ಕಲಬುರಗಿ: ಹಲವಾರು ಕಠಿಣ ರೋಗಗಳಿಗೆ ತಮ್ಮ ಸಂಶೋಧನೆಯ ಹೋಮಿಯೋಪಥಿ ಚಿಕಿತ್ಸೆ ಮೂಲಕ ಗುಣಕಾರಿ ಚಿಕಿತ್ಸೆ ನೀಡಿ ಮನುಕುಲಕ್ಕೆ ಮರೆಯದ ಮಹ್ವತದ ಕಾಣಿಕೆಯನ್ನು ಕ್ರಾಂತಿಕಾರಿ ಸಂಶೋಧಕ ಡಾ| ಸ್ಯಾಮುಯೆಲ್ ಹ್ಯಾನಿಮನ್ ನೀಡಿದ್ದಾರೆ ಎಂದು ವಿಶ್ವನಾಥ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು.
ಇಂದ್ರಸ್ಕೂಲ್ ಆಫ್ ಬ್ಯಾಂಕಿಂಗ್ ಶಾಲೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಹೋಮಿಯೋಪಥಿ ಚಿಕಿತ್ಸಾ ಪದ್ಧತಿ ಸಂಶೋಧಕ ಡಾ| ಸ್ಯಾಮುಯೆಲ್ ಹ್ಯಾನಿಮನ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತಿನಲ್ಲಿ ಹೋಮಿಯೋಪಥಿ ವಿಶಿಷ್ಠ ಚಿಕಿತ್ಸಾ ಶಾಸ್ತ್ರವಾಗಿ, ಶಾಶ್ವತವಾಗಿ ಉಳಿಯುವಂತೆ ಮಾಡಿದ ಡಾ| ಸ್ಯಾಮ್ಯುಯೆಲ್ ಹ್ಯಾನಿಮನ್ ವೈದ್ಯಕೀಯ ಗ್ರಂಥಗಳನ್ನು ಅನುವಾದ ಮಾಡುತ್ತಿದರು.
ಆಗ ಅದರಲ್ಲಿ ಸಿಂಕೋನಾ ಗಿಡದ ಕಹಿಯಾದ ಕಷಾಯ ಕುಡಿದರೆ ಮಲೇರಿಯಾ ರೋಗ ವಾಸಿವಾಗುತ್ತದೆ ಎಂದು ಬರೆದಿದ್ದರು. ಆಗ ಅವರು ಯೋಚಿಸಿ ಪ್ರಪಂಚದಲ್ಲಿ ಕಹಿಯಾಗಿರುವ ಅನೇಕ ಪ್ರದಾರ್ಥಗಳಿವೆ. ಅವುಗಳ ಸೇವೆನೆಯಿಂದ ಏಕೆ ಮಲೇರಿಯಾ ಗುಣ ಹೊಂದುವುದಿಲ್ಲ ಎಂದು ಸಂಶೋಧನೆ ಪ್ರಾರಂಭಿಸಿದರು.
ತಾವೆ ಕಷಾಯ ಕುಡಿದು ಪ್ರಯೋಗ ಮಾಡಿದರು. ಅದೇ ಪ್ರಯೋಗವನ್ನು ಕುಟುಂಬದ ಮೇಲೆ ಮತ್ತು ಸ್ನೇಹಿತರ ಮೇಲೆ ಮಾಡಿದರು. ಔಷಧಿಗಳನ್ನು ಕಂಡುಹಿಡಿದರು. ಹೋಮಿಯೋಪತಿ ಔಷಧಿಗಳಿಂದ ಶಾಶ್ವತವಾಗಿ, ಸುಲಭ ದರದಲ್ಲಿ ಮತ್ತು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸಂಪೂರ್ಣ ಕಾಯಿಲೆ ಗುಣಪಡಿಸಬಹುದು ಎಂದು ಸಾಬೀತು ಪಡಿಸಿ ತೋರಿಸಿದರು ಎಂದರು.
ವಿಶ್ವನಾಥ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಗುರುಶರಣ ಕೆ. ಲಾವಣಿ, ಉಪನ್ಯಾಸಕರಾದ ಮಹೇಶ ಕುಲ್ಕರ್ಣಿ, ಹರೀಶ ಕುಲ್ಕರ್ಣಿ, ಮಂಜುನಾಥ ಬಾಚನಳ್ಳಿ ಹಾಗೂ ಉಚಿತ ತರಬೇತಿ ಪಡೆಯುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಜರಿದ್ದರು.