Advertisement

ಸತತ 4-5 ಪಂದ್ಯ ಸೋತರೆ ಹಾದಿ ಕಷ್ಟವಿದೆ: ಸ್ಟೋಕ್ಸ್‌

01:00 PM Apr 02, 2019 | Sriram |

ಚೆನ್ನೈ: ರವಿವಾರ ಐಪಿಎಲ್‌ನಲ್ಲಿ 3 “ಹ್ಯಾಟ್ರಿಕ್‌’ ದಾಖಲಾದವು. ರಾಯಲ್‌ ಚಾಲೆಂಜರ್ ಬೆಂಗಳೂರು ಸತತ 3 ಪಂದ್ಯಗಳಲ್ಲಿ ಲಾಗ ಹಾಕಿತು. ಬಳಿಕ ಇದೇ ಹಾದಿ ಹಿಡಿದ ರಾಜಸ್ಥಾನ್‌ ರಾಯಲ್ಸ್‌ ಕೂಡ ಸತತ 3 ಸೋಲುಂಡಿತು. ಇನ್ನೊಂದೆಡೆ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಎಲ್ಲ 3 ಪಂದ್ಯಗಳಲ್ಲಿ ಜಯ ಸಾಧಿಸಿತು!

Advertisement

ರವಿವಾರ ರಾತ್ರಿ ಚೆನ್ನೈಯಲ್ಲಿ ನಡೆದ ರೋಚಕ ಹೋರಾಟದಲ್ಲಿ ಆತಿಥೇಯ ಚೆನ್ನೈ ಪಡೆ 8 ರನ್ನುಗಳಿಂದ ರಾಜಸ್ಥಾನ್‌ ರಾಯಲ್ಸ್‌ಗೆ ಸೋಲುಣಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ 5 ವಿಕೆಟಿಗೆ 175 ರನ್‌ ಬಾರಿಸಿದರೆ, ರಾಜಸ್ಥಾನ್‌ 8 ವಿಕೆಟಿಗೆ 167 ರನ್‌ ಮಾಡಿ ಸ್ವಲ್ಪದರಲ್ಲೇ ಗೆಲುವವನ್ನು ಕಳೆದುಕೊಂಡಿತು.

ಈ ಸಂದರ್ಭದಲ್ಲಿ ಮಾತಾಡಿದ ರಾಜಸ್ಥಾನ್‌ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಬೆನ್‌ ಸ್ಟೋಕ್ಸ್‌, “ಸತತ 3 ಪಂದ್ಯಗಳನ್ನು ಸೋತದ್ದು ಬೇಸರದ ಸಂಗತಿ. ಆದರೆ ಇದರಿಂದ ತಂಡದ ಮುನ್ನಡೆಗೇನೂ ತೊಂದರೆ ಆಗದು. ಆದರೆ ಸತತವಾಗಿ 4-5 ಪಂದ್ಯಗಳನ್ನು ಕಳೆದುಕೊಂಡರೆ ಹಳಿ ಏರುವುದು ಸುಲಭವಲ್ಲ…’ ಎಂದಿದ್ದಾರೆ.

ಗೆಲ್ಲಬಹುದಾಗಿದ್ದ ಪಂದ್ಯಗಳು
“ನಿಜಕ್ಕಾದರೆ ಈ ಮೂರೂ ಪಂದ್ಯಗಳನ್ನು ನಾವು ಗೆಲ್ಲಬಹುದಿತ್ತು. ನಾವು ಉತ್ತಮ ಸ್ಥಿತಿಯಲ್ಲಿದ್ದು, ಕೊನೆಯಲ್ಲಿ ಗೆಲುವು ಒಲಿಸಿಕೊಳ್ಳುವಲ್ಲಿ ಎಡವಿದ್ದೇವೆ. ನಮ್ಮ ಗೆಲುವಿನ ಕಾರ್ಯತಂತ್ರ ಎಲ್ಲೋ ಕೈಕೊಡುತ್ತಿದೆ. ಇದನ್ನು ಸರಿಪಡಿಸಿಕೊಂಡು ಮುಂದಡಿ ಇಡಬೇಕಾದ ತುರ್ತು ಅಗತ್ಯವಿದೆ’ ಎಂದು ಬೆನ್‌ ಸ್ಟೋಕ್ಸ್‌ ಹೇಳಿದರು. ಈ ಸಂದರ್ಭದಲ್ಲಿ ಅವರು ಧೋನಿಯ “ಫಿನಿಶಿಂಗ್‌ ಕೌಶಲ’ವನ್ನು ಹೊಗಳಲು ಮರೆಯಲಿಲ್ಲ.

ಬ್ಯಾಟಿಂಗಿಗೆ ತುಸು ಕಠಿನವಾದ ಟ್ರ್ಯಾಕ್‌ನಲ್ಲಿ ರಾಜಸ್ಥಾನ್‌ ಮೊದಲ 3 ವಿಕೆಟ್‌ಗಳನ್ನು 14 ರನ್‌ ಆಗುವಷ್ಟರಲ್ಲಿ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿತು. ಇವು ಕಳೆದ ಪಂದ್ಯದ ಹೀರೋಗಳಾದ ನಾಯಕ ಅಜಿಂಕ್ಯ ರಹಾನೆ (0), ಸಂಜು ಸ್ಯಾಮ್ಸನ್‌ (8) ಮತ್ತು ಜಾಸ್‌ ಬಟ್ಲರ್‌ (6) ಅವರ ಬಿಗ್‌ ವಿಕೆಟ್‌ಗಳಾಗಿದ್ದವು. ವåಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ರಾಹುಲ್‌ ತ್ರಿಪಾಠಿ (39), ಸ್ಟೀವನ್‌ ಸ್ಮಿತ್‌ (28), ಬೆನ್‌ ಸ್ಟೋಕ್ಸ್‌ (46) ಅವರ ಪ್ರಯತ್ನ ಸಾಕಾಗಲಿಲ್ಲ.

Advertisement

ಡ್ವೇನ್‌ ಬ್ರಾವೊ ಕಡಿವಾಣ
ಅಂತಿಮ ಓವರ್‌ನಲ್ಲಿ 4 ವಿಕೆಟ್‌ಗಳಿಂದ 12 ರನ್‌ ಗಳಿಸಬೇಕಿದ್ದ ರಾಜಸ್ಥಾನ್‌ಗೆ ಡ್ವೇನ್‌ ಬ್ರಾವೊ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಬೆನ್‌ ಸ್ಟೋಕ್ಸ್‌ ಮೊದಲ ಎಸೆತದಲ್ಲೇ ಔಟಾದದ್ದು ರಾಜಸ್ಥಾನ್‌ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. 5ನೇ ಎಸೆತದಲ್ಲಿ ಶ್ರೇಯಸ್‌ ಗೋಪಾಲ್‌ ವಿಕೆಟ್‌ ಬಿತ್ತು. ಈ ಓವರ್‌ನಲ್ಲಿ ಬಂದದ್ದು 3 ಸಿಂಗಲ್ಸ್‌ ಮಾತ್ರ!

“ಅಂತಿಮ ಓವರಿನ ಮೊದಲ ಎಸೆತ ಯಾವತ್ತೂ ನಿರ್ಣಾಯಕ. ಇದರಲ್ಲಿ ಬೌಂಡರಿ ಅಥವಾ ಸಿಕ್ಸರ್‌ ಬಂದರೆ ಮುಂದಿನ ಹಾದಿ ಸುಗಮ. ಆದರೆ ಈ ಸಂದರ್ಭದಲ್ಲಿ ಬ್ರಾವೊ ಅವರ ಅನುಭವ ಕೆಲಸ ಮಾಡಿತು. ಅವರು ವಿಶ್ವದ ಶ್ರೇಷ್ಠ ಫಿನಿಶಿಂಗ್‌ ಬೌಲರ್‌. ಇದು ನನ್ನನ್ನು ಯಾಮಾರಿಸಿತು. ಕವರ್‌ನಲ್ಲಿ ಕ್ಯಾಚ್‌ ಆಯಿತು’ ಎಂದು ಸ್ಟೋಕ್ಸ್‌ ಹೇಳಿದರು.

ಸಂಕ್ಷಿಪ್ತ ಸ್ಕೋರ್‌: ಚೆನ್ನೈ ಸೂಪರ್‌ ಕಿಂಗ್ಸ್‌-5 ವಿಕೆಟಿಗೆ 175 (ಧೋನಿ ಔಟಾಗದೆ 75, ರೈನಾ 36, ಬ್ರಾವೊ 27, ಆರ್ಚರ್‌ 17ಕ್ಕೆ 2). ರಾಜಸ್ಥಾನ್‌ ರಾಯಲ್ಸ್‌-8 ವಿಕೆಟಿಗೆ 167 (ಸ್ಟೋಕ್ಸ್‌ 46, ತ್ರಿಪಾಠಿ 39, ಸ್ಮಿತ್‌ 28, ಆರ್ಚರ್‌ ಔಟಾಗದೆ 24, ಚಹರ್‌ 19ಕ್ಕೆ 2, ತಾಹಿರ್‌ 23ಕ್ಕೆ 2, ಬ್ರಾವೊ 32ಕ್ಕೆ 2, ಠಾಕೂರ್‌ 42ಕ್ಕೆ 2). ಪಂದ್ಯಶ್ರೇಷ್ಠ: ಮಹೇಂದ್ರ ಸಿಂಗ್‌ ಧೋನಿ.

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಚೆನ್ನೈ-ರಾಜಸ್ಥಾನ್‌

* ರಾಜಸ್ಥಾನ್‌ ವಿರುದ್ಧ ಚೆನ್ನೈ ತವರಿನಂಗಳದಲ್ಲಿ ಸತತ 6ನೇ ಗೆಲುವು ದಾಖಲಿಸಿತು. ಚೆನ್ನೈ ಅಂಗಳದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ರಾಜಸ್ಥಾನ್‌ ಕೊನೆಯ ಸಲ ಜಯಿಸಿದ್ದು 2008ರಲ್ಲಿ. ಅಂತರ 10 ರನ್‌. ಅಂದು ರಾಜಸ್ಥಾನ್‌ 5 ವಿಕೆಟಿಗೆ 211 ರನ್‌ ಗಳಿಸಿತ್ತು.
* ಚೆನ್ನೈ 3ನೇ ಸಲ ಸತತ 6 ಹಾಗೂ ಇದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಗೆದ್ದಿತು. ಚೆನ್ನೈ ತನ್ನ ಗೆಲುವಿನ ಅಭಿಯಾನವನ್ನು ಕಳೆದ ವರ್ಷದ ಕೊನೆಯ ಲೀಗ್‌ ಪಂದ್ಯದಿಂದ ಆರಂಭಿಸಿತ್ತು. ಚೆನ್ನೈ 2014ರಲ್ಲೂ ಸತತ 6 ಪಂದ್ಯಗಳನ್ನು ಜಯಿಸಿತ್ತು. 2013ರಲ್ಲಿ ಸತತ 7 ಪಂದ್ಯಗಳನ್ನು ಗೆದ್ದದ್ದು ದಾಖಲೆ.
* ಸುರೇಶ್‌ ರೈನಾ 150 ಐಪಿಎಲ್‌ ಪಂದ್ಯಗಳನ್ನಾಡಿದರು. ಅವರು ಈ ಎಲ್ಲ ಪಂದ್ಯಗಳನ್ನು ಚೆನ್ನೈ ಪರವಾಗಿಯೇ ಆಡಿದ್ದು ವಿಶೇಷ. ಒಂದೇ ತಂಡದ ಪರ 150ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ ಮತ್ತೋರ್ವ ಕ್ರಿಕೆಟಿಗ ವಿರಾಟ್‌ ಕೊಹ್ಲಿ. ಅವರು ಆರ್‌ಸಿಬಿ ಪರ 166 ಪಂದ್ಯಗಳನ್ನಾಡಿದ್ದಾರೆ. ರೈನಾ “ಚಿಪಾಕ್‌’ನಲ್ಲಿ ಆಡಿದ 50ನೇ ಪಂದ್ಯವೂ ಇದಾಗಿದೆ.
* 6 ರನ್‌ ಮಾಡಿದ ವೇಳೆ ಸುರೇಶ್‌ ರೈನಾ ಭಾರತದಲ್ಲಿ ಆಡಿದ ಟಿ20 ಪಂದ್ಯಗಳಲ್ಲಿ 6 ಸಾವಿರ ರನ್‌ ಪೂರ್ತಿಗೊಳಿಸಿದರು. ಇದರೊಂದಿಗೆ ಒಂದೇ ದೇಶದಲ್ಲಿ 6 ಸಾವಿರ ಟಿ20 ರನ್‌ ಪೇರಿಸಿದ ವಿಶ್ವದ ಮೊದಲ ಸಾಧಕನಾಗಿ ಮೂಡಿಬಂದರು.
* ಸಂಜು ಸ್ಯಾಮ್ಸನ್‌ ಐಪಿಎಲ್‌ನಲ್ಲಿ 2 ಸಾವಿರ ರನ್‌ ಪೂರ್ತಿಗೊಳಿಸಿದ ಅತೀ ಕಿರಿಯ ಕ್ರಿಕೆಟಿಗನೆನಿಸಿದರು (24 ವರ್ಷ, 140 ದಿನ). ಹಿಂದಿನ ದಾಖಲೆ ವಿರಾಟ್‌ ಕೊಹ್ಲಿ ಹೆಸರಲ್ಲಿತ್ತು. 2013ರ ಆವೃತ್ತಿಯಲ್ಲಿ ಈ ಸಾಧನೆ ಮಾಡುವಾಗ ಕೊಹ್ಲಿ ವಯಸ್ಸು 24 ವರ್ಷ, 175 ದಿನ.
* ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ನಲ್ಲಿ 2ನೇ ಅತ್ಯಧಿಕ ವೈಯಕ್ತಿಕ ರನ್‌ ಹೊಡೆದರು (ಅಜೇಯ 75). ಕಳೆದ ವರ್ಷದ ಮೊಹಾಲಿ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಅಜೇಯ 79 ರನ್‌ ಹೊಡೆದದ್ದು ಧೋನಿಯ ಸರ್ವಾಧಿಕ ವೈಯಕ್ತಿಕ ಮೊತ್ತವಾಗಿದೆ.
* ಧೋನಿ ಐಪಿಎಲ್‌ನ 20ನೇ ಓವರ್‌ನಲ್ಲಿ 500 ರನ್‌ ಬಾರಿಸಿದ ಮೊದಲ ಕ್ರಿಕೆಟಿಗನೆನಿಸಿದರು (503 ರನ್‌). ಈ ಸಾಧನೆಯ ವೇಳೆ ಧೋನಿ 36 ಬೌಂಡರಿ, 41 ಸಿಕ್ಸರ್‌ ಬಾರಿಸಿದ್ದಾರೆ. ಉಳಿದವರ್ಯಾರೂ 250 ರನ್‌ ಗಡಿಯನ್ನೂ ತಲುಪಿಲ್ಲ. ಧೋನಿ ಐಪಿಎಲ್‌ನಲ್ಲಿ ಬಾರಿಸಿದ ಶೇ. 12.2ರಷ್ಟು ರನ್ನುಗಳು 20ನೇ ಓವರ್‌ಗಳಲ್ಲಿ ಬಂದಿವೆ.
* ಜೈದೇವ್‌ ಉನಾದ್ಕತ್‌ ಎಸೆದ ಅಂತಿಮ ಓವರ್‌ನಲ್ಲಿ ಧೋನಿ-ಜಡೇಜ ಸೇರಿಕೊಂಡು 28 ರನ್‌ ಬಾರಿಸಿದರು. ಇದು ಪ್ರಸಕ್ತ ಐಪಿಎಲ್‌ನ ಅಂತಿಮ ಓವರ್‌ನಲ್ಲಿ ಸೋರಿಹೋದ ಅತ್ಯಧಿಕ ರನ್‌.
* ರಾಜಸ್ಥಾನ್‌ ವಿರುದ್ಧದ ಪವರ್‌ ಪ್ಲೇ ಅವಧಿಯಲ್ಲಿ ಚೆನ್ನೈ ಅತೀ ಕಡಿಮೆ ರನ್‌ ಗಳಿಸಿತು (3 ವಿಕೆಟಿಗೆ 29).
* ಅಜಿಂಕ್ಯ ರಹಾನೆ ಐಪಿಎಲ್‌ನಲ್ಲಿ 11ನೇ ಸಲ ಸೊನ್ನೆಗೆ ಔಟಾಗಿ 3ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ಹರ್ಭಜನ್‌ ಸಿಂಗ್‌ ಅಗ್ರಸ್ಥಾನದಲ್ಲಿದ್ದಾರೆ (13). ಪೀಯೂಷ್‌ ಚಾವ್ಲಾ, ಮನೀಷ್‌ ಪಾಂಡೆ, ಅಕ್ಷರ್‌ ಪಟೇಲ್‌, ಗೌತಮ್‌ ಗಂಭೀರ್‌ ಮತ್ತು ರೋಹಿತ್‌ ಶರ್ಮ ತಲಾ 12 ಸೊನ್ನೆ ಸುತ್ತಿ ದ್ವಿತೀಯ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next