ಕಲಬುರಗಿ: ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಒಟ್ಟಾಗಿರಲು ಜಾತ್ಯತೀತ ಪಕ್ಷಗಳೊಂದಿಗೆ ಹಾಗೂ ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರ ಜತೆ ನಿರಂತರ ಸಂಪರ್ಕ ಸಾಧಿಸಲಾಗುತ್ತಿದೆ ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಸಮಿತಿ ರಾಷ್ಟ್ರೀಯ ಕಾರ್ಯದರ್ಶಿ ಮಹ್ಮದ ಅಸಗರ್ ಚುಲ್‌ಬುಲ್ ಹೇಳಿದರು.
ನೆರೆಯ ತೆಲಂಗಾಣದ ಸಾಯಿ ನಗರದಲ್ಲಿ ನಡೆದ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ 2022-23ರಲ್ಲಿ ಹಿಮಾಚಲ ಪ್ರದೇಶ, ಗುಜರಾತ, ಜಮ್ಮು-ಕಾಶ್ಮೀರ, ಕರ್ನಾಟಕ, ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ ಸೇರಿದಂತೆ ಇತರ ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವುದರಿಂದ ನಾವು ಮತ್ತಷ್ಟು ವಿಚಾರ ಮಾಡುವುದು ಅಗತ್ಯವಾಗಿದೆ ಎಂದರು.
ಪ್ರಣಾಳಿಕೆಯಲ್ಲಿ ರಾಜಕೀಯ ಪಕ್ಷಗಳು ಈ ವಿಷಯದ ಕುರಿತು ಖಚಿತತೆಪಡಿಸಬೇಕು. ಪ್ರಮುಖವಾಗಿ ಸಂವಿಧಾನ ವಿರೋಧಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಬೇಕು. ದೇಶದ ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಎರಡು ದೊಡ್ಡ ಪ್ರಮಾಣದಲ್ಲಿ “ಸಂವಿಧಾನ ಉಳಿಸಿ-ದೇಶ ಬೆಳೆಸಿ’ ಎನ್ನುವ ನಿಟ್ಟಿನಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು ಎಂದು ಹೇಳಿದರು.
ಪದಾಧಿಕಾರಿಗಳಾದ ಮೌಲಾನಾ ಖಾಲಿದ್ ಸೈಫುಲ್ಲಾ ರಹೆಮಾನಿ, ಮೌಲಾನಾ ಅಧಿನೀಸುರ ರಹೇಮಾನ, ಖಾಸ್ಮಿ ಬಿಹಾರ, ಮೌಲಾ ಶಾಹ ಜೀಲಾನಿ ಮುಸ್ತಫಾ ರಿಫಾಯಿ ಬೆಂಗಳೂರು, ಸುಲೇಮಾನ ಖಾನ್, ತೆಲಂಗಾಣದ ಇಂಜಿನಿಯರ್ ಇಕ್ಬಾಲ್, ಉತ್ತರ ಪ್ರದೇಶದ ಖಮರ ಆಲಂ, ಶಾಹೀದ ಅಹ್ಮದ್, ಮುಬಾರಕ ಬಾಷಾ, ವಕೀಲ ವಿಜಯವಾಡ, ಉಸ್ಮಾನ ಬೇಗ್, ನೌಶಾದ ಅಖ್ತರ, ಪತ್ರಕರ್ತ ಸರ್ಪರಾಜ ಉಮರ ಆಬಿದಿನ, ಸೈಯದ್ ಬಾಬರ ಅರ್ಷದ ಕಾಶ್ಮಿ, ಫಿರೋಜ ಶೇಠ, ಹಿರಿಯ ನ್ಯಾಯವಾದಿ ಅಬ್ದುಲ್ ಖದೀರ ನಿಜಾಮಿ, ಅಫಸರ ಜಹಾನ ಮುಂತಾದವರಿದ್ದರು.