Advertisement

ಸಾಂಕ್ರಾಮಿಕವಾಗಿ ಹೋರಾಡಿದ್ರೂ ರಾಜೀನಾಮೆ ಇಲ್ಲ

08:40 AM Nov 29, 2017 | Team Udayavani |

ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಸಚಿವ ಕೆ.ಜೆ.ಜಾರ್ಜ್‌ ಮತ್ತು ಧಾರವಾಡದ ಯೋಗೇಶ್‌ಗೌಡ ಹತ್ಯೆ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಬಿಜೆಪಿಯವರು ನಡೆಸುತ್ತಿರುವ ಹೋರಾಟ ರಾಜಕೀಯ ದುರುದ್ದೇಶದ್ದು ಎಂದು ಟೀಕಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಹೋರಾಟವನ್ನು ಸಾಂಕೇತಿಕವಾಗಿಯಾದರೂ ಮಾಡಲಿ, ಸಾಂಕ್ರಾಮಿಕವಾಗಿಯಾದರೂ ನಡೆಸಲಿ. ಸಚಿವರ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಗುರುವಾರ (ನ.30) ನಿವೃತ್ತರಾಗಲಿರುವ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಅವರಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಏನು ವರದಿ ಸಲ್ಲಿಸುತ್ತದೋ ನೋಡೋಣ. ಅದೇ ರೀತಿ ಯೋಗೇಶ್‌ಗೌಡ ಹತ್ಯೆ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಚಿವರ ಮೇಲೆ ಆರೋಪ ಮಾಡುತ್ತಾ ಅವರ ವರ್ಚಸ್ಸಿಗೆ ಮಸಿ ಬಳಿಯಲು ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ಅದು ಸಾಂಕೇತಿಕವಾಗಿರಲಿ, ಇಲ್ಲವೇ ಸಾಂಕ್ರಾಮಿಕವಾಗಿರಲಿ. ಸಚಿವರ ರಾಜೀನಾಮೆ ಪಡೆಯುವ  ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಎಫ್ಐಆರ್‌ ದಾಖಲಾಗಿದೆ, ತನಿಖೆ ನಡೆಯುತ್ತಿದೆ ಎಂಬ ಕಾರಣಕ್ಕೆ ರಾಜೀನಾಮೆ ಪಡೆಯಲು ಸಾಧ್ಯವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಅನಂತಕುಮಾರ್‌ ಹೆಗಡೆ ಸೇರಿ 24 ಮಂದಿ ಕೇಂದ್ರ ಸಚಿವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಮೇಲೆ ಎಫ್ಐಆರ್‌ ದಾಖಲಾಗಿದ್ದು, ಅವರೇನಾದರೂ ರಾಜೀನಾಮೆ ನೀಡಿದ್ದಾರೆಯೇ? ಸಚಿವರಾದ ಜಾರ್ಜ್‌ ಮತ್ತು ವಿನಯ ಕುಲಕರ್ಣಿ ಅವರ ರಾಜೀನಾಮೆ ಕೇಳುವ ಮೊದಲು ಬಿಜೆಪಿಯವರು ಇವರ ರಾಜೀನಾಮೆ ಪಡೆಯಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next