ಸಂಡೂರು: ಬೇಸಿಗೆ ಪ್ರಾರಂಭವಾಗಿದ್ದು, ವಿದ್ಯುತ್ ಕಣ್ಣಮುಚ್ಚಾಲೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಪಂಪ್‌ಸೆಟ್ ಗಳಿಗೆ ನಿರಂತರ ವಿದ್ಯುತ್ ನೀಡಬೇಕು ಎಂದು ರೈತ ಸಂಘದ ಅಧ್ಯಕ್ಷ ಮೇಟಿ ಚಂದ್ರಶೇಖರ್ ಒತ್ತಾಯಿಸಿದರು.
ಪಟ್ಟಣದ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಸಂಡೂರು, ಧರ್ಮಾಪುರ, ಲಕ್ಷ್ಮೀಪುರ, ಭುಜಂಗನಗರ, ನರಸಿಂಗಾಪುರ, 18 ಹುಲಿಕುಂಟೆ, ಕೃಷ್ಣಾನಗರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಧರ್ಮಾಪುರ, ಹುಲಿಕುಂಟೆ, ಲಕ್ಷ್ಮೀಪುರ ಗ್ರಾಮಗಳ ವ್ಯಾಪ್ತಿಯ ಜಮೀನುಗಳಿಗೆ ಈ ಹಿಂದೆ 24 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಈಗ ರೈತರು ಮೊದಲಿನಂತೆಯೆ ವಿದ್ಯುತ್ ಸಿಗುವುದೆಂಬ ನಂಬಿಕೆಯಲ್ಲಿ ಬೆಳೆಗಳನ್ನು ಹಾಕಿರುತ್ತಾರೆ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಬಿಸಿಲಿನ ಪ್ರಭಾವ ಹೆಚ್ಚು ಇರಲಿದ್ದು ರೈತರ ಬೆಳೆಗೆ ಹಾನಿಯಾಗುತ್ತದೆ. ಹೀಗಾಗಿ ಈ ಮುಂಚೆ ಇರುವಂತೆ ಬೆಳೆ ಬರುವ ತನಕ ಪೂರ್ಣಾವಧಿ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು.
ಟ್ರಾನ್ಸ್‌ಫಾರ್ಮರ್ ಸುಟ್ಟ 24 ಗಂಟೆಗಳ ಒಳಗಾಗಿ ಬದಲಾಯಿಸಬೇಕು. ಗಂಗಾಕಲ್ಯಾಣ ಯೋಜನೆಯಡಿ ಹಾಕಿರುವ ಕೊಳವೆ ಬಾವಿಗಳಿಗೂ ಕೂಡಾ ರೈತರ ಟಿಸಿಗೆ ಸಂಪರ್ಕ ಕಲ್ಪಿಸಲಾಗಿದ್ದು ಟಿಸಿಗಳು ಸುಟ್ಟು ಹೋಗುತ್ತಿವೆ. ಹೀಗಾಗಿ ಲಕ್ಷ್ಮೀಪುರ ಗ್ರಾಮದಲ್ಲಿ ಹೆಚ್ಚುವರಿ ಟಿಸಿ ಅಳವಡಿಸಬೇಕೆಂದು ಆಗ್ರಹಿಸಿದರು.
ರೈತ ಮುಖಂಡರಾದ ಎಂ.ಎಲ್. ಕೆ. ನಾಯ್ಡು, ಉಜ್ಜಿನಿ ಗೌಡ, ಶಂಕ್ರಪ್ಪ, ಸೋಮಶೇಖರ್, ಉಮಾಪತಿ, ನಿಂಗಪ್ಪ, ಅಂಗಡಿಯವರ ಮಲ್ಲಣ್ಣ, ಕರಿಸಿದ್ದಯ್ಯ, ಕುಮಾರಸ್ವಾಮಿ, ಚಂದ್ರಶೇಖರ್ ಮ್ಯಾಗಳಮನಿ, ಯರ್ರಿಸ್ವಾಮಿ, ಧರ್ಮಾಪುರ ಬಸಣ್ಣ, ಮಲ್ಲಣ್ಣ ಇನ್ನಿತರರಿದ್ದರು.