Advertisement

ನಿರಂತರ ಸುರಿದ ಮಳೆ: ವಿವಿಧೆಡೆ ತಗ್ಗು  ಪ್ರದೇಶ ಜಲಾವೃತ 

09:59 AM Jul 08, 2018 | Team Udayavani |

ಮಹಾನಗರ: ಕೆಲವು ದಿನಗಳಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದ ನಗರದಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ಭಾರೀ ಮಳೆ ಪ್ರಾರಂಭವಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ಮುಂಜಾಗೃತೆ ದೃಷ್ಟಿಯಿಂದ ನಗರದ ಬಹುತೇಕ ಶಾಲೆಗಳಿಗೆ ರಜೆ ಘೊಷಿಸಲಾಗಿತ್ತು. ಜೋರಾದ ಮಳೆಗೆ ನಗರದ ಗಾಂಧಿನಗರದ ಸರಕಾರಿ ಶಾಲೆ, ಬಾವುಟ ಗುಡ್ಡೆ ಗ್ರಂಥಾಲಯ ಬಳಿ ಕಾಂಪೌಂಡೊಂದು ಕುಸಿದಿದೆ. ಅಲ್ಲದೆ, ಪುತ್ತಿಗೆ ಮೂಡಬಿದಿರೆಯಲ್ಲಿ ಗುಡ್ಡ ಕುಸಿತ ಉಂಟಾದ ವರದಿಯಾಗಿದೆ.

Advertisement

ಟ್ರಾಫಿಕ್‌ ಜಾಮ್‌
ಮಳೆಗೆ ನಗರದ ಎ.ಜೆ., ಆಸ್ಪತ್ರೆ ರಸ್ತೆ, ಉರ್ವಸ್ಟೋರ್‌, ಕೂಳೂರು, ಕೊಟ್ಟಾರ, ಮೇರಿಹಿಲ್‌, ಸಹಿ ತ ವಿವಿಧ ಪ್ರದೇಶಗಳ ರಸ್ತೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಅಲ್ಲದೆ, ನಂತೂರು, ಕುಂಟಿಕಾನ, ಲಾಲ್‌ ಬಾಗ್‌, ಪಿವಿಎಸ್‌, ಜ್ಯೋತಿ, ಕಂಕನಾಡಿ, ಪಂಪ್‌ವೆಲ್‌, ಸುರತ್ಕಲ್‌, ಕೂಳೂರು, ಬಂಟ್ಸ್‌ ಹಾಸ್ಟೆಲ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಪರದಾಡಿದರು.

ಗಲೀಜು ನೀರು ರಸ್ತೆಗೆ
ನಗರದ ಕೊಟ್ಟಾರ ಕ್ರಾಸ್‌, ಬಂಟ್ಸ್‌ ಹಾಸ್ಟೆಲ್‌, ಕದ್ರಿ ಚರ್ಚ್‌ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮ್ಯಾನ್‌ಹೋಲ್‌ಗ‌ಳಿಂದ ಒಳಚರಂಡಿ ಗಲೀಜು ನೀರು ರಸ್ತೆಗೆ ಹರಿದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸಿದರು.

ಗ್ರಾಮಾಂತರದಲ್ಲೂ ಮಳೆ ‌ಹಾನಿ
ಹಳೆಯಂಗಡಿ: ನಿರಂತರವಾಗಿ ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ ಗೊಂಡಿದ್ದು, ಕೆಲವಡೆ ಕೃತಕ ನೆರೆಯುಂಟಾಗಿದೆ. ಹಲವೆಡೆ ರಸ್ತೆಯಲ್ಲಿ ನೀರು ನಿಂತು ಸಂಪರ್ಕ ಕಡಿತಗೊಂಡಿದೆ.

ಕೃತಕ ನೆರೆ
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹಳೆಯಂಗಡಿ ಹಾಗೂ ಪಡುಪಣಂಬೂರು ಪರಿಸರದ ಕೆಲವೊಂದು ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದೆ. ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕಿರು ಸೇತುವೆ ಬಳಿಯಲ್ಲಿನ ತಗ್ಗು ಪ್ರದೇಶದ ಸುತ್ತಮುತ್ತ ಮಳೆ ನೀರಿನಿಂದ ಜಲಾವೃತಗೊಂಡಿದೆ. ಕೆಲವೊಂದು ಗದ್ದೆಗಳಿಗೆ ಮಣ್ಣು ತುಂಬಿಸಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೇ ತೊಂದರೆ ಉಂಟಾಗಿರುವುದು ಕಂಡು ಬಂದಿದೆ.

Advertisement

ಚರಂಡಿ ವ್ಯವಸ್ಥೆಯೇ ಇಲ್ಲ
ಪಾವಂಜೆ ಬಳಿಯಲ್ಲಿಯೂ ಸಹ ಇದೇ ರೀತಿಯ ಸಮಸ್ಯೆ ಇದೆ. ಹಳೆಯಂಗಡಿ ಮುಖ್ಯ ಜಂಕ್ಷನ್‌ನ ಎರಡೂ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಇಲ್ಲಿನ ಮಂಗಳೂರಿಗೆ ಪ್ರಯಾಣಿಸುವ ಬಸ್‌ ಪ್ರಯಾಣಿಕರ ತಂಗುದಾಣದ ಬಳಿ ಸೂಕ್ತವಾದ ಚರಂಡಿ ಇಲ್ಲದೆ ಸುತ್ತಮುತ್ತ ರಸ್ತೆಯಲ್ಲಿಯೇ ಹರಿಯುತ್ತಿದೆ. ಹೆದ್ದಾರಿ ಬಳಿಯ ಚರಂಡಿ ಇಲ್ಲದ ಪ್ರದೇಶದಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿರುವ ಪರಿಣಾಮ ಹೆದ್ದಾರಿ ಬದಿಯಲ್ಲಿ ಹಾಕಿರುವ ಮಣ್ಣು ಸಹ ಕರಗುತ್ತಿದೆ ಇದರಿಂದ ವಾಹನಗಳು ಸಹ ರಸ್ತೆ ಬಿಟ್ಟು ಸಂಚರಿಸಿದರೆ ಅಪಾಯವನ್ನು ಆಹ್ವಾನಿಸಿದಂತಾಗುತ್ತದೆ.

ತೋಕೂರು, ಇಂದಿರಾನಗರ, ಕದಿಕೆ, ಪಕ್ಷಿಕೆರೆ ರಸ್ತೆ ಮುಂತಾದ ಕಡೆಗಳಲ್ಲಿಯು ಇಂತಹ ಸಮಸ್ಯೆ ಹೆಚ್ಚಾಗಿದೆ. ನಂದಿನಿ ನದಿ ತೀರದ ಪಾವಂಜೆ ಸೇತುವೆ ಬಳಿಯ ಕೆಲವೊಂದು ಪ್ರದೇಶಗಳಲ್ಲಿ ಖಾಸಗಿ ಜಮೀನಿನ ಮಣ್ಣೆಲ್ಲಾ ಚರಂಡಿಯಲ್ಲಿ ತುಂಬಿದ್ದು, ಇದರಿಂದ ರಸ್ತೆಯಲ್ಲಿಯೇ ಮಳೆ ನೀರು ಹರಿಯುತ್ತಿದೆ. ಶನಿವಾರ ಈ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ರಜೆಯನ್ನು ನೀಡಲಾಗಿದೆ.

ಎಕ್ಕಾರಿನಲ್ಲಿ ನೆರೆ ನೀರು
ಎಕ್ಕಾರು: ಇಲ್ಲಿನ ಬಯಲು ಪ್ರದೇಶದಲ್ಲಿ ನೆರೆ ನೀರು ನಿಂತು ಗಂಪದಬೈಲು, ಕಲ್ಲಟ್ಟ ಪ್ರದೇಶದ ನಿವಾಸಿಗಳಿಗೆ ಸಂಪರ್ಕ ಕಡಿದು ಹೋಗಿದೆ. ಅಲ್ಲಿನ ನಿವಾಸಿಗಳು ಸುತ್ತು ಬಳಸಿ ಬೇರೆ ದಾರಿಯಾಗಿ ನಗರಕ್ಕೆ ಬರುವಂತಾಗಿದೆ. ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊಳಂಬೆ ಗ್ರಾಮದ ಭಗವತೀ ನಗರದಲ್ಲಿ ಮಂಗಳೂರು ವಿಮಾನ ನಿಲ್ದಾಣ ರನ್‌ವೇ ನೀರು ಇಲ್ಲಿನ ರಸ್ತೆಗೆ ಹರಿದು ರಸ್ತೆಯಲ್ಲಿ ಮಣ್ಣು ಬಿದ್ದಿದೆ. ಊರಿನವರು ಒಟ್ಟು ಸೇರಿ ರಸ್ತೆಯ ಮಣ್ಣು ತೆಗೆದಿದ್ದಾರೆ. ವಾಹನ ಸಂಚಾರಕ್ಕೆ ಯೋಗ್ಯ ಮಡಿಕೊಟ್ಟಿದ್ದಾರೆ.

ಭಾರೀ ಮಳೆ
ಸುರತ್ಕಲ್‌, ಪಣಂಬೂರು ಸಹಿತ ಸುತ್ತಮುತ್ತ ಶುಕ್ರವಾರ ರಾತ್ರಿಯಿಂದ ಉತ್ತಮ ಮಳೆಯಾಗಿದೆ. ಶನಿವಾರವೂ ಎಡೆಬಿಡದೆ ಮಳೆ ಸುರಿದಿದ್ದು ತಗ್ಗು ಪ್ರದೇಶ ಜಲಾವೃತವಾಯಿತು. ಸುರತ್ಕಲ್‌, ಪಣಂಬೂರು ಸಹಿತ ಸಮುದ್ರದ ಕಲರವ ಹೆಚ್ಚಿದ್ದು ಮೀನುಗಾರರಿಗೆ ಅಪಾಯದ ಮುನ್ಸೂಚನೆ ನೀಡಿದ್ದರಿಂದ ನಾಡದೋಣಿ ಮೀನುಗಾರಿಕೆಯೂ ನಡೆದಿಲ್ಲ. ಭಾರಿ ಮಳೆಯ ಕಾರಣದಿಂದ ತುರ್ತು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

ಮೂಡಬಿದಿರೆ
ಮೂಡಬಿದಿರೆ: ಪರಿಸರದಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದಾಗಿ ವ್ಯಾಪಕ ಹಾನಿಯಾದ ಪ್ರಕರಣಗಳು ವರದಿಯಾಗಿವೆ. ಕಡಂದಲೆ ಪರಾರಿಯಲ್ಲಿ 2 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಹೊಲ, ಮನೆಗಳ ಪರಿಸರವೆಲ್ಲ ನೀರು ತುಂಬಿ ಸುಮಾರು 5 ಮನೆಗಳ ಸಹಿತ ರಸ್ತೆ ಜಲಾವೃತಗೊಂಡಿವೆ. ತೆಂಕಮಿಜಾರು ಉತ್ತಲಾಡಿಯಲ್ಲಿ ಗದ್ದೆಗಳಲ್ಲಿ ನೆರೆ ನೀರು ತುಂಬಿದೆ. 13 ವರ್ಷಗಳ ಬಳಿಕ ಈ ಪ್ರಮಾಣದಲ್ಲಿ ನೆರೆ ತುಂಬಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಬೆಳುವಾಯಿ ಕರಿಯನಂಗಡಿಯಲ್ಲಿ ರಸ್ತೆಯ ಬಳಿಯ ದೊಡ್ಡ ಮೋರಿಯಲ್ಲಿ ನೀರು ತುಂಬಿ ಹೊರಗೆ ಹರಿಯತೊಡಗಿ ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಪಂಚಾಯತ್‌ ಅಧ್ಯಕ್ಷ ಭಾಸ್ಕರ ಆಚಾರ್ಯ ಅವರು ಪಿಡಿಒ ಸಹಿತ ಸಿಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ, ಜೆಸಿಬಿ ಮೂಲಕ ಕಸ ತ್ಯಾಜ್ಯ ವಸ್ತು ತೆಗೆಸಿ, ಅವಶ್ಯವಿರುವಲ್ಲಿ ಅಗೆತ ಮಾಡಿಸಿ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟರು.

ಗುಡ್ಡ ಕುಸಿತ
ಪುತ್ತಿಗೆ: ಇಲ್ಲಿನ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿ ಸಂಪಿಗೆ ರಸ್ತೆಯಲ್ಲಿ ಗುಡ್ಡ ಜರಿದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ನಾಗವರ್ಮ ಜೈನ್‌ ಸಹಿತ ಪಂ. ಸದಸ್ಯರು ಬಿದ್ದ ಮಣ್ಣನ್ನು ತೆರೆಗೊಳಿಸಿದರು. ಮೂಡಬಿದಿರೆ ಸ್ವರಾಜ್ಯ ಮೈದಾನದ ಪಶ್ಚಿಮದಲ್ಲಿರುವ ಹಂಡೇಲು ಬಲಿಪರ ಕಂಬಳಗದ್ದೆ ಮತ್ತು ಇನ್ನೊಂದು ಭಾಗದಲ್ಲಿರುವ ಪಟ್ಲ ಗದ್ದೆಗಳ ನಡುವೆ ಹರಿಯುವ ತೋಡು ತುಂಬಿ ಕಟ್ಟಹುಣಿ ಕಾಣಿಸದಷ್ಟು ನೆರೆ ನೀರು ತುಂಬಿದೆ. ಈ ಪ್ರದೇಶದಲ್ಲಿ ಕಂಬಳ ಗದ್ದೆಯ ಮೂರು ದಿಕ್ಕುಗಳಲ್ಲಿರುವ ಇತರ ಕನಿಷ್ಠ ನಾಲ್ಕೈದು ತಳ ಮಟ್ಟದ ಹೊಲಗಳಿಗೆ ನಾಲ್ಕರಿಂದ ಎಂಟು ಅಡಿ ಎತ್ತರಕ್ಕೆ ಮಣ್ಣು ಹಾಕಿ ಸೈಟ್‌ ಮಾಡುವ ಪ್ರಕ್ರಿಯೆ ಜೋರಾಗಿ ನಡೆದಿರುವುದರಿಂದ ಪುತ್ತಿಗೆ ಮನೆ ಕಾಳಿಕಾಂಬಾ ನಿಲಯದ ನಾಗಬನ, ಮಜಲು ಗದ್ದೆ, ಪಾರ್ಶ್ವನಾಥ ಇಂದ್ರರ ತೋಟ, ಪಡ್ಡಾಯಿಬೆಟ್ಟು ಮತ್ತು ಇತರರ ಜಾಗಗಳಿಗೆ ಅಪಾಯ ಒಡ್ಡುವಷ್ಟು ನೆರೆ ನೀರು ನಿಂತಿತ್ತು.

ರಜೆ
ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಮೂಡಬಿದಿರೆ ತಹಶೀಲ್ದಾರ್‌ ರಶ್ಮಿ ಅವರು ಶನಿವಾರ ಶಾಲೆಗಳಿಗೆ ರಜಾ ಘೋಷಿಸಿದ್ದರು. 

ದೇಲಂತಬೆಟ್ಟು ಪ್ರದೇಶದಲ್ಲಿ 16 ಮಂದಿಯ ರಕ್ಷಣೆ
ಸೂರಿಂಜೆ: ಇಲ್ಲಿಯ ದೇಲಂತಬೆಟ್ಟು ಹೊಸಕಟ್ಟೆ ತಗ್ಗು ಪ್ರದೇಶ ಈ ಬಾರಿಯ ಮುಂಗಾರುವಿನಲ್ಲಿ 2ನೇ ಸಲ ಶನಿವಾರ ಮುಳು ಗಡೆಯಾಗಿದೆ. ಪೊಲೀಸ್‌, ಅಗ್ನಿಶಾಮಕ ಸಹಿತ ರಕ್ಷಣಾ ತಂಡಗಳ ನೆರವಿನಿಂದ ಸುಮಾರು 16 ಮಂದಿ ಯನ್ನು ರಕ್ಷಿಸಲಾಯಿತು. ಕಂದಾಯ ಅಧಿಕಾರಿ ನವೀನ್‌ ಅವರು ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next