Advertisement

Forest: ಗುತ್ತಿಗೆ ವಿಳಂಬ, ಸಂಕಷ್ಟದಲ್ಲಿ ವನ್ಯಜೀವಿ ಹೊರಗುತ್ತಿಗೆ ನೌಕರರು

12:38 AM Jul 12, 2023 | Team Udayavani |

ಕಾರ್ಕಳ: ಮಳೆ ಗಾಳಿಗೆ ಮೈಯೊಡ್ಡಿ ದುಡಿಯುವ ಈ ಬಡ ಜೀವಗಳಿಗೆ ದುಡಿಮೆಯ ಕಾಸು ಕೈಗೆ ಸಿಗುತ್ತಿಲ್ಲ. ಇದು ಕುದುರೆಮುಖ, ವನ್ಯಜೀವಿ ವಿಭಾಗದ 8 ವಿಭಾಗಗಳಲ್ಲಿ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಚಾಲಕರು, ಕಚೇರಿ ಸಿಬಂದಿ, ರಾತ್ರಿ ಕಾವಲುಗಾರರ ಗೋಳು.

Advertisement

ಕಾರ್ಕಳ, ಕೆರೆಕಟ್ಟೆ, ಕುದುರೆಮುಖ, ಬೆಳ್ತಂಗಡಿ, ಹೆಬ್ರಿ (ಸೋಮೇಶ್ವರ) ಕೊಲ್ಲೂರು, ಅಮಾಸೆಬೈಲು, ಸಿದ್ದಾಪುರ ವನ್ಯಜೀವಿ ವಲಯಗಳಲ್ಲಿ ಸುಮಾರು 70ಕ್ಕೂ ಅಧಿಕ ಹೊರಗುತ್ತಿಗೆ ನೌಕರರು ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ, ಹಗಲು-ರಾತ್ರಿ ಕಾವಲು, ಕಾಡುಗಳಲ್ಲಿ ಸವಾರಿ ಮೊದಲಾದ ಕೆಲಸಗಳನ್ನು ಈ ವಲಯದ ನೌಕರರು ಮಾಡುತ್ತಿದ್ದಾರೆ.

ಮುಂದಿನ ತಿಂಗಳು ವೇತನ ಅನುಮಾನ
ಕಳೆದ ಮೇಯಿಂದ ಇವರಿಗೆ ವೇತನವಾಗಿಲ್ಲ. ಹಿಂದೆ ನೀಡಲಾಗಿದ್ದ ಶಿವಮೊಗ್ಗ ಮೂಲದ ಪ್ರೈವೇಟ್‌ ಎಂಪ್ಲಾಮೆಂಟ್‌ ಬ್ಯೂರೋ ಸಂಸ್ಥೆಯ ಗುತ್ತಿಗೆ ಅವಧಿ ಎಪ್ರಿಲ್‌ಗೆ ಮುಕ್ತಾಯಗೊಂಡಿದೆ. ಬಳಿಕ ಗುತ್ತಿಗೆ ಟೆಂಡರ್‌ ನಡೆದಿಲ್ಲ. ಇದರಿಂದ ಮೇ ಹಾಗೂ ಜೂನ್‌ ತಿಂಗಳ ಸಂಬಳ ಸಿಕ್ಕಿಲ್ಲ. ಇನ್ನು ಕೂಡ ಟೆಂಡರ್‌ ಪ್ರಕ್ರಿಯೆ ನಡೆಯದಿರುವುದರಿಂದ ಮುಂದಿನ ತಿಂಗಳು ಕೂಡ ವೇತನ ಕೈ ಸೇರುವ ಸಾಧ್ಯತೆ ಕಡಿಮೆ.

ಮಕ್ಕಳ ನಿರ್ವಹಣೆಗೂ ಕಾಸಿಲ್ಲ
ತಿಂಗಳು ಪೂರ್ತಿ ದುಡಿದು ಶ್ರಮದ ಆದಾಯ ಕೈ ಸೇರದೆ ಶ್ರಮಿಕರ ಕೈಗಳು ಬರಿದಾಗಿವೆ. ಕುಟಂಬ ಪೊರೆಯಲು ಕೈಸಾಲ, ಮೀಟರ್‌ ಸಾಲದ ಮೊರೆ ಹೊಕ್ಕಿದ್ದು, ಈಗ ಅದುವೇ ಶೂಲವಾಗಿ ಇರಿಯುತ್ತಿದೆ. ಅನೇಕರು ವಿವಾಹಿತರು. ಶಾಲಾ ಆರಂಭದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಹಣ ಹೊಂದಿಸಲಾಗದೆ ತೊಂದರೆ ಸಿಲುಕಿದ್ದರು. ನೌಕರರ ಮಕ್ಕಳ ಭವಿಷ್ಯಕ್ಕೂ ಈಗ ಹಣ ಹೊಂದಿಸಲಾಗದೆ ತೊಂದರೆಯಲ್ಲಿದ್ದಾರೆ.

ಚಿಕಿತ್ಸೆ ಕೊಡಿಸಲಾಗದ ಹತಾಶೆ
ನಮ್ಮನ್ನು ನಂಬಿಕೊಂಡು ಕುಟುಂಬ ವರ್ಗವಿದೆ. ಹಿರಿಯರು, ಮಕ್ಕಳು ಜ್ವರ, ಶೀತ, ಇತ್ಯಾದಿ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ದಿನದ ತುತ್ತಿಗೆ ಕೈಯಲ್ಲಿ ಕಾಸಿಲ್ಲದಿರುವಾಗ ಸೂಕ್ತ ಚಿಕಿತ್ಸೆ ಕೊಡಿಸುವುದಾದರೂ ಹೇಗೆ? ಮನೆಯಲ್ಲೂ ಇರಲಾಗದೆ, ಆಸ್ಪತ್ರೆಗೂ ತೆರಳಿ ಚಿಕಿತ್ಸೆ ಕೊಡಿಸಲಾಗದ ಚಿಂತಾಜನಕ ಸ್ಥಿತಿ ನಮ್ಮದಾಗಿದೆ ಎಂದು ನೌಕರರು ಅಳಲು ತೊಡಿಕೊಳ್ಳುತ್ತಿದ್ದಾರೆ.
ಹಳೇ ಸಮಸ್ಯೆಗೆ

Advertisement

ಹೊಸ ಸೇರ್ಪಡೆ
ವನ್ಯಜೀವಿ ವಿಭಾಗದಲ್ಲಿ ಈ ಹಿಂದೆ ದಿನಕೂಲಿ ಕಾರ್ಮಿಕರಾಗಿದ್ದವರನ್ನು 2017ರಲ್ಲಿ ಗುತ್ತಿಗೆ ವ್ಯಾಪ್ತಿಗೆ ತರಲಾಗಿತ್ತು. ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ, ಭರಿಸುವುದು ಕಷ್ಟ ಎಂದು ಗುತ್ತಿಗೆದಾರರು ಕಾರ್ಮಿಕರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ವೇತನವನ್ನು ಈ ಹಿಂದೆ ನೀಡದೆ ವಿಳಂಬಗೊಳಿಸುತ್ತಿದ್ದರು. ಹಣ ಬಿಡುಗಡೆಯಾಗಿದ್ದರು ತಡ ಮಾಡುತ್ತಿದ್ದರು. ಅದರೀಗ ಗುತ್ತಿಗೆ ಆಗದೆ ಮತ್ತಷ್ಟೂ ಸಮಸ್ಯೆಗೆ ಒಳಗಾಗಿದ್ದಾರೆ. ನೌಕರರು ಹೊಟ್ಟೆಪಾಡಿಗೂ ಬವಣೆ ಪಡುತ್ತಿದ್ದಾರೆ.

ಗುತ್ತಿಗೆ ಒಪ್ಪಂದ ಕಾಗದಕ್ಕಷ್ಟೆ
ಗುತ್ತಿಗೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಯಲ್ಲಿದ್ದರೂ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಗುತ್ತಿಗೆ ಒಪ್ಪಂದದಲ್ಲಿ ಸೂಚಿಸಲಾದ ಸೌಲಭ್ಯ ನೀಡುತ್ತೇವೆ ಎಂದು ಹೇಳುತ್ತಾರಾದರೂ ವಾಸ್ತವದಲ್ಲಿ ಸಿಗುತ್ತಿಲ್ಲ. ನನ್ನ ಜೀವಿ ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ, ಸರಕಾರದಿಂದ ಹಣ ಬಿಡುಗಡೆಗೊಂಡ ಹಾಗೇ ನಾನು ಗುತ್ತಿಗೆದಾರರಿಗೆ ಬಿಲ್‌ ಪಾವತಿಸುತ್ತೇವೆ. ಸರಕಾರದ ಮಟ್ಟದಲ್ಲಿ ವಿಳಂಬವಾದಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಾ ಕೈ ತೊಳೆದುಕೊಳ್ಳುತ್ತಿದ್ದಾರೆ.

ಎಲ್ಲದರಿಂದಲೂ ವಂಚಿತ
ನೌಕರರ ದುಡಿಮೆ ಅವಧಿ 8 ತಾಸು. ದುಡಿಮೆಗಿಂತ ಹೆಚ್ಚು ಹೊತ್ತು ಅವರ ಸೇವೆ ಬಳಸಿಕೊಳ್ಳುತ್ತಾರೆ. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನವಿಲ್ಲ. ಕನಿಷ್ಠ ವೇತನವಂತೂ ಇಲ್ಲವೇ ಇಲ್ಲ. 12 ಸಾವಿರ ಖಾತೆಗೆ ಹಾಕುವುದು ಬಿಟ್ಟರೆ, ಭವಿಷ್ಯನಿಧಿ, ಇಎಸ್‌ಐ, ಗುರುತಿನ ಚೀಟಿ, ವೇತನ ಶಿಲ್ಕು ಇದ್ಯಾವುದು ೆ ಸಿಗುತ್ತಿಲ್ಲ. ಚೆಕ್‌ಪೋಸ್ಟ್‌, ಅರಣ್ಯಗಳಲ್ಲಿ ದುಡಿಯುವ ಇವರ ಕೆಲಸಕ್ಕೂ ಭದ್ರತೆಯಿಲ್ಲ. ಜೀವಕ್ಕೂ ಇಲ್ಲ. ಹೊಟ್ಟೆ ಪಾಡಿಗೆ ರಾತ್ರಿ-ಹಗಲು ಕೆಲಸ ಮಾಡುವ ಇವರ ಸೇವೆಗೆ ಗುತ್ತಿಗೆ ಒಪ್ಪಂದದ ಎಲ್ಲ ಸೌಲಭ್ಯ ನೀಡುವತ್ತ ಇಲಾಖೆ, ಸರಕಾರ ಗಮನಿಸಬೇಕೆನ್ನುವುದು ನೌಕರರ ಆಗ್ರಹವಾಗಿದೆ.

ಹೊರಗುತ್ತಿಗೆ ಟೆಂಡರ್‌ ಪ್ರಕ್ರಿಯೆ ಪ್ರೊಸೆಸಿಂಗ್‌ ಹಂತದಲ್ಲಿದೆ. ಟೆಂಡರ್‌ದಾರರು ಹಾಕಿದ ದರದಲ್ಲಿನ ಹೆಚ್ಚಳ ಇತ್ಯಾದಿ ತಾಂತ್ರಿಕ ತೊಂದರೆಗಳಿಂದ ವಿಳಂಬವಾಗಿದೆ. ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುತ್ತೇವೆ. ಸಮಸ್ಯೆಯಾಗದಂತೆ ತುರ್ತು ಕ್ರಮ ಕೈಗೊಳ್ಳುತ್ತೇವೆ.
– ಡಾ| ಕರಿಕಾಳನ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ-ಮಂಗಳೂರು

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next