ಸುಳ್ಯ : ಜಿಲ್ಲೆಯ ಆರ್ಥಿಕ ಬೆಳವಣಿಗೆಯಲ್ಲಿ ರಾಷ್ಟ್ರೀಕೃತ ಬ್ಯಾಂಕಿಗಿಂತಲೂ, ಸಹಕಾರ ಸಂಘಗಳ ಕೊಡುಗೆ ಅಪಾರ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಮಂಡೆಕೋಲು ಹಿ.ಪ್ರಾ.
ಶಾಲಾ ಆವರಣದಲ್ಲಿ ಶನಿವಾರ ಕೃಷಿ ಮೇಳ ಮತ್ತು ವಸ್ತುಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದ ಅವರು, ಸರಕಾರದ ಆಶಯಕ್ಕೆ ತಕ್ಕಂತೆ ಸಹಕಾರಿ ಸಂಘಗಳು ಕೃಷಿಕರ ಅಭ್ಯುದಯಕ್ಕೆ ಕೊಡುಗೆ ನೀಡಿದ್ದು, ಜಿಲ್ಲೆಯ ರೈತರ ಹಿತವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕೃಷಿ ಕ್ಷೇತ್ರದ ಪ್ರಗತಿಯಿಂದ ದೇಶದ ಪ್ರಗತಿಗೂ ಅನುಕೂಲವಾಗುತ್ತದೆ ಎಂದರು.
ಕೃಷಿಯಿಂದ ನಷ್ಟ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ನಾನು ಕೃಷಿ ಹಿನ್ನೆಲೆಯಿಂದಲೇ ಬಂದವನು. ಯಾರು ಕೃಷಿ ತೋಟಕ್ಕೆ ಇಳಿಯುವುದಿಲ್ಲವೋ, ಅವರಿಗೆ ಅದರಿಂದ ಲಾಭ ಸಿಗದು. ಸ್ವಂತ ದುಡಿಮೆಯಿದ್ದರೆ ಕೃಷಿಯಲ್ಲೂ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ. ಕೃಷಿಕ ತ್ಯಾಗಜೀವಿಯಾದರೆ ಸಾಧಕನಾಗಬಹುದು. ನೆಟ್ಟ ಗಿಡ ಫಸಲು ಬರಬೇಕಾದರೆ ಆತ ಶ್ರಮಿಸಬೇಕು. ಭಾರತ ಕೃಷಿ ಸಂಸ್ಕೃತಿ ನಾಡು. ಇಲ್ಲಿನ ಜನರಿಗೆ ಕೃಷಿ ಸಂಸ್ಕೃತಿಯ ಜತೆಗೆ ಭಾವನಾತ್ಮಕ ಸಂಬಂಧವಿದೆ ಎಂದರು.
ಕೃಷಿಕರ ಪರ ಇರುವ ಸಹಕಾರ ಸಂಘಗಳು ಬೆಂಬಲ ಬೆಲೆ ನೀಡುವ ಮುಖಾಂತರ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಯುವ ಪೀಳಿಗೆ ನಗರ ಕೇಂದ್ರಿಕೃತ ಉದ್ಯೋಗದ ಆಸೆಯೊಂದಿಗೆ ಕೃಷಿ ಕಾಯಕದತ್ತಲೂ ಮನಸ್ಸು ಮಾಡಬೇಕು. ಇಲ್ಲದಿದ್ದರೆ ಗ್ರಾಮಗಳು ವೃದ್ಧಾಶ್ರಮಗಳಾಗುವ ಅಪಾಯವಿದೆ ಎಂದು ನುಡಿದರು.
ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಉದ್ಘಾಟಿಸಿ, ಗ್ರಾಮಾಭಿವೃದ್ಧಿಯಲ್ಲಿ ಕೃಷಿ ಸಮುದಾಯದ ಕೊಡುಗೆ ಅಪಾರ. ಸಹಕಾರ ಸಂಘಗಳು ಕೃಷಿ ಕ್ಷೇತ್ರವನ್ನು ಸುಧಾರಿಸುವ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿದ್ದು, ಅದು ಇನ್ನಷ್ಟು ಪಸರಿಸಲಿ ಎಂದರು.
ಸಭಾಧ್ಯಕ್ಷತೆ ವಹಿಸಿದ ಎಸ್. ಅಂಗಾರ ಮಾತನಾಡಿ, ಭವಿಷ್ಯದ ಹಿತವನ್ನು ದೃಷ್ಟಿಯಲ್ಲಿರಿಸಿಕೊಂಡ ನೀತಿಯಿಂದ ದೇಶಕ್ಕೆ ಅನುಕೂಲ. ಅಂತಹ ದೃಷ್ಟಿಕೋನದ ಪರಿಣಾಮ ಜಿಲ್ಲೆಯಲ್ಲಿ ಸಹಕಾರ ಸಂಸ್ಥೆಗಳು ಬೆಳೆದು ನಿಂತು, ಶತ ಸಂಭ್ರಮದಲ್ಲಿವೆ. ಅದು ತಳಮಟ್ಟದ ಜನರ ಜೀವನ ಸುಧಾರಣೆಗೆ ಕಾರಣವಾಗುತ್ತಿದೆ ಎಂದರು.