Advertisement

ವಿಜಯಪುರ: ಮುಂದುವರಿದ ಮುಷ್ಕರ: ಆದಾಯ ಖೋತಾ

07:03 PM Apr 09, 2021 | Nagendra Trasi |

ವಿಜಯಪುರ: ಆರನೇ ವೇತನಕ್ಕೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಯಾಣಿಕರ ಪರದಾಟ ಮುಂದುವರಿದಿದೆ. ಪರಿಣಾಮ ಗುರುವಾರವೂ ವಿಜಯಪುರ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಓಡಾಟ ಹೆಚ್ಚಿದ್ದು, ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದಲ್ಲಿ ಎರಡೂ ದಿನಗಳ ಮುಷ್ಕರದಿಂದಾಗಿ ಸುಮಾರು ಒಂದು ಕೋಟಿ ರೂ. ಆದಾಯಕ್ಕೆ ಹೊಡೆತ ಬಿದ್ದಿದೆ.

Advertisement

ಜಿಲ್ಲೆಯ ಮುದ್ದೇಬಿಹಾಳ ಬಸ್‌ ನಿಲ್ದಾಣದಿಂದ ಪೊಲೀಸ್‌ ಬಂದೋಬಸ್ತ್ನಲ್ಲಿ ನಾಲತವಾಡಕ್ಕೆ ಬೆಳಗ್ಗೆ ಬಸ್‌ ಸಂಚಾರ ಆರಂಭಿಸಿದ್ದು, ವಿಜಯಪುರ
ಜಿಲ್ಲಾ ಕೇಂದ್ರ ಬಸ್‌ ನಿಲ್ದಾಣದಿಂದ ಇಂಡಿ, ಸಿಂದಗಿ, ಮುದ್ದೇಬಿಹಾಳ ಭಾಗದಲ್ಲಿ ಬಸ್‌ ಸಂಚಾರ ಆರಂಭಗೊಂಡಿತ್ತು. ಜಿಲ್ಲೆಯಲ್ಲಿ ರಾತ್ರಿ ವೇಳೆ ದೂರದ ನಗರಗಳಿಗೆ ಪ್ರಯಾಣಿಸುವ ಖಾಸಗಿ ಬಸ್‌ಗಳು ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಗುರುವಾರ ಹಗಲು ವೇಳೆ ಕಲಬುರಗಿ, ಬೆಳಗಾವಿ, ಹೊಸಪೇಟೆ ಹೀಗೆ ವಿವಿಧ ನಗರಗಳಿಗೆ ಪ್ರಯಾಣಿಕರಿಗೆ ಸೇವೆ ನೀಡಿದವು.

ಸಾರಿಗೆ ಸಂಸ್ಥೆಯ ನೌಕರರ ಮೊದಲ ದಿನದ ಮುಷ್ಕರದ ಮಧ್ಯೆಯೂ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಹೆಚ್ಚಿತ್ತು. ಆದರೆ ಎರಡನೇ ದಿನವಾದ ಗುರುವಾರ ಬಹುತೇಕ ಕುಸಿತವಾಗಿದೆ. ಅಂದಾಜು ಎರಡೇ ದಿನದಲ್ಲಿ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದಲ್ಲಿ ಸುಮಾರು 1 ಕೋಟಿ ರೂ. ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಈ ಮಧ್ಯೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಗೆ ಸೇರಿದ ವಿಜಯಪುರ ವಿಭಾಗದಲ್ಲಿ ಮುಷ್ಕರ ಆರಂಭಿಸಿದ ಮೊದಲ ದಿನವಾದ ಏ.7 ರಂದು 455
ಅನುಸೂಚಿ ಕಾರ್ಯಾಚರಣೆ ಮಾಡಿದ್ದು, ವಿಭಾಗಕ್ಕೆ 32.59 ಲಕ್ಷ ರೂ. ಆದಾಯ ಬಂದಿದೆ. 215 ಅನುಸೂಚಿ ರದ್ದು, 38.70 ಲಕ್ಷ ರೂ. ಆದಾಯ ಖೋತಾ ಆಗಿದೆ.

ಮುಷ್ಕರದ ಎರಡನೇ ದಿನವೂ ಬಹುತೇಕ ಸಿಬ್ಬಂದಿ ಕರ್ತವ್ಯಕ್ಕೆ ಗೈರಾದ ಕಾರಣ ಗುರುವಾರ 22 ಅನುಸೂಚಿ ಮಾತ್ರ ಕಾರ್ಯಾಚರಣೆ ಮಾಡಿದ್ದು, ಕೇವಲ 10
ಲಕ್ಷ ರೂ. ಆದಾಯ ನಿರೀಕ್ಷೆ ಇದೆ. ಈ ಮಧ್ಯೆ 648 ಅನುಸೂಚಿ ರದ್ದಾಗಿ 60 ಲಕ್ಷ ರೂ. ಆದಾಯ ಕೊರತೆ ಆಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಇದರ ಮಧ್ಯೆ ಸಾರಿಗೆ ಸಂಸ್ಥೆಯ ಮುಷ್ಕರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದರೂ ಬಹುತೇಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಹೀಗಾಗಿ
ಸಂಸ್ಥೆಯ ವಸತಿ ಸಮುಚ್ಚಯದಲ್ಲಿರುವ ಕರ್ತವ್ಯಕ್ಕೆ ಗೈರಾದ ಸಿಬ್ಬಂದಿಗೆ ಸಂಸ್ಥೆಯ ಮನೆ ಹಂಚಿಕೆ ರದ್ದು  ತಿಳಿವಳಿಕೆ ಪತ್ರ ರವಾನಿಸಲಾಗಿದೆ. ಬಾಗಿಲು ಹಾಕಿದ
ಕೆಲವು ಸಿಬ್ಬಂದಿ ಮನೆಗಳ ಬಾಗಿಲಿಗೆ ತಿಳಿವಳಿಕೆ ಪತ್ರ ಅಂಟಿಸಿ, ಎಚ್ಚರಿಕೆ ನೀಡಿದೆ.

Advertisement

ಮತ್ತೂಂದೆಡೆ ಮುಷ್ಕರದ ಕರೆಯ ಮಧ್ಯೆಯೂ ನಾಯಕರ ನಿರ್ದೇಶನ ಮೀರಿ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಯನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳು,
ಸಾರ್ವಜನಿಕರು ಶಾಲು ಹೊದಿಸಿ ಸನ್ಮಾನಿಸಿ, ಪ್ರೋತ್ಸಾಹಿಸುವ ಕೆಲಸ ನಡೆಸಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ಮೇಲೆ ಮುಷ್ಕರ ನಿರತರಿಂದ
ಹಲ್ಲೆ ನಡೆಯುವ ಸಂಭವನೀಯ ಅಪಾಯದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಬಸ್‌ ಡಿಪೋ, ಬಸ್‌ ನಿಲ್ದಾಣಗಳಲ್ಲಿ ಪೊಲೀಸ್‌
ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಈ ಮಧ್ಯೆ ವಿಜಯಪುರ ನಗರದ ಕೇಂದ್ರ ಬಸ್‌ ನಿಲ್ದಾಣ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಮುಷ್ಕರದ  ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಬಸ್‌ ನಿಲ್ದಾಣಗಳಲ್ಲಿ
ಪ್ರಯಾಣಿಕರ ಕೊರತೆ ಕಂಡು ಬಂತು. ಪರಿಣಾಮ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ  ಕ್ಷೀಣಿಸಿದ್ದು, ಬಸ್‌ಗಳೂ ಇಲ್ಲದ ನಿಲ್ದಾಣಗಳು ಬಿಕೋ
ಎನ್ನುತ್ತಿದ್ದವು.

ಸಾರಿಗೆ ಸಂಸ್ಥೆ ಮುಷ್ಕರದ ಹಿನ್ನೆಲೆಯಲ್ಲಿ ಎರಡನೇ ದಿನವೂ ಖಾಸಗಿ ವಾಹನಗಳ ಓಡಾಟ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಮಿನಿ ಬಸ್‌, ಮ್ಯಾಕ್ಸಿಕ್ಯಾಬ್‌,
ಟಂಟಂ ಸೇರಿದಂತೆ ಪ್ರಯಾಣಿಕರಿಗೆ ಖಾಸಗಿ ವಾಹನಗಳ ಅವಲಂಬನೆ ಅನಿವಾರ್ಯವಾಗಿತ್ತು. ಮುಷ್ಕರ ಇದ್ದರೂ ತುರ್ತು ಕೆಲಸಗಳಿಗೆ ದೂರ ಊರುಗಳಿಗೆ ಹೋಗಲು ನಿಲ್ದಾಣಕ್ಕೆ ಬಂದಿದ್ದ ಹಲವು ಪ್ರಯಾಣಿಕರು ಸಂಸ್ಥೆಯ ಬಸ್‌ ಓಡುವ ನಿರೀಕ್ಷೆಯಲ್ಲಿ ಕಾಯುತ್ತಲೇ ಇದ್ದದ್ದೂ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next