Advertisement

ಗುತ್ತಿಗೆ ನೌಕರರ ಮುಷ್ಕರ: ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯ

05:32 AM Feb 05, 2019 | |

ಸುಬ್ರಹ್ಮಣ್ಯ: ಬಿಎಸ್ಸೆನ್ನೆಲ್‌ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಸಂಸ್ಥೆ ಮೂರು ತಿಂಗಳ ವೇತನ ಬಾಕಿ ಇರಿಸಿದೆ. ಇದಕ್ಕೆ ರೋಸಿಹೋಗಿರುವ ಗುತ್ತಿಗೆ ನೌಕರರು ಫೆ. 1ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ವೇತನ ನೀಡುವಂತೆ ಗುತ್ತಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದ ಪರಿಣಾಮ ಗ್ರಾಮಾಂತರ ಪ್ರದೇಶಗಳ ದೂರವಾಣಿ ಸಂಪರ್ಕಗಳಲ್ಲಿ ವ್ಯತ್ಯಯ ಉಂಟಾಗಿದೆ.

Advertisement

ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ಸಂಸ್ಥೆಯಲ್ಲಿ 20ಕ್ಕೂ ಹೆಚ್ಚು ವರ್ಷಗಳಿಂದ ದಿನಗೂಲಿ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯಲ್ಲಿ 300ಕ್ಕೂ ಅಧಿಕ ಮಂದಿ ವಿವಿಧ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಟೆಲಿಕಾಂ ಇಲಾಖೆ ಇದ್ದಾಗ ದಿನಗೂಲಿ ಕಾರ್ಮಿಕರಾಗಿದ್ದ ಇವರನ್ನು ಬಳಿಕ ನಿಗಮವಾದ ಅನಂತರ ಗುತ್ತಿಗೆ ವ್ಯಾಪ್ತಿಗೆ ಒಳ±‌ಡಿಸಲಾಗಿತ್ತು. ಬಹುತೇಕ ಕೆಲಸಗಳನ್ನು ಇವರು ನಿರ್ವಹಿಸುತ್ತಿದ್ದಾರೆ.

ಖಾಯಂ ನೌಕರರಂತೆ ಬಿಎಸ್ಸೆನ್ನೆಲ್‌ನ ಕೇಂದ್ರ, ಕಚೇರಿಗಳಲ್ಲಿ ವಿನಿಮಯ ಕೇಂದ್ರದ ನಿರ್ವಹಣೆ, ಲೈನ್‌ ದುರಸ್ತಿ, ಎಂಡಿಎಫ್ ಟೆಸ್ಟಿಂಗ್‌, ಎಕ್ಸೆಂಜ್‌ ಹಾಗೂ ಮೊಬೈಲ್‌ ಟವರ್‌ಗಳ ಆಪರೇಟಿಂಗ್‌ ಸೇವೆ ನಡೆಸುತ್ತಿರುವ ಈ ಗುತ್ತಿಗೆ ಕಾರ್ಮಿಕ‌ರಿಗೆ ಗುತ್ತಿಗೆದಾರ ಮೂರು ತಿಂಗಳಿಂದ ವೇತನ ನೀಡಿಲ್ಲ.

ಸಂಸ್ಥೆ ಗಣನೀಯ ಪ್ರಮಾಣದಲ್ಲಿ ಆರ್ಥಿಕ ನಷ್ಟಕ್ಕೆ ಒಳಗಾಗಿರುವುದೇ ವೇತನ ಪಾವತಿ ಬಾಕಿಗೆ ಕಾರಣ ಎನ್ನುವುದು ಉನ್ನತ ಮೂಲಗಳ ಮಾಹಿತಿ. ಈ ಸಿಬಂದಿ ವೇತನ ನಿರ್ವಹಣೆ ಸಂಸ್ಥೆಗೆ ಕಷ್ಟವಾಗುತ್ತಿದೆ. ಇದರಿಂದಾಗಿ ಗುತ್ತಿಗೆ ಕಾರ್ಮಿಕರಿಗೆ ವೇತನ ಪಾವತಿ ಬಾಕಿಯಾಗಿದೆ.

ಗ್ರಾಹಕರಿಗೆ ತೊಂದರೆ
ಗುತ್ತಿಗೆ ನೌಕರರು ಫೆ. 1ರಿಂದ ರಾಜ್ಯಾದ್ಯಂತ ಕೆಲಸ ಸ್ಥಗಿತಗೊಳಿಸಿದ್ದಾರೆ. ದೂರವಾಣಿ ದುರಸ್ತಿಗೆ ಸಿಬಂದಿ ಸಮಸ್ಯೆ ಎದುರಾಗಿದೆ. ಮೊಬೈಲ್‌ ಟವರ್‌ ನಿರ್ವಹಣೆ ಮಾಡುತ್ತಿರುವ ಗುತ್ತಿಗೆ ನೌಕರರು ಗೈರು ಹಾಜರಾಗಿರುವುದರಿಂದ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾ|ಗಳಲ್ಲಿ ದೂರವಾಣಿ, ಮೊಬೈಲ್‌ ಸೇವೆ ಅಸ್ತವ್ಯಸ್ತವಾಗಿದೆ. ಸುಳ್ಯದ ನಾಲ್ಕು, ಪುತ್ತೂರಿನ ಮೂರು, ಬೆಳ್ತಂಗಡಿಯ ಎರಡು ಮೊಬೈಲ್‌ ಟವರ್‌ಗಳಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿವೆ.

Advertisement

1.50 ಲಕ್ಷ ಕಾರ್ಮಿಕರು
ದೇಶದಲ್ಲಿ 1.50 ಲಕ್ಷ ಮಂದಿ ಬಿಎಸ್ಸೆನ್ನೆಲ್‌ ಸಂಸ್ಥೆಯಲ್ಲಿ ಕೇಬಲ್‌, ಹೌಸ್‌ ಕೀಪಿಂಗ್‌, ಸೆಕ್ಯೂರಿಟಿ, ಆಪ್ಟಿಕಲ್‌ ಫೈಬರ್‌ ಕೇಬಲ್‌ ಇತ್ಯಾದಿ ಕೆಲಸದಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ರಾಜ್ಯದಲ್ಲಿ 4,000 ಮತ್ತು ಅವಿಭಜಿತ ದ.ಕ. ಜಿಲ್ಲೆಯಲ್ಲಿ 700 ಕಾರ್ಮಿಕರಿದ್ದಾರೆ. ಅವರೆಲ್ಲರೂ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಬಾಕಿ ವೇತನ ಬಿಡುಗಡೆ ಸಂಬಂಧ ಆಲ್‌ ಇಂಡಿಯನ್‌ ಬಿಎಸ್ಸೆನ್ನೆಲ್‌ ಕ್ಯಾಶುವಲ್‌ ಆ್ಯಂಡ್‌ ಕಾಂಟ್ರಾಕ್ಟ್ ವರ್ಕರ್ ಫೆಡರೇಶನ್‌ ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿದೆ.

ಸಮಸ್ಯೆ ಆಗಿದೆ ಗುತ್ತಿಗೆ ನೌಕರರು ಮುಷ್ಕರಕ್ಕೆ ಇಳಿದ ಹಿನ್ನೆಲೆಯಲ್ಲಿ ಸಂಪರ್ಕ ಕ್ಷೇತ್ರದಲ್ಲಿ ವ್ಯತ್ಯಯಗಳು ಆಗಿವೆ. ಗ್ರಾಹಕರು ತೊಂದರೆ ಅನುಭವಿಸುತ್ತಿರುವ ಕುರಿತು ದೂರುಗಳು ಬಂದಿವೆ. ಉನ್ನತ ಮಟ್ಟದಲ್ಲಿ ಹಣ ಬಿಡುಗಡೆಯಾಗುತ್ತಿಲ್ಲ. ಸಮಸ್ಯೆಗಳಾಗುತ್ತಿರುವ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ.
-ದಿವಾಕರ, ವಿಭಾಗೀಯ ಅಭಿಯಂತರ, ಸುಳ್ಯ

ಹಣ ಬಿಡುಗಡೆಗೆ ಆಗ್ರಹಖಾಸಗಿಯವರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರಕಾರ ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ ಅನ್ನು ಕಡೆಗಣಿಸುತ್ತಿದೆ. ಸುಧಾರಣೆಗೆ ಯಾವುದೇ ಕ್ರಮ ಜರಗಿಸುತ್ತಿಲ್ಲ. ಹೀಗಾಗಿ ಗುತ್ತಿಗೆ ನೌಕರರಿಗೆ ಸಂದಾಯವಾಗಬೇಕಿದ್ದ ಕೋಟಿಗಟ್ಟಲೆ ಮೊತ್ತವನ್ನು ಬಾಕಿ ಇರಿಸಿಕೊಂಡಿದೆ. ಬಾಕಿ ಇರಿಸಿರುವ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. –
ವಸಂತ ಆಚಾರಿ, ಅಧ್ಯಕ್ಷರು, ಬಿಎಸ್ಸೆನ್ನೆಲ್‌ ನಾನ್‌ಪರ್ಮನೆಂಟ್ ವರ್ಕರ್ ಯೂನಿಯನ್‌

Advertisement

Udayavani is now on Telegram. Click here to join our channel and stay updated with the latest news.

Next