಾಧ್ಯ. ಇಂದಿನ ನವ ಪೀಳಿಗೆ ಹೆಚ್ಚು ಪುಸ್ತಕ ಖರೀದಿಗೆ ತಮ್ಮ ಆತ್ಮವಿಶ್ವಾಸ ಬೆಳೆಸಿಕೊಂಡು, ರಾಷ್ಟ್ರಕಟ್ಟುವ ಹೊಣೆ ನಿಭಾಯಿಸುವಲ್ಲಿ ನಾಡು ಕಟ್ಟುವ ಕೃತಿಗಳ ಓದು ಅಗತ್ಯ ಎಂದರು.

ಬಿಎಲ್‌ಡಿಇ ಸಂಸ್ಥೆ ನಿರ್ದೇಶಕ ಅಶೋಕ ವಾರದ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಯೋಧರ ಚಿತ್ರದಲ್ಲಿ ಹೋರಾಟದ ದಿನ ಅವಲೋಕಿಸಿದರೆ ಮೈ ಜುಂ ಎನ್ನುವಂತಿದೆ. ಮುಂದಿನ ಭವಿಷ್ಯಕ್ಕಾಗಿ ತಮ್ಮ ಬದುಕು ಹಾಗೂ ಭವಿಷ್ಯ ಲೆಕ್ಕಿಸದೇ ಮಾಡಿದ ತ್ಯಾಗ-ಬಲಿದಾನದ ಜೀವನ ನಮಗೆಲ್ಲ ಆದರ್ಶಪ್ರಾಯ ಎಂದರು.

Advertisement

ಈ ವೇಳೆ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ನಿರ್ದೇಶಕ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ಇದ್ದರು. ಬೆಂಗಳೂರಿನ ಸಾಹಿತ್ಯ ಅಕಾಡೆಮಿ ಸಹ ಸಂಪಾದಕ ಡಾ| ಜಿನದತ್ತ ಹಡಗಲಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಎಂ.ಎಸ್‌. ಮದಭಾವಿ ಸ್ವಾಗತಿಸಿದರು. ಬಿ.ಆರ್‌. ಬನಸೋಡೆ ವಚನ ಗಾಯನ ಮಾಡಿದರು. ಡಾ| ವಿ.ಡಿ. ಐಹೊಳ್ಳಿ ನಿರೂಪಿಸಿದರು. ಪ್ರೊ| ಎ.ಬಿ. ಬೂದಿಹಾಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next