ಶನಿವಾರ ರಾತ್ರಿಯಿಂದ ರವಿವಾರ ಮಧ್ಯಾಹ್ನದವರೆಗೆ ನಿರಂತರವಾಗಿ ಸುರಿಯುತ್ತಿದ್ದ ಮಳೆ ಅನಂತರ ಸ್ವಲ್ಪ ಬಿಡುವು ಪಡೆದಿತ್ತು. ಸಂಜೆಯ ವೇಳೆಗೆ ಮತ್ತೆ ಮಳೆ ಸುರಿಯಲಾರಂಭಿಸಿದೆ.
Advertisement
ದ.ಕ. ಜಿಲ್ಲೆಯ ಮಂಗಳೂರು ನಗರ, ಹಳೆಯಂಗಡಿ, ಮೂಲ್ಕಿ, ಕಿನ್ನಿಗೋಳಿ, ಕಟೀಲು, ಮೂಡಬಿದಿರೆ ಸಹಿತತಾಲೂಕಿನಾದ್ಯಂತ ಮಳೆಯ ರಭಸ ಇಳಿಮುಖಗೊಂಡು ಸಾಧಾರಣ ಮಳೆಯಾಗಿದೆ. ಬೆಳ್ತಂಗಡಿ, ಮಡಂತ್ಯಾರು, ಮಚ್ಚಿನ, ಕಡಬದಲ್ಲಿ ಸಾಧಾರಣ ಮಳೆಯಾಗಿದೆ. ಸುಳ್ಯದಲ್ಲಿ ಮಧ್ಯಾಹ್ನ ವೇಳೆ ಮಳೆ ಕಡಿಮೆಯಾಗಿತ್ತು. ಸಂಜೆಯ ವೇಳೆ ಮಳೆಯಾಗಿದೆ. ಪುತ್ತೂರು ಪರಿಸರದಲ್ಲಿ ಉತ್ತಮ ಮಳೆಯಾಗಿದೆ.
ಕಳೆದ 2 ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಮಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಸೃಷ್ಟಿಯಾಗಿದ್ದ ಕೃತಕ ನೆರೆ ರವಿವಾರ ಸಹಜ ಸ್ಥಿತಿಗೆ ತಲುಪಿದೆ. ಕೃತಕ ನೆರೆ ಉಂಟಾಗಿದ್ದ ಪ್ರದೇಶಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಾರ್ಯಾಚರಣೆ ನಡೆಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಟ್ಟಿದೆ. ಜಿಲ್ಲೆಯ ತಗ್ಗು ಪ್ರದೇಶಗಳಲ್ಲೂ ನೀರು ಇಳಿಮುಖಗೊಂಡಿದೆ. ಜಿಲ್ಲೆಯಲ್ಲಿ ಇನ್ನೂ 2-3 ದಿನ ಉತ್ತಮ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಉಡುಪಿ ಜಿಲ್ಲೆಯಲ್ಲೂ ಮಳೆ ಕಡಿಮೆಯಾಗಿದೆ. ಉಡುಪಿ ನಗರ ಸಹಿತ ಹಲವೆಡೆಗಳಲ್ಲಿ ಆಗಾಗ್ಗೆ ಲಘು ಮಳೆಯಾಗಿದೆ. ಕಾಪು ಪರಿಸರದಲ್ಲಿ ಸಂಜೆ ವೇಳೆ ಉತ್ತಮ ಮಳೆಯಾಗಿದೆ. ಶಾಲೆಗಳಿಗೆ ರಜೆ ಪರಿಸ್ಥಿತಿ ಅರಿತು ನಿರ್ಧಾರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ
ಅಧಿಕಾರವನ್ನು ಆಯಾ ತಹಶೀಲ್ದಾರರುಗಳಿಗೆ ವಹಿಸಿಕೊಡಲಾಗಿದೆ. ತಾಲೂಕುಗಳ ತಹಶೀಲ್ದಾರರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಾಲೋಚನೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿ ರಜೆ ಘೋಷಣೆಯನ್ನು ನಿರ್ಧರಿಸಲಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ತಿಳಿಸಿದ್ದಾರೆ.