Advertisement

ರೈತ ಸಂಘದಿಂದ ನಿರಂತರ ಹೋರಾಟ

01:30 PM Jul 29, 2017 | |

ಶಿರಾಳಕೊಪ್ಪ: ನರಗುಂದ- ನವಲಗುಂದದಲ್ಲಿ ಸರ್ಕಾರ ರೈತರ ಮೇಲೆ ಗೋಲಿಬಾರ್‌ ಮಾಡಿದಾಗ ರೈತಸಂಘ ಉದಯವಾಯಿತು. 1981ರಲ್ಲಿ ಶಿವಮೊಗ್ಗದಲ್ಲಿ ಜನಿಸಿದ ರೈತಸಂಘ ಎಚ್‌ ಎಸ್‌. ರುದ್ರಪ್ಪ ಮತ್ತು ಎಂಡಿ ಸುಂದರೇಶ್‌ ಅವರ ನೇತೃತ್ವದಲ್ಲಿ ಸ್ಥಾಪನೆ ಆಯಿತು. ನಂತರದ ದಿನಗಳಲ್ಲಿ ನಂಜುಂಡಸ್ವಾಮಿ ಹಾಗು ಕೆ.ಟಿ. ಗಂಗಾಧರ್‌ ಅವರ ನೇತೃತ್ವದಲ್ಲಿ ಸದೃಢವಾಗಿ ಬೆಳೆದು ನಿಂತಿದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಜಯಪ್ಪ
ಗೌಡ ತಿಳಿಸಿದರು.

Advertisement

ತಾಲೂಕಿನ ನರಸಾಪುರ, ಅಗ್ರಹಾರ ಮುಚಡಿ ಹಾಗು ಶಂಕ್ರೀಕೊಪ್ಪ ಗ್ರಾಮಗಳಲ್ಲಿ ರೈತ ಸಂಘದ ಗ್ರಾಮ ಘಟಕಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರು ಚಳುವಳಿ ಮಾಡಲು ಪ್ರಾರಂಭಿಸಲು 25 ವರ್ಷಗಳ ಹಿಂದೆ ಸಹಕಾರ ಸಂಘಗಳು ರೈತರಿಗೆ 600ರೂ ಸಾಲಕೊಟ್ಟು 3ಸಾವಿರ ರೂ ಬಡ್ಡಿ ಹಾಕುತ್ತಿದ್ದವು. ಸಾಲ ಮರುಪಾವತಿ ಮಾಡದಿದ್ದಾಗ ಮನೆಯನ್ನು ಜಪ್ತಿ ಮಾಡುತ್ತಿದ್ದರು. ಅಂದು ಅಲ್ಲೊಬ್ಬ ಇಲ್ಲೊಬ್ಬ ರೈತರು ಪ್ರತಿಭಟನೆ ಮಾಡಿ ಹರಾಜನ್ನು ತಡೆ ಹಿಡಿಯುತ್ತಿದ್ದರು. ನಂತರ ಸರ್ಕಾರ ಕೆಲವೊಂದು ಪ್ರಕರಣಗಳಲ್ಲಿ ರೈತರನ್ನು ಅಮಾನುಷವಾಗಿ ನಡೆಸಿಕೊಂಡು ಗೋಲಿಬಾರ್‌ ಮಾಡಿದ ಘಟನೆಗಳು ನಡೆದಿದ್ದವು. ಆದರೆ ಇದಕ್ಕೆ ಎದೆಗುಂದದೇ ಈಗ ರೈತಸಂಘ ಸದೃಢವಾಗಿ ಬೆಳೆದು ನಿಂತಿದೆ ಎಂದರು.

ಇಂದು ರೈತರು ರಾಜಕಾರಣಿಗಳ ಕೈಗೊಂಬೆ ಆಗಿ ಅವರು ತೋರಿಸುತ್ತಿರುವ ಆಮಿಷದಿಂದ ರೈತ ಸಂಘಕ್ಕೆ ಬಂದರೆ ನಮ್ಮನ್ನು ಯಾರಾದರೂ ಗುರುತಿಸುತ್ತಾರೆ ಎಂಬ ಆತಂಕದಿಂದ ರೈತಸಂಘದ ಜೊತೆ ಹೋರಾಟದಲ್ಲಿ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಇರುವ ರೈತರು ತಮ್ಮ ಯಾವದೇ ಕೆಲಸ ಕಾರ್ಯಗಳಿಗೆ ರಾಜಕಾರಣಿಗಳ ಮನೆಗೆ ಸುತ್ತುವಂತಾಗಿದೆ. ಆದರೆ ಅದೇ ರೈತರು ರೈತ ಸಂಘಟನೆಯಲ್ಲಿ ಗುರುತಿಸಿಕೊಂಡು ಹಸಿರು ಶಾಲು ಹಾಕಿಕೊಂಡಿದ್ದರೆ ರಾಜಕಾರಣಿಗಳ ಮನೆಸುತ್ತುವುದು ತಪ್ಪುತ್ತಿತ್ತು ಎಂದರು.

ರೈತಸಂಘದ ತಾಲೂಕು ಕಾರ್ಯದರ್ಶಿ ಕೊಟ್ರೇಶ್‌ ಮಾತನಾಡಿ, ಈ ಹಿಂದೆ ಸಾಕಷ್ಟು ಹಿರಿಯ ರೈತರು ರೈತ ಸಂಘಟನೆಯಲ್ಲಿ ಇದ್ದರು. ಆದರೆ ರಾಜಕೀಯ ಗೊಂದಲದಿಂದ ಅವರು ಮರೆ ಆಗುತ್ತಿದ್ದಾರೆ. ರೈತಸಂಘ ಕಳೆದ ವರ್ಷ ಸಾಕಷ್ಟು ರೈತರಿಗೆ ಮೋಸ ಮಾಡಿದ ನಕಲಿ ಬೀಜ ಹಾಗು ಇತರ ಸಂಗತಿಗಳ ಬಗ್ಗೆ ಹೋರಾಟ ಮಾಡಿ ನ್ಯಾಯ ದೊರಕಿಸಿದೆ ಎಂದರು. ಸಭೆಯಲ್ಲಿ ರೈತಸಂಘದ ಗೌರವಾಧ್ಯಕ್ಷ ಈರಣ್ಣ, ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಪುಟ್ಟನಗೌಡ ಮತ್ತಿತರರು ಇದ್ದರು.

ಗ್ರಾಮ ಸಮಿತಿ: ನರಸಾಪುರ ಗ್ರಾಮಸಮಿತಿಯ ಅಧ್ಯಕ್ಷರಾಗಿ ಪ್ರದೀಪ್‌, ಗೌರವಾಧ್ಯಕ್ಷರಾಗಿ ಬಸವರಾಜಪ್ಪ, ಉಪಾಧ್ಯಕ್ಷರಾಗಿ ಕತುಬುದ್ದೀನ್‌, ಕುಮಾರ್‌ , ಮಂಜುನಾಥ, ಕಾರ್ಯದರ್ಶಿಯಾಗಿ ವಿಶ್ವನಾಧ, ಖಜಾಂಚಿಯಾಗಿ ಜಯಪ್ಪ, ಪಾಪುಸಾಬ್‌ ಆಯ್ಕೆ ಆದರು. ಅಗ್ರಹಾರ ಮುಚಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಬಸವರಾಜಪ್ಪ, ಕಾರ್ಯದರ್ಶಿ ಮಂಜಪ್ಪ, ಉಪಾಧ್ಯಕ್ಷ ಶಿವಪ್ಪ ಬಣಕಾರ್‌, ಸಂಚಾಲಕ ಹೂವಪ್ಪ ಹಾಗೂ ಇತರರು ಆಯ್ಕೆ ಆದರು. ಶಂಕ್ರೀಕೊಪ್ಪ ಗ್ರಾಮ ಸಮಿತಿ ಅಧ್ಯಕ್ಷರಾಗಿ ನಾಗಪ್ಪ ಗುಗ್ರೇರ್‌, ಉಪಾಧ್ಯಕ್ಷ ಶೇಖನಗೌಡ, ಖಜಾಂಚಿ ಚಂದ್ರಪ್ಪ ಎಸ್‌ .ಕೆ. ಆಯ್ಕೆ ಆದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next