ಬೆಂಗಳೂರು: ಮದ್ಯದ ಅಮಲಿನಲ್ಲಿ ಅಪಘಾತವೆಸಗಿದ ಗೀತಾವಿಷ್ಣು ಹಾಗೂ ಆತನ ಸ್ನೇಹಿತರನ್ನು ಸಿಸಿಬಿ ಪೊಲೀಸರು ಶನಿವಾರ ಕೂಡ ವಿಚಾರಣೆ ನಡೆಸಿದ್ದಾರೆ. ಶನಿವಾರ ಬೆಳಗ್ಗೆ 10.30ಕ್ಕೆ ಸಿಸಿಬಿ ಪೊಲೀಸರ ಮುಂದೆ ಹಾಜರಾದ ಪ್ರಣಾಮ್ ದೇವರಾಜ್, ಫೈಜಲ್ ಮತ್ತು ಗೀತಾವಿಷ್ಣು ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟರು.
ಮೂವರೂ ಎಂದಿನಂತೆ ಘಟನೆಯಯನ್ನು ವಿವರಿಸಿದ್ದಾರೆ. ಆದರೆ, ಆಸ್ಪತ್ರೆಯಿಂದ ಪರಾರಿಯಾಗಲು ಸಹಾಯ ಮಾಡಿದ ಸಹೋದರಿ ಚೈತನ್ಯ ಹಾಗೂ ಗನ್‌ಮ್ಯಾನ್ ಆನಂದ್ ಎಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ವಿಷ್ಣು ಬಾಯಿ ಬಿಟ್ಟಿಲ್ಲ. ಈ ಇಬ್ಬರ ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ.
ಆದರೆ, ಗೀತಾವಿಷ್ಣು ಕಾರಿನಲ್ಲಿ ಗಾಂಜಾ ಪತ್ತೆಯಾದ ಬಗ್ಗೆ ವಿನೋದ್ ಮಾಹಿತಿ ನೀಡಿದ್ದಾನೆ. ಗಾಂಜಾ ಎಲ್ಲಿ ಸಿಕ್ಕಿದೆ ಹಾಗೂ ಯಾರು ಗಾಂಜಾ ಸೇವನೆ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾನೆ. ವಿನೋದ್ ನೀಡಿದ ಮಾಹಿತಿ ಆಧರಿಸಿ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಮಾದಕ ವಸ್ತು ಪತ್ತೆಯಾದ ಪ್ರಕರಣದಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಯಿದೆ.
ಜಂಟಿ ಆಯುಕ್ತರ ಭೇಟಿಯಾದ ನಟ: ಪ್ರಕರಣ ಸಂಬಂಧ ಪದೇ ಪದೆ ತಮ್ಮ ಪುತ್ರ ಪ್ರಣಾಮ್ ದೇವರಾಜ್‌ನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಕರೆಸಿಕೊಳ್ಳುತ್ತಿರುವುದರಿಂದ ಅಸಮಾಧಾನಗೊಂಡಿರುವ ಹಿರಿಯ ನಟ ದೇವರಾಜ್, ಶನಿವಾರ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಘಟನೆ ವೇಳೆ ತಮ್ಮ ಪುತ್ರ ಇಲ್ಲದಿದ್ದರೂ ಪದೇ ಪದೆ ವಿಚಾರಣೆಗೆ ಕರೆದೊಯ್ಯುತ್ತಿರುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಕಾರಾತ್ಮಕವಾಗಿ ಸ್ಪಂದಿಸಿರುವ ಜಂಟಿ ಆಯುಕ್ತ ಸತೀಶ್ ಕುಮಾರ್, ನಿಮ್ಮ ಮಗನನ್ನು ಯಾವುದೇ ಕಾರಣಕ್ಕೂ ಬಂಧಿಸುವುದಿಲ್ಲ. ತನಿಖೆಗೆ ಸಹಕರಿಜಿದರೆ ಸಾಕು ಎಂದು ಭರವಸೆ ನೀಡಿದ್ದಾರೆ. ಈ ನಡುವೆ ಮಲ್ಯ ಆಸ್ಪತ್ರೆಯಿಂದ ವಿಷ್ಣು ಪರಾರಿಯಾಗಲು ಸಹಾಯ ಮಾಡಿದ ವಿನೋದ್‌ನನ್ನು ಬಂಧಿಸಿದ ಪೊಲೀಸರು ನಂತರ ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಆಸ್ಪತ್ರೆಯಿಂದ ಪರಾರಿಯಾಗಲು ಬಳಸಿದ ವೊಲ್ವೋ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಸ್ಥಳ ಮಹಜರು ಸಾಧ್ಯತೆ: ಇನ್ನು ಘಟನೆ ನಡೆದ ಸ್ಥಳದ ಮಹಜರು ನಡೆಸಬೇಕಿರುವ ಸಿಸಿಬಿ ಪೊಲೀಸರು, ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ. ಆರೋಪಿಗಳು ಕಾರು ಚಾಲನೆ ಮಾಡಿಕೊಂಡು ಯಾವ ಮಾರ್ಗದಲ್ಲಿ ಬಂದರು, ಘಟನೆ ಎಲ್ಲಿ ನಡೆಯಿತು, ಘಟನೆ ನಡೆದ ನಂತರ ಏನೆಲ್ಲಾ ಬೆಳವಣಿಗೆಗಳು ಆದವು ಎಂಬ ಬಗ್ಗೆ ಪರಿಶೀಲಿಸಲಿದ್ದಾರೆ.