Advertisement
ನಾನು ರೋಬೋಟ್ ಅಲ್ಲ!ಶ್ರೀಲಂಕಾ ಎದುರಿನ ಮೂರು ಟೆಸ್ಟ್ ಸರಣಿ ಆರಂಭವಾದ ನಂತರದ ದಿನದಲ್ಲಿ ನಾನು ರೋಬೋಟ್ ಅಲ್ಲ ಎಂದು ಗಟ್ಟಿಯಾಗಿಯೇ ಹೇಳುವ ಮೂಲಕ ಕೊಹ್ಲಿ ಬಿಸಿಸಿಐಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಾನೇನು ರೋಬೋಟ್ ಅಲ್ಲ ಎಂಬ ಮಾತಿನ ಅರ್ಥ ಇದೇ, ನನಗೀಗ ಕ್ರಿಕೆಟ್‌ನಿಂದ ವಿಶ್ರಾಂತಿ ಬೇಕಾಗಿದೆ! ಭಾರತ ಕಳೆದ ವರ್ಷದಿಂದ ಆಡಿದ ಕ್ರಿಕೆಟ್ ಗಮನಿಸಿದರೆ ಈ ಮಾತಿನಲ್ಲಿರುವ ತಥ್ಯ ಅರಿವಿಗೆ ಬರುತ್ತದೆ. ಕಳೆದ ವರ್ಷದ 3 ಟೆಸ್ಟ್ ಹಾಗೂ 5 ಏಕದಿನಗಳ ನ್ಯೂಜಿಲೆಂಡ್ ಪ್ರವಾಸದ ನಂತರ ಇಂಗ್ಲೆಂಡ್ ವಿರುದ್ಧ ಭಾರತ 5 ಟೆಸ್ಟ್‌ಗಳ ಪರಿಪೂರ್ಣ ಟೆಸ್ಟ್ ಸರಣಿಯನ್ನು ಆಡಿತ್ತು. ಕ್ರಿಸ್‌ಮಸ್ ರಜೆ ಕಳೆದು ಮತ್ತೆ ಇದೇ ತಂಡದ ಜೊತೆ ಏಕದಿನ ಸರಣಿಗೆ ಮುಂದಾಗಿತ್ತು. ವಿಶ್ರಾಂತಿಗೆ ಅವಕಾಶವಿದ್ದ ಸಂದರ್ಭದಲ್ಲಿ ಬಿಸಿಸಿಐ ಬಾಂಗ್ಲಾ ವಿರುದ್ಧ ಏಕೈಕ ಟೆಸ್ಟ್‌ನ ಸರಣಿಯನ್ನು ದಿಢೀರನೆ ಆಯೋಜಿಸಿಬಿಟ್ಟಿತು. ಹಿಂದೆಯೇ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ಗಳ ಸರಣಿ, ಬೆನ್ನಿಗೆ ಎರಡು ತಿಂಗಳ ಸತತ ಸಂಚಾರದ ಇಂಡಿಯನ್ ಪ್ರೀಮಿಯರ್ ಲೀಗ್, ಅಬ್ಬಬ್ಟಾ!
Related Articles
ಇಂದು ಭಾರತದ ಮೀಸಲು ಆಟಗಾರರ ಸಾಲು ಉದ್ದವಾಗಿರುವುದರಿಂದ ಆಟಗಾರರಿಗೆ ವಿಶ್ರಾಂತಿಯನ್ನು ಸತತ ಪಂದ್ಯಗಳ ನಡುವೆಯೂ ಕೊಡಬಹುದು. ಟೆಸ್ಟ್ ಆಡದ ಧೋನಿ, ಏಕದಿನಕ್ಕೆ ಆಹ್ವಾನ ಪಡೆಯದ ಚೇತೇಶ್ವರ ಪೂಜಾರ ತರಹದ ಆಟಗಾರರಿಗೆ ಅವರಿಗೆ ಬೇಕಾದ ವಿಶ್ರಾಂತಿ ಸಿಗುತ್ತಿದೆ. ಫಾರಂ ಕೈಕೊಟ್ಟಿದ್ದರಿಂದ ಆರ್.ಅಶ್ವಿನ್, ರವೀಂದ್ರ ಜಡೇಜಾ ಮಾದರಿಯ ಆಟಗಾರರಿಗೂ ಮನೆಯಲ್ಲಿರುವ ಅವಕಾಶ ಸಿಕ್ಕಿದೆ. ಹಾರ್ದಿಕ ಪಾಂಡ್ಯ, ರೋಹಿತ್ ಶರ್ಮ, ಶಿಖರ್ ಧವನ್, ಭುವನೇಶ್ವರ ಕುಮಾರ್‌ಗೆ ಅಲ್ಲಲ್ಲಿ ಆರಾಮ ಕೊಡಲಾಗಿದೆ. ವಾಸ್ತವವಾಗಿ, ಮೂರು ಮಾದರಿಯ ಕ್ರಿಕೆಟ್ ಆಡುವ, ಭಾರತದ ಪ್ರಮುಖ ಆಟಗಾರ ಎನ್ನಿಸಿಕೊಂಡಿರುವ ವಿರಾಟ್‌ಗೆ ಮಾತ್ರ ಬದಲಿ ವ್ಯವಸ್ಥೆ ಸಿಕ್ಕಿಲ್ಲ!
Advertisement
ಈ ವಿಪರೀತ ಕ್ರಿಕೆಟ್‌ನ ಆಕ್ಷೇಪ ಇತ್ತೀಚಿನದಲ್ಲ. ಹಿಂದೆ ಆಟಗಾರರು ತಮ್ಮ ಬದುಕಿನ ಆದಾಯ ಮೂಲ ಕಂಡುಕೊಳ್ಳಲು ರಾಷ್ಟ್ರ ತಂಡದ ಕೆಲಸ ಇಲ್ಲದ ಸಂದರ್ಭದಲ್ಲಿ ಪ್ರದರ್ಶನ ಪಂದ್ಯಗಳು, ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ಮೊದಲಾದವುಗಳಲ್ಲಿ ಭಾಗವಹಿಸುತ್ತಿದ್ದರು. ಕೆಲವೇ ಕೆಲವು ವರ್ಷಗಳ ಕ್ರಿಕೆಟ್ ಕೆರಿಯರ್‌ನಲ್ಲಿ ಭವಿಷ್ಯದ ತುತ್ತಿನ ಚಿಂತೆ ಇರುತ್ತದಾದ್ದರಿಂದ ಇಂತಹ ಒಪ್ಪಂದಗಳು ಅನಿವಾರ್ಯವೂ ಆಗಿರುತ್ತಿತ್ತು. ಆದರೆ ಈ ಒಡಂಬಡಿಕೆಗಳು ಆಟಗಾರರದೇ ಆಯ್ಕೆಯಾಗಿರುತ್ತದಾದ್ದರಿಂದ ಅವರು ಒಪ್ಪುವ, ತಲೆ ಅಡ್ಡಡ್ಡ ಆಡಿಸುವ ಸ್ವಾತಂತ್ರÂವನ್ನೂ ಹೊಂದಿರುತ್ತಿದ್ದರು. ಇಂದಿನ ಬಿಸಿಸಿಐ ಏರ್ಪಡಿಸಿದ ಪಂದ್ಯಗಳು ಮತ್ತು ಐಪಿಎಲ್‌ನಲ್ಲಿ ಅವರ ಆಡುವುದಿಲ್ಲ ಎಂದು ಧ್ವನಿಗೆ ಆಸ್ಪದವಿಲ್ಲ. ವಿನಂತಿ ಮಾಡಿಕೊಳ್ಳಬಹುದು ಮತ್ತು ಅದನ್ನು ಬಿಸಿಸಿಐ ಒಪ್ಪಿದರೆ ಮಾತ್ರ ಜಾರಿ. ಒಂದು, ಎರಡು ಪಂದ್ಯಕ್ಕೆ ಮಾತ್ರ ಕೊಡುವ ವಿಶ್ರಾಂತಿ ಸತತ ಆಟ, ಪ್ರವಾಸ, ಭಿನ್ನ ಟೈಂ ಝೊàನ್, ಆಹಾರ, ವಾತಾವರಣಗಳಿಗೆ ಹೊಂದಿಕೊಳ್ಳುವ ತ್ರಾಸಕ್ಕೆ ಸಮಾಧಾನ ನೀಡುವುದಿಲ್ಲ. ಆಟಗಾರರಿಗೆ ಒಂದಿಡೀ ಪ್ರವಾಸದಿಂದ ವಿಶ್ರಾಂತಿ ಕೊಟ್ಟರೆ ಮಾತ್ರ ಒಂಚೂರು ನೆಮ್ಮದಿ. ತಮ್ಮ ಬದಲು ತಂಡದಲ್ಲಿ ಸ್ಥಾನ ಪಡೆದವ ಅತ್ಯುತ್ತಮ ಆಟ ತೋರಿದರೆ ಆ ನೆಮ್ಮದಿಗೂ ಚ್ಯುತಿ ಬಂದೆರಗುತ್ತದೆ!
ಚಾನೆಲ್ ರೈಟ್ಸ್ ಒತ್ತಡಕೊಹ್ಲಿ ಎಗರಾಡಲಿ, ಆಟಗಾರರು ಗಾಯಾಳು ಸಮಸ್ಯೆಯಿಂದ ಬಳಲಲಿ, ಆ ಕುರಿತು ಕಾಟಾಚಾರಕ್ಕೂ ಬಿಸಿಸಿಐ ಚಿಂತಿಸಿದಂತಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಂಡ ಮೂರು ಟೆಸ್ಟ್, ಆರು ಏಕದಿನ ಹಾಗೂ ಮೂರು ಟಿ20 ಪಂದ್ಯವನ್ನಾಡಲಿದೆ. ಈ ಪ್ರವಾಸ ಕೊನೆಗೊಳ್ಳುವುದು ಫೆ.24ಕ್ಕೆ. ಮಾರ್ಚ್‌ನಲ್ಲಿ ಆಟಗಾರರಿಗೆ ವಿಶ್ರಾಂತಿ ಸಿಕ್ಕುತ್ತದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಬಿಸಿಸಿಐ ಚಿಕ್ಕ ಪ್ರವಾಸದ ಅವಕಾಶ ಹುಡುಕುತ್ತಿರಬಹುದು! ಏಪ್ರಿಲ್ ಮೇನಲ್ಲಿ ಐಪಿಎಲ್‌ನ ಎರಡು ತಿಂಗಳು, 76 ಪಂದ್ಯಗಳ ಭರಾಟೆ. ಅದರ ನಂತರ ಭಾರತ ಐದು ಟೆಸ್ಟ್‌ಗಳ ಪೂರ್ಣಾವಧಿ ಪ್ರವಾಸಕ್ಕೆ ಇಂಗ್ಲೆಂಡ್‌ಗೆ ತೆರಳಲಿದೆ. ಆ ನಂತರ ಹೊಸ ಭಾರತೀಯ ಕ್ರಿಕೆಟ್ ಋತು ಆರಂಭವಾಗುತ್ತದೆ. ಇನ್ನೇನಲ್ಲವಾದರೂ ದುಬಾರಿ ಟಿವಿ ನೇರಪ್ರಸಾರದ ಹಕ್ಕು ಪಡೆದಿರುವ ಕ್ರೀಡಾ ಚಾನೆಲ್‌ಗಳ ಲೈವ್ ಘಂಟೆಗಳ ಷರತ್ತು ಪೂರೈಸಲಾದರೂ ಭಾರತೀಯ ತಂಡ ಅಂಕಣದಲ್ಲಿ ಆಡುತ್ತಿರಲೇಬೇಕು. 1979-80ರಲ್ಲಿ ಇದೇ ರೀತಿಯ ದೀರ್ಘ ಸ್ವದೇಶಿ ಋತುವಿನ ನಂತರ ಭಾರತೀಯ ತಂಡದ ವೆಸ್ಟ್‌ಇಂಡೀಸ್ ಪ್ರವಾಸವನ್ನು ಬಿಸಿಸಿಐ ಆಯೋಜಿಸಿತು. ಅವತ್ತಿನ ಭಾರತದ ನಾಯಕ ಸುನಿಲ್ ಗವಾಸ್ಕರ್ ಕ್ರಿಕೆಟ್ ಸುಸ್ತಿನ ಕಾರಣ ಪ್ರವಾಸಕ್ಕೆ ತೆರಳಲು ನಿರಾಕರಿಸಿದರು. ಬಿಸಿಸಿಐ ಒತ್ತಡಕ್ಕೂ ಬಗ್ಗದೆ ಸನ್ನಿ ದೃಢವಾಗಿ ನಿಂತರು. ಅವರಿಲ್ಲದ ಪ್ರವಾಸ ಆಕರ್ಷಕ ಅಲ್ಲ ಎಂಬ ಕಾರಣಕ್ಕೆ ಆತಿಥೇಯರೂ ಆಸಕ್ತಿ ಕಳೆದುಕೊಂಡ ಕಾರಣಕ್ಕೆ ಪ್ರವಾಸವೇ ರದ್ದಾಯಿತು. ಗೊತ್ತಿಲ್ಲ, ಕೊಹ್ಲಿ ಈಗ ಅದೇ ಸ್ಥಿತಿಯಲ್ಲಿದ್ದಾರೆ. ಅವರಿಗೆ ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯ ನಂತರ ವಿಶ್ರಾಂತಿ ಕೊಡದಿದ್ದರೆ “ಸೆಟ್ಲಿಂಗ್ ಡೌನ್ ಕಷ್ಟ ಕಷ್ಟ! ಮಾ.ವೆಂ.ಸ.ಪ್ರಸಾದ್