Advertisement

ಕೊಡಗಿನಲ್ಲಿ ಮುಂದುವರಿದ ಮಳೆ ಆರ್ಭಟ

01:25 AM Aug 08, 2019 | sudhir |

ಮಡಿಕೇರಿ: ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿ ರುವ ಕೊಡಗು ಜಿಲ್ಲೆ ಈ ಬಾರಿಯೂ ಆರ್ಭಟಿಸು ತ್ತಿರುವ ಆಶ್ಲೇಷನ ದಾಳಿಗೆ ಸಿಲುಕಿ ನಲುಗಿದೆ. ಪ್ರವಾಹಕ್ಕೆ ಸಿಲುಕಿದ ಹಲವು ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

Advertisement

ಬುಧವಾರ ಗಾಳಿ ತೀವ್ರತೆ ಪಡೆದುಕೊಂಡಿದೆ. ಮಧ್ಯಾಹ್ನದ ವರೆಗೆ ಎಲ್ಲೆಡೆ ಸುರಿದ ಧಾರಾಕಾರ ಮಳೆಗೆ ಗ್ರಾಮಗಳು ಹಾಗೂ ರಸ್ತೆ, ಸೇತುವೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಶಾಲೆ, ಕಾಲೇಜು ಗಳಿಗೆ ಹಾಗೂ ಅಂಗನವಾಡಿಗಳಿಗೆ ಆ. 8 ಮತ್ತು 9ರಂದು ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ.

ಭಾಗಮಂಡಲ ಸಂಪೂರ್ಣವಾಗಿ ಜಲಾವೃತವಾ ಗಿದ್ದು, ದೇಗುಲದ ಮೆಟ್ಟಿಲಿನವರೆಗೂ ನೀರು ಆವರಿಸಿದೆ. ಕಾವೇರಿ ಹಾಗೂ ಉಪನದಿಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಶ್ರೀ ಭಗಂಡೇಶ್ವರ ದೇವಾಲಯದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. “ಕಾವೇರಿ ಶಾಂತಳಾಗು’ ಎಂದು ಅರ್ಚಕ ಸೂರ್ಯ ಭಟ್‌ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸುಮನ್‌ ಡಿ.ಪಿ. ಹಾಗೂ ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯ ಅವರು ಪ್ರವಾಹಕ್ಕೆ ತುತ್ತಾಗಿರುವ ಗ್ರಾಮಗಳಾದ ಐಕೊಳ, ನೆಲ್ಯಹುದಿಕೇರಿ ಹಾಗೂ ಕರಡಿಗೋಡು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂತ್ರಸ್ತರ ಸ್ಥಳಾಂತರ
ಕರಡಿಗೋಡು ಭಾಗದ ಮನೆಗಳು ಜಲಾವೃತಗೊಂ ಡಿದ್ದು, ನಿವಾಸಿಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನೆಲ್ಯಹುದಿಕೇರಿ ಭಾಗದ 8 ಕುಟುಂಬಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

Advertisement

ಸೇತುವೆಗಳಿಗೂ ಹಾನಿ
ಅಭ್ಯತ್‌ಮಂಗಲ ಗ್ರಾಮದ ಬಳಿಯ ಸೇತುವೆ ಮತ್ತು ರಸ್ತೆಗಳು ಜಲಾವೃತಗೊಂಡು ಗ್ರಾಮಸ್ಥರ ಸಂಚಾರಕ್ಕೆ ಅಡ್ಡಿಯಾಗಿದೆ. ದಕ್ಷಿಣ ಕೊಡಗಿನ ಹಳ್ಳಿಗಟ್ಟು ಮತ್ತು ಬೇಗೂರು ಸಂಪರ್ಕ ಸೇತುವೆ ಲಕ್ಷ್ಮಣತೀರ್ಥ ನದಿಯ ಪ್ರವಾಹದಿಂದ ಮುಳುಗಡೆಯಾಗಿದೆ. ಹೆೈಸೊಡೂÉರು-ಬಿರುನಾಣಿ ರಸ್ತೆಯ ಸೇತುವೆ ಬಳಿ ಭೂ ಕುಸಿತವಾಗಿರುವುದರಿಂದ ಈ ರಸ್ತೆಯಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.

ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಸೇತುವೆ ಬಳಿ ನೀರಿನ ಹರಿವಿಗೆ ಅಡ್ಡಿಯುಂಟಾಗಿ ಗ್ರಾಮಸ್ಥರಲ್ಲಿ ಆತಂಕ ತಲೆದೋರಿತು.

ಜೋಡುಪಾಲ: ರಸ್ತೆಯಲ್ಲಿ ಪ್ರವಾಹ
ಜಲಸ್ಫೋಟದಿಂದ ಕಳೆದ ವರ್ಷ ಭಾರೀ ನಷ್ಟಕ್ಕೆ ಒಳಗಾಗಿದ್ದ ಜೋಡುಪಾಲದಲ್ಲಿ ಬುಧವಾರ ಸುರಿದ ಭಾರೀ ಮಳೆಗೆ ಬೃಹತ್‌ ಗಾತ್ರದ ಮರವೊಂದು ರಸ್ತೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿತು. ತತ್‌ಕ್ಷಣ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಮರವನ್ನು ತೆರವುಗೊಳಿಸಿದರಾದರೂ ರಸ್ತೆ ತುಂಬಾ ನೀರಿನ ಹರಿವು ನಿರಂತರವಾಗಿದೆ.

ತಾಳತ್ತಮನೆಯಲ್ಲಿ ಕೊಚ್ಚಿ ಹೋದ ತಡೆಗೋಡೆ
ಕಳೆದ ವರ್ಷ ಕುಸಿತಗೊಂಡಿದ್ದ ತಾಳತ್ತಮನೆ ಸಮೀಪದ ಮಂಗಳೂರು ರಸ್ತೆಗೆ ಅಳವಡಿಸಲಾಗಿದ್ದ ತಾತ್ಕಾಲಿಕ ಮರಳಿನ ತಡೆಗೋಡೆ ಕೊಚ್ಚಿ ಹೋಗಿದೆ.
ಜಿಲ್ಲಾಡಳಿತವು ಭಾರೀ ವಾಹನಗಳ ಸಂಚಾರದಲ್ಲಿ ಕೆಲವು ಮಾರ್ಪಾಡು ಮಾಡುವ ಸಾಧ್ಯತೆ ಇದೆ. ಬ್ಯಾರೀಕೇಡ್‌ಗಳನ್ನು ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next