Advertisement

ಜಿಲ್ಲೆಯಲ್ಲಿ ಸತತ ಮಳೆ: ರೈತರ ಮೊಗದಲ್ಲಿ ಸಂತಸ

04:17 PM May 15, 2018 | |

ಚಿಕ್ಕಮಗಳೂರು: ಸತತ ಬರಗಾಲಕ್ಕೆ ತುತ್ತಾಗಿದ್ದ ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಕಳೆದ 2-3 ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದು ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ.

Advertisement

ರಾಜ್ಯ ವಿಧಾನಸಭಾ ಚುನಾವಣೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತರೊಂದಿಗೆ ಸಂತಸ ಹಂಚಿಕೊಂಡ ರೈತರು ಇದೇ ರೀತಿ ಇನ್ನೂ ಒಂದೆರಡು ದಿನ ಉತ್ತಮ ಮಳೆಯಾದರೆ ನಮಗೆ ಬಹಳ ಉಪಯೋಗವಾಗುತ್ತದೆ. ಬೆಳೆಗೆ ಅನುಕೂಲವಾಗದಿದ್ದರೂ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ ಎಂದರು. 

ಈ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಕೆರೆಕಟ್ಟೆಗಳಲ್ಲಿ ಸ್ವಲ್ಪ ನೀರನ್ನು ಕಾಣುವಂತಾಗಿದೆ. ಕಳಸಾಪುರದ ದೊಡ್ಡಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಕಳೆದ 15 ವರ್ಷಗಳಿಂದ ಈ ಕೆರೆಗೆ ಇಷ್ಟು ಪ್ರಮಾಣದ ನೀರು ಬಂದಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. 

ಕಳೆದ ನಾಲ್ಕು ವರ್ಷಗಳಿಂದ ಮಳೆಯಿಲ್ಲದೆ ಬರದ ದವಡೆಗೆ ಸಿಲುಕಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಈ ಭಾಗದಲಲ್ಲಿ ನಿರ್ಮಾಣವಾಗಿತ್ತು. ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗಿದ್ದು, ಬರಡು ಭೂಮಿಯಂತಾಗಿದ್ದ ಕೆರೆ ಕಟ್ಟೆಗಳಲ್ಲಿ ಅಲ್ಪಸ್ವಲ್ಪ ನೀರು ತುಂಬಿಕೊಂಡಿದೆ.

ಕಳೆದ ಹತ್ತುವರ್ಷಗಳಿಂದ ಸಖರಾಯಪಟ್ಟಣ ಹಾಗೂ ಲಕ್ಯಾ ಹೋಬಳಿಯ ಸುತ್ತಮುತ್ತ ಮಳೆಯಾಗದೆ. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇದೆ. ಎಷ್ಟೇ ಆಳದವರೆಗೂ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದ ಪರಿಸ್ಥಿತಿಗೆ ತಲುಪಿದೆ. ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗಿದ್ದರಿಂದ ಎಷ್ಟೋ ವರ್ಷಗಳಿಂದ ನೀರೆ ಕಾಣದ ಕೆರೆಕಟ್ಟೆಗಳಲ್ಲಿ ಅಲ್ಪಸ್ವಲ್ಪ ನೀರು ತುಂಬಿ ಭೂಮಿ ಹಸನಾಗಿರುವುದು ಈ ಭಾಗದ ರೈತರಲ್ಲಿ ಮಂದಹಾಸ ಮೂಡಿಸಿದೆ.

Advertisement

ಮೂರು ದಿನಗಳಿಂದ ಮಳೆಯಾದ ಹಿನ್ನೆಲೆಯಲ್ಲಿ ಅನೇಕ ರೈತರು ಈಗಾಗಲೇ ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ. ಈಶ್ವರಹಳ್ಳಿ ಕೆರೆಯಲ್ಲಿ ಸ್ಪಲ್ಪ ಮಟ್ಟಿನ ನೀರು ಶೇಖರಣೆಯಾಗಿದೆ. ಇನ್ನು ಮೂರು, ನಾಲ್ಕು ದಿನ ಮಳೆಯಾದರೆ ರೈತರಿಗೆ ಅನುಕೂಲವಾಗಲಿದೆ ಎಂದರು.
 
ಚುನಾವಣೆಗಿಂತ ಊರಿನಲ್ಲಿ ಮಳೆಯಾಗಿರುವುದರಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅನೇಕ ಜನರು ಭೂಮಿ ಬಿತ್ತನೆಗೆ ತೆರಳಿದ್ದು, ಸಂಜೆ ಸಮಯದಲ್ಲಿ ಮತದಾನ ಮಾಡಲಿದ್ದಾರೆ. ಭೂಮಿ ಹಸನಾಗಿದ್ದು, ಹತ್ತಿ, ಹೆಸರು, ಜೋಳ ಬೆಳೆ ಬೆಳೆಯಲು ರೈತರು ಭೂಮಿ ಅಣಿಗೊಳಿಸುತ್ತಿದ್ದಾರೆ ಎಂದರು. 

ಹುಲಿಕೆರೆ ಸುತ್ತಮುತ್ತಲ ಭಾಗದಲ್ಲಿ ಗ್ರಾಮ ಪಂಚಾಯತ್‌ ವತಿಯಿಂದ ಟ್ಯಾಂಕರ್‌ ಮೂಲಕ ನೀರು ನೀಡಲಾಗುತ್ತಿತ್ತು. ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಟ್ಯಾಂಕರ್‌ ಮೂಲಕ ನೀರು ನೀಡುವುದನ್ನು ನಿಲ್ಲಿಸಲಾಗಿದೆ. ಇದೇ ರೀತಿ ಮಳೆ ಮುಂದೂವರೆದರೆ ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿ ನೀರು ಶೇಖರಣೆಯಾಗಲಿದೆ. ಜನ ಜಾನುವಾರುಗಳಿಗೆ ಕುಡಿಯಲು ನೀರು ಲಭ್ಯವಾಗಲಿದೆ ಎಂದು ಹುಲಿಕೆರೆ ರತ್ನಾಕರ್‌
ಸಂತಸ ವ್ಯಕ್ತಪಡಿಸಿದರು.

ನಾಲ್ಕು ವರ್ಷಗಳಿಂದ ಮಳೆಯಿಲ್ಲದೆ. ಎತ್ತರಕ್ಕೆ ಬೆಳೆದಿದ್ದ ತೆಂಗು ಹಾಗೂ ಅಡಿಕೆ ಮರಗಳು ನಾಶವಾಗಿವೆ. ಮಳೆಯಿಲ್ಲದ ಕಾರಣ ರೈತರು ಜಮೀನುಗಳತ್ತ ಮುಖ ಹಾಕಿರಲಿಲ್ಲ, ಈಗ ಉತ್ತಮ ಮಳೆಯಾಗುತ್ತಿರುವುದರಿಂದ ಈ ಬಾರಿ ಬೆಳೆ ಬೆಳೆಯ ಬಹುದು ಬಹುದು ಎಂಬ ವಿಶ್ವಾಸ ಮೂಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next