ಹುಬ್ಬಳ್ಳಿ: ಭೋವಿ ಸಮಾಜದ ಬೆಳವಣಿಗೆಗೆ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ. ಸಮಾಜ ಇನ್ನಷ್ಟು ಬೆಳವಣಿಗೆಯಾಗಬೇಕೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಭವನದಲ್ಲಿ ಬುಧವಾರ ಜಿಲ್ಲಾ ಭೋವಿ ನೌಕರರ ಸಂಘ 2023ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಿದ್ದರಾಮೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಮಾಜಕ್ಕೆ ನಮ್ಮ ಪಕ್ಷ ಹಾಗೂ ಸರಕಾರ ರಾಜಕೀಯ ಪ್ರಾತಿನಿಧ್ಯ ನೀಡಿದೆ. ಸಮಾಜದ ಸಂಘಟನಾ ಶಕ್ತಿ ಇಂತಹ ಕಾರ್ಯಕ್ರಮಗಳಿಂದ ಸಾಧ್ಯ. ಭೋವಿ ಸಮಾಜ ಸಂಘಟಿತ ಸಮಾಜವಾಗಿ ಬೆಳೆಯುತ್ತಿದೆ. ಸಮಾಜದ ನೌಕರರು ಸಮಾಜ ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನನ್ನ ಗೆಲುವಿನಲ್ಲಿ ಸಮಾಜದ ಋಣ-ಬೆಂಬಲ ದೊಡ್ಡದಿದೆ ಎಂದರು.
ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಚೇತನ ಹಿರೆಕೆರೂರು ಹಾಗೂ ಚಂದ್ರಿಕಾ ಮೇಸ್ತ್ರಿ ಗೆಲುವು ಸಮಾಜದ ಶಕ್ತಿ ತೋರುತ್ತದೆ. ಸಮಾಜದ ಪ್ರತಿಭೆಗಳು ಇತರೆ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಬೇಕು. ನೌಕರರ ಸಂಘ ಪ್ರತಿಭೆಗಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಹಾಗೂ ಚಿಂತನೆ ಮಾಡುವಂತಾಗಬೇಕು ಎಂದರು.
ಪಾಲಿಕೆ ಸದಸ್ಯೆ ಚಂದ್ರಕಾ ಮೇಸ್ತ್ರಿ ಮಾತನಾಡಿ, ಸಮಾಜದಲ್ಲಿ ಒಳ ಪಂಗಡಗಳ ಆಧಾರದ ಭಿನ್ನತೆ ಬೇಡ. ಎಲ್ಲರೂ ಭೋವಿ ಸಮಾಜ ಎನ್ನುವ ಭಾವನೆ ಮೂಡಬೇಕು. ನಮ್ಮ ಮೊದಲ ಭಾಷೆ ತೆಲುಗು. ನಂತರ ಕನ್ನಡ, ಮರಾಠಿ, ಹಿಂದಿ ಇತರೆ ಭಾಷೆಗೆ ಪ್ರಾತಿನಿಧ್ಯ ನೀಡಬೇಕು ಎಂದರು. ಉದ್ಯಮಿ ರಮೇಶ ಮಹಾದೇವಪ್ಪನವರ ಮಾತನಾಡಿ, ಸಮಾಜದ ಸಾಧಕರನ್ನು ಗುರುತಿಸುವುದು, ಪ್ರತಿಭೆಗಳಿಗೆ ನೆರವು ಇಂತಹ ಕಾರ್ಯಗಳಿಗೆ ಇಡೀ ಸಮಾಜ ಸ್ಪಂದಿಸಬೇಕು ಎಂದರು.
ಭೋವಿ ಗುರುಪೀಠದ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನಮಠ ಇಮ್ಮಡಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ರವಿ ಗುಂಜೀಕರ, ವಾಕರಸಾ ಪ.ಜಾ ಮತ್ತು ಪಪಂ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಆರ್. ಅದರಗುಂಚಿ, ನಿವೃತ್ತ ಪೊಲೀಸ್ ಅಧಿ ಕಾರಿ ಯಂಕಪ್ಪ ಹಿರೇಮನಿ ಅವರಿಗೆ ಸಿದ್ದರಾಮೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ 2023ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಪಾಲಿಕೆ ಸದಸ್ಯರಾದ ಮಹಾದೇವ ನರಗುಂದ, ಚೇತನ ಹಿರೆಕೆರೂರು, ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ ಕೃಷ್ಣಾಪೂರ, ಎಸ್.ಎಚ್.ನರೇಗಲ್ಲ, ಡಿ.ಹನುಮಂತಪ್ಪ, ಪ್ರಹ್ಲಾದ ಗೆಜ್ಜಿ, ಆನಂದ ಬೇವಿನಕಟ್ಟಿ, ಸುಭಾಸ ಅಳವುಂಡಗಿ, ಕೃಷ್ಣ ಉಣಕಲ್ಲ, ವಿಜಯ ಗುಂಜಿಕರ ಇನ್ನಿತರರಿದ್ದರು.