Advertisement

ಮುಂಬಯಿ,ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮುಂದುವರೆದ ಮಳೆಯ ಆರ್ಭಟ

06:30 PM Jul 05, 2020 | Sriram |

ಮುಂಬಯಿ: ಮುಂಬಯಿ, ಥಾಣೆ ಮತ್ತು ಕೊಂಕಣ ಮಹಾರಾಷ್ಟ್ರದ ಇತರ ಭಾಗಗಳಲ್ಲಿ ರವಿವಾರ ಸತತ ಮೂರನೇ ದಿನವೂ ಭಾರೀ ಮಳೆಯಾಗಿದೆ.

Advertisement

ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಹಾನಗರದ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮುಂದಿನ 24 ಗಂಟೆಗಳಲ್ಲಿ ನಗರ ಮತ್ತು ಉಪನಗರಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಮಧ್ಯ ಮುಂಬಯಿಯ ಹಿಂದ್‌ಮಮಾತಾ ಮತ್ತು ಪೂರ್ವ ಉಪನಗರ ಚೆಂಬೂರು ಸೇರಿದಂತೆ ನಗರದ ಕೆಲವು ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ.

ದಕ್ಷಿಣ ಮುಂಬಯಿಯ ಕೊಲಾಬಾ ವೀಕ್ಷಣಾಲಯವು ರವಿವಾರ ಬೆಳಗ್ಗೆ 8.30ರ ವರೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ 129.6 ಮಿ.ಮೀ. ಮಳೆ ದಾಖಲಿಸಿದರೆ, ಪಶ್ಚಿಮ ಉಪನಗರಗಳ ಸಾಂತಾಕ್ರೂಜ್‌ ಹವಾಮಾನ ಕೇಂದ್ರವು ಈ ಅವಧಿಯಲ್ಲಿ 200.8 ಮಿ.ಮೀ. ಮಳೆಯನ್ನು ದಾಖಲಿಸಿದೆ ಎಂದು ಐಎಂಡಿ ತಿಳಿಸಿದೆ.

Advertisement

ಸಯಾನ್‌, ದಾದರ್‌, ಮಿಲನ್‌ ಸಬ್‌ವೇ, ಕಾಂದಿವಲಿ, ಮಲಾಡ್‌, ಗೋರೆಗಾಂವ್‌ ಮತ್ತು ದಹಿಸರ್‌ ಪ್ರದೇಶಗಳಲ್ಲಿ ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.

ನಿರಂತರ ಮಳೆಯಿಂದಾಗಿ ಮೀಠಿ ನದಿಯ ನೀರಿನ ಮಟ್ಟವೂ ಏರುತ್ತಿದೆ. ವಿವಿಧೆಡೆ ಕಟ್ಟಡಗಳ ಪಾರ್ಶ್ವ ಭಾಗ ಮತ್ತು ಗೋಡೆ ಕುಸಿತದಂತಹ ಘಟನೆಗಳು ಕೂಡ ವರದಿಯಾಗಿವೆ.

ನೆರೆಯ ಥಾಣೆ, ನವಿಮುಂಬಯಿ ಮತ್ತು ಸಿಂಧುದುರ್ಗ ಸೇರಿದಂತೆ ಕೊಂಕಣ ಪ್ರದೇಶದ ಇತರ ಕೆಲವು ಪ್ರದೇಶಗಳಲ್ಲೂ ಭಾರೀ ಮಳೆ ಮುಂದುವರಿದಿದೆ.

ಸಿಂಧುದುರ್ಗದಲ್ಲಿ ನದಿಗಳು ಪ್ರವಾಹಕ್ಕೆ ಸಿಲುಕಿದ್ದು, ಭತ್ತದ ಗದ್ದೆಗಳು ನೀರಿನ ಅಡಿಯಲ್ಲಿ ಮುಳುಗಿವೆ ಮತ್ತು ಹೆಚ್ಚಿನ ವೇಗದ ಗಾಳಿಯಿಂದಾಗಿ ಮರ ಕುಸಿತದಂತಹ ಘಟನೆಗಳು ವರದಿಗಳು ವರದಿಯಾಗಿವೆ. ಮುಂಬಯಿ ಗೋವಾ ಹೆದ್ದಾರಿಯ ಮೊರ್ಗಾಂವ್‌ನಲ್ಲಿ ಭೂಕುಸಿತದ ಘಟನೆ ವರದಿಯಾಗಿದೆ. ಅದೇ, ಉಪನಗರ ಬಾಂದ್ರಾದಲ್ಲಿ ಶಿಥಿಲಗೊಂಡ ಕಟ್ಟಡದ ಒಂದು ಭಾಗ ಕುಸಿದಿದೆ ಆದರೆ ಈ ಎರಡೂ ಘಟನೆಗಳಲ್ಲಿ ಯಾರೂ ಗಾಯಗೊಂಡಿಲ್ಲ.

ಹವಾಮಾನ ಇಲಾಖೆಯ ಕಡೆಯಿಂದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಜನರಿಗೆ ಮನೆಗಳಿಂದ ಹೊರಬಾರದಂತೆ ಮನವಿ ಮಾಡಲಾಗಿದೆ. ಹೈಟೈಡ್‌ ಹಿನ್ನೆಲೆಯಲ್ಲಿ ಜನರಿಗೆ ಕಡಲ ತೀರಗಳಿಂದ ದೂರ ಉಳಿಯುವಂತೆಯೂ ಕೇಳಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next