ಇದೇ ಜುಲೈ 14ರಂದು ಚಂದ್ರಯಾನ -3 ಬಾಹ್ಯಾಕಾಶ ನೌಕೆಯನ್ನು ಉಡ್ಡಯನ ಮಾಡಲಾಗಿತ್ತು. ಭೂಮಿಯಿಂದ ಸುಮಾರು 170 ಕಿ.ಮೀ. ಎತ್ತರದಲ್ಲಿ ದೀರ್ಘ ವೃತ್ತಾಕಾರದ 170ಗಿ36,500 ಕಿ.ಮೀ. ಕಕ್ಷೆಯಲ್ಲಿ ಭೂ ಪ್ರದಕ್ಷಿಣೆ ಅಂದೇ ಆರಂಭಿಸಿತು.
ಅದರ ಸುತ್ತುವಿಕೆಯ ಕಕ್ಷ ವೃದ್ಧಿಯನ್ನು ವಿಜ್ಞಾನಿಗಳು ಹೆಚ್ಚಿಸುತ್ತಾ ಹೋದರು. ಜುಲೈ 15 ರಂದು 173ಗಿ41,762 ಕಿ.ಮೀ.ಗೆ , ಜುಲೈ 17ರಂದು 226ಗಿ41, 603 ಕಿ.ಮೀ., ಜುಲೈ 18 ರಂದು 228ಗಿ51, 400 ಕಿ.ಮೀ., ಜುಲೈ 20 ರಂದು 233ಗಿ71, 351 ಕಿ.ಮೀ., ಜುಲೈ 25 ರಂದು 236ಗಿ1,27, 603 ಕಿ.ಮೀ. ಗಳಿಗೆ ನೌಕೆಯ ಕಕ್ಷೆಯನ್ನು ಎತ್ತರಿಸಲಾಯಿತು.
ಆಗಸ್ಟ್ 1ರಂದು ನೌಕೆಯನ್ನು 288ಗಿ3,69,328 ಕಿ.ಮೀ.ಗೆ ದೂಡಿದ್ದರು. ಅಂದು ಸೂಪರ್ ಮೂನ್. ಆ ದಿನ ಚಂದ್ರ ಭೂಮಿಯಿಂದ 3,57,700 ಕಿ.ಮೀ. ದೂರದಲ್ಲಿತ್ತು. ಅದು ಭೂಮಿಗೆ ಸರಾಸರಿ ದೂರಕ್ಕಿಂತ ಸುಮಾರು 27 ಸಾವಿರ ಕಿ.ಮೀ. ಹತ್ತಿರ. ಅಲ್ಲಿಯ ವರೆಗೂ ಭೂ ಗುರುತ್ವದಲ್ಲೇ ತಿರುಗು ತ್ತಿದ್ದ ರೋವರ್‌ನ್ನು ಆಗಸ್ಟ್ 1 ರಂದು ಚಂದ್ರನಲ್ಲಿಗೆ ಒಡ್ಡುವ ಪ್ರಕ್ರಿಯೆ.
ಆಗಸ್ಟ್ 5ರಂದು ಚಂದ್ರ 3, 65, 945 ಕಿ.ಮೀ. ದೂರದಲ್ಲಿದ್ದಾಗ ಸಂಜೆ 7:30 ಕ್ಕೆ ರೋವರ್ ಚಂದ್ರನ ಸಮೀಪ ಬಂತು. ಆಗ ಮತ್ತೂಂದು ಪ್ರಯೋಗ ಮಾಡಿದ ನಮ್ಮ ವಿಜ್ಞಾನಿಗಳು, ಈ ರೋವರ್‌ನ್ನು ಚಂದ್ರನ ಗುರುತ್ವ ಕಕ್ಷೆಗೆ ದೂಡಿದರು. ಈ ಸಾಹಸಮಯ ಪ್ರಯೋಗ ಶನಿವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ರವಿವಾರದಂದು ಚಂದ್ರಯಾನ -3 ನೌಕೆಯು ಮತ್ತೊಂದು ಮಹತ್ವದ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು ಕಕ್ಷೆ ಕಡಿತ ಕಾರ್ಯವನ್ನೂ ಯಶಸ್ವಿಯಾಗಿ ನಡೆಸಿದೆ. ಅಷ್ಟು ಮಾತ್ರವಲ್ಲದೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ಬಳಿಕ ನೌಕೆಯು ಚಂದ್ರನ ಕೆಲವೊಂದು ಛಾಯಾಚಿತ್ರಗಳನ್ನು ಮತ್ತು ವೀಡಿಯೋಗಳನ್ನು ಸೆರೆ ಹಿಡಿದಿದೆ. ನೌಕೆಯ ಕಕ್ಷೆಯನ್ನು ಮತ್ತಷ್ಟು ಕಡಿಮೆ ಮಾಡುವ ಮುಂದಿನ ಕಾರ್ಯಾಚರಣೆಯನ್ನು ಆಗಸ್ಟ್ 9ರಂದು ಮಧ್ಯಾಹ್ನ ನಡೆಸಲು ತೀರ್ಮಾನಿಸಲಾಗಿದೆ.
ಇನ್ನು ರೋವರ್ ಚಂದ್ರನಿಗೆ ದೀರ್ಘವೃತ್ತ ಪ್ರದಕ್ಷಿಣೆಗಳನ್ನು ಮುಗಿಸಿ ಕೊನೆಗೆ ವೃತ್ತಾಕಾರದ ಪ್ರದಕ್ಷಿಣೆ ಬಂದು ಲ್ಯಾಂಡರ್‌ನ್ನು ಇಳಿಸುವ ಅತೀ ಕ್ಲಿಷ್ಟಕರ ಪ್ರಯೋಗವನ್ನು ಆಗಸ್ಟ್ 23 ರಂದು ಸಂಜೆ 5:30ಕ್ಕೆ ನಡೆಸಲು ಇಸ್ರೋ ವಿಜ್ಞಾನಿಗಳು ನಿರ್ಧರಿಸಿದ್ದಾರೆ.
ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಮುಂದಿನ ಪಯಣ ಹಾಗೂ ಪ್ರಯೋಗಗಳು ಸಫಲವಾದರೆ ಅನಂತರ ಆ ಲ್ಯಾಂಡರ್‌ನಲ್ಲಿ ಅಡಗಿ ಕುಳಿತ ಪ್ರಜ್ಞಾನ, ಮುಂದಿನ 14 ದಿನಗಳ ಕಾಲ ಚಂದ್ರನ ಮೇಲೆ ಓಡಾಡಿ ಪ್ರಯೋಗಗಳನ್ನು ನಡೆಸಲಿದೆ. ಇಸ್ರೋ ವಿಜ್ಞಾನಿಗಳ ಈ ನಿರಂತರ ಪ್ರಯೋಗಗಳು ಸಫಲವಾಗಲಿ ಎಂಬುದು ಭಾರತೀಯರೆಲ್ಲರ ಹಾರೈಕೆ.
-ಡಾ| ಎ. ಪಿ. ಭಟ್, ಉಡುಪಿ