ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಆರ್ಭಟ ಜೋರಾಗಿದ್ದು ಹಲವೆಡೆ ಮಳೆಯಿಂದ ಅವಾಂತರಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.
ಹಲವೆಡೆ ಮುಂಗಾರು ಅವಧಿಯ ಆರಂಭದಲ್ಲಿದ್ದ ಅನಾವೃಷ್ಟಿಯ ತೆರೆ ಸರಿದು ಅತಿವೃಷ್ಟಿಯ ಛಾಯೆ ಆವರಿಸಿದೆ. ಕೆಲವೆಡೆ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಇನ್ನೂ ಕೆಲವೆಡೆ ಕಳೆದೊಂದು ವಾರದಿಂದೀಚೆಗೆ ಭರ್ಜರಿ ಮಳೆಯಾಗುತ್ತಿದೆ. ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಾಗಿದ್ದು, ಪ್ರವಾಹ ಪರಿಸ್ಥಿತಿಯೂ ತಲೆದೋರುತ್ತಿದೆ.
ಮುಂಗಾರು ಪೂರ್ವ ಅವಧಿಯಿಂದ ಈವರೆಗೆ ಸಿಡಿಲು ಬಡಿದು ಅನೇಕರು ಮೃತಪಟ್ಟಿದ್ದರೆ, ಮರ, ಗೋಡೆ ಕುಸಿದು ಸಾವಿಗೀಡಾಗಿದ್ದಾರೆ. ಒಟ್ಟಾರೆ 27 ಸಾವು ಸಂಭವಿಸಿದ್ದು, ಕಳೆದೊಂದು ವಾರದಿಂದೀಚೆಗೆ 7 ಸಾವು ಸಂಭವಿಸಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ಗೋಕುಲದಾಸ್ ಪ್ರಭು (53), ಹೆಬ್ರಿಯ ರಚನಾ (12), ಕೊಲ್ಲೂರಿನ ಅರಿಶಿನಗುಂಡಿ ಜಲಪಾತದ ಬಳಿ ಶರತ್ ಕುಮಾರ್ (23) ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಕಲಬುರಗಿಯ ಬಿರಾಳ (ಬಿ)ದಲ್ಲಿ ಮನೆ ಕುಸಿದು ಬಸವರಾಜು (35) ಮೃತಪಟ್ಟಿದ್ದಾರೆ. ಕಲಬುರಗಿಯ ಮಿಸ್ಟಾ ನಗರದಲ್ಲಿ ಮಳೆ ನೀರು ತುಂಬಿದ್ದ ಗುಂಡಿಯಲ್ಲಿ ಬಿದ್ದು ಮಹಮದ್ ನಹೀಮ್ (4) ಮೃತಪಟ್ಟಿದ್ದು, ಹಾವೇರಿಯ ಕುಂಬಳೂರಿನಲ್ಲಿ ಮನೆ ಕುಸಿದು ಭಾಗ್ಯ ಚಲದಮರದ್ (3) ಎಂಬ ಹಸುಗೂಸು ಅಸುನೀಗಿದೆ.
ಇದೇ ಕಾರಣದಿಂದ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವೇರಿಯಲ್ಲಿ ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆಯನ್ನೂ ನಡೆಸಿದರು. ಕೊಡಗು ಜಿಲ್ಲೆಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಅತಿ ಹೆಚ್ಚು ಮಳೆ ಬಿದ್ದಿರುವ ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ತಂಡವಾಗಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಬುಧವಾರ ಸಂಜೆ 4 ಗಂಟೆಗೆ ರಾಜ್ಯದ ಹವಾಮಾನ ಮತ್ತು ಮಳೆ, ಬೆಳೆ ಪರಿಸ್ಥಿತಿ ಕುರಿತಂತೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳ ಜತೆಗೆ ಸಿಎಂ ವಿಡಿಯೋ ಸಂವಾದ ನಡೆಸಲಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ. ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿರುವರು.