ಮಹದೇವಪುರ: ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಪಣತ್ತೂರು ರೈಲ್ವೆ ಕೆಳ ಸೇತುವೆ ಮತ್ತು ರಸ್ತೆ ವಿಸ್ತರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಆರಂಭಿಸಿರುವ ನಿರಾಹಾರ ಧರಣಿ ಶನಿವಾರವೂ ಮುಂದುವರಿದಿದ್ದು, ಮೂರನೇ ದಿನಕ್ಕೆ ಕಾಲಿರಿಸಿದೆ.
ಹೂರ ವರ್ತುಲ ರಸ್ತೆಯಿಂದ ಪಣತ್ತೂರು ಮೂಲಕ ವರ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ದಿನೇ ದಿನೆ ವೃದ್ಧಿಸುತ್ತಿದೆ. ಆದರೆ ರಸ್ತೆ ಮಾತ್ರ ಅತ್ಯಂತ ಕಿರಿದಾಗಿರುವ ಕಾರಣ ಸದಾ ಸಂಚಾರ ದಟ್ಟಣೆ ಉಂಟಾಗುತ್ತದೆ. ಐದಾರು ವರ್ಷಗಳಿಂದಲೂ ಇರುವ ಈ ಸಮಸ್ಯೆಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಪಣತ್ತೂರು ಗ್ರಾಮಸ್ಥರು ನಿರಶನ ಆರಂಭಿಸಿದ್ದಾರೆ.
ಈಗಾಗಲೇ ಎರಡು ದಿನಗಳಿಂದ ಉಪವಾಸ ಇರುವ ಕಾರಣ ಧರಣಿ ನಿರತರ ಆರೋಗ್ಯ ಕ್ರಮೇಣ ಬಿಗಡಾಯಿಸುತ್ತಿದೆ. ಆದರೆ, ಈವರೆಗೆ ಯಾವೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿಗಳಾಗಲಿ ಧರಣಿ ಸ್ಥಳಕ್ಕೆ ಭೇಟಿ ನೀಡುವ ಸೌಜನ್ಯ ತೋರಿಲ್ಲ. ಹೀಗಾಗಿ, ಸಮಸ್ಯೆ ಪರಿಹರಿಸುವ ಕುರಿತು ಸ್ಥಳೀಯ ಶಾಸಕರು, ಸಂಸದರು ಮತ್ತು ಅಧಿಕಾರಿಗಳು ಲಿಖೀತ ಭರವಸೆ ನೀಡುವವರೆಗೂ ನಿರಶನ ಮುಂದುವರಿಯಲಿದೆ ಎಂದು ಧರಣಿ ನಿರತರು ತಿಳಿಸಿದ್ದಾರೆ.
ಹೊರ ವರ್ತೂಲ ರಸ್ತೆಯಿಂದ ವರ್ತೂರು, ಗುಂಜೂರು, ಸರ್ಜಾಪುರ ಮುಖ್ಯ ರಸ್ತೆಗೆ ಸಂಪರ್ಕ ಕೊಂಡಿಯಾಗಿರುವ ಪಣತ್ತೂರು ರೈಲ್ವೆ ಕ್ರಾಸಿಂಗ್ ಕೆಳ ಸೇತುವೆ ಮೂಲಕ ಒಮ್ಮೆಗೆ ಒಂದೇ ವಾಹನ ಚಲಿಸಲು ಮಾತ್ರ ಸ್ಥಳಾವಕಾಶವಿದೆ. ಆದರೆ, ಬೆಳಗ್ಗೆ ಹಾಗೂ ಸಂಜೆ ಸಾವಿರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುವುದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತದೆ. ಗ್ರಾಮದ ನಡುವೆ ಹಾದುಹೋಗುವ ರಸ್ತೆಯಲ್ಲೇ ಉಂಟಾಗುವ ಸಂಚಾರ ದಟ್ಟಣೆಯಿಂದ ಬೇಸತ್ತಿರುವ ಪಣತ್ತೂರು ಗ್ರಾಮಸ್ಥರು, ರಸ್ತೆ ವಿಸ್ತರಿಸಿ ಸಮಸ್ಯೆ ಪರಿಹರಿಸುವಂತೆ ಪಟ್ಟು ಹಿಡಿದಿದ್ದಾರೆ.
ಚರ್ಚೆ ನಡೆದಿದೆ, ಪಾಲಿಕೆ ಅನುದಾನ ಕೊಡುತ್ತಿಲ್ಲ: “ಪಣತ್ತೂರು ರಸ್ತೆ ಮತ್ತು ರೈಲ್ವೆ ಕೆಳ ಸೇತುವೆ ವಿಸ್ತರಣೆ ಕುರಿತಂತೆ ಸಂಸದ ಪಿ.ಸಿ ಮೋಹನ್ ಸಮ್ಮುಖದಲ್ಲಿ ಸ್ಥಳೀಯರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ರಸ್ತೆಗೆ ಭೂಮಿ ನೀಡುವವರು ಟಿಡಿಆರ್ ಬದಲು ಮಾರುಕಟ್ಟೆ ದರ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಇನ್ನೊಂದೆಡೆ ಹೊರವರ್ತುಲ ರಸ್ತೆಯ ನ್ಯೂ ಹೊರೈಜನ್ ಕಾಲೇಜಿನಿಂದ ವರ್ತೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಲು ಪಣತ್ತೂರು ಪಕ್ಕದಲ್ಲಿ 80 ಅಡಿ ಅಗಲದ ರಸ್ತೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ರೈಲ್ವೆ ಕೆಳ ಸೇತುವೆ ವಿಸ್ತರಣೆಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಆದರೆ ಬಿಬಿಎಂಪಿ ಅನುದಾನ ಒದಗಿಸುತ್ತಿಲ್ಲ,’ ಎಂದು ಶಾಸಕ ಅರವಿಂದ ಲಿಂಬಾವಳಿ ಮಾಹಿತಿ ನೀಡಿದ್ದಾರೆ.