Advertisement

Red Alert ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮುಂದುವರಿದ ಮಳೆ

12:01 AM Jul 18, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆ ಬುಧವಾರವೂ ಮುಂದುವರಿದಿದ್ದು, ಕೆಲವು ಕಡೆಗಳಲ್ಲಿ ಸಮಸ್ಯೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಜು.18ರಂದೂ “ರೆಡ್‌ ಅಲರ್ಟ್‌’ ಮುಂದುವರಿದಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ.

Advertisement

ಭಾರೀ ಮಳೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ ರಾಷ್ಟ್ರೀಯ ಹೆದ್ದಾರಿ ಆಗಾಗ್ಗೆ ಮುಳುಗಡೆಯಾಗುತ್ತಿದೆ. ಗುರು ವಾಯನಕೆರೆ ಶಕ್ತಿನಗರ ಬಳಿ ರಾಜ್ಯ ಹೆದ್ದಾರಿ ಸಮೀಪದ ಸಮತಟ್ಟು ಪ್ರದೇಶದಲ್ಲಿ ನಿಂತ ನೀರು ರಸ್ತೆಯನ್ನು ಆವರಿಸಿದೆ.

ದಿಡುಪೆ, ಕುಕ್ಕಾವು, ನಾರಾವಿ, ಧರ್ಮಸ್ಥಳ ಸಹಿತ ಭಾರಿ ಮಳೆಯಾಗಿದೆ ಧರ್ಮಸ್ಥಳ ಸ್ನಾನ ಘಟ್ಟದಲ್ಲಿ ನೇತ್ರಾವತಿ ನೀರಿನ ಮಟ್ಟ ಏರಿಕೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಮುಂಡಾಜೆ ಬಳಿ ವಾಹನ ಸಂಚಾರ ಸಾಧ್ಯವಾಗದಷ್ಟು ಕೆಸರುಮಯ ವಾಗಿದೆ. ಇಚ್ಲಂಪಾಡಿ ಗುಂಡ್ಯ ಹೊಳೆಯ ನೀರು ತೋಟ, ರಸ್ತೆಗೆ ನುಗ್ಗಿದೆ. ಮಂಗಳೂರಿನಲ್ಲಿ ಬೆಳಗ್ಗಿನಿಂದ ಬಿಟ್ಟು ಬಿಟ್ಟು ಮಳೆಯಾಗಿದೆ.

ಪುತ್ತೂರು: ಮುರಿದು ಬಿದ್ದ ಕಂಬ
ಪುತ್ತೂರು: ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಕಾಣಿಯೂರು ಸುಬ್ರಹ್ಮಣ್ಯ ಹೆದ್ದಾರಿಯ ದರ್ಬೆಯಲ್ಲಿ ಡಿವೈಡರ್‌ಗೆ ಹಾಕಿದ್ದ ಕಂಬ ಮುರಿದು ಬಿದ್ದಿದೆ.

ಬೆಳ್ತಂಗಡಿ: ಹೆದ್ದಾರಿಯಲ್ಲಿ ಕೃತಕ ನೆರೆ
ಬೆಳ್ತಂಗಡಿ: ಜು.17 ರಂದು ಬೆಳ್ತಂಗಡಿ ತಾಲೂಕಿನಲ್ಲಿ ಮುಂಜಾನೆಯಿಂದ ಬೆಂಬಿಡದೆ ಧಾರಾಕಾರ ಮಳೆ ಸುರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸಹಿತ ಅಲ್ಲಲ್ಲಿ ಕೃತಕ ನೆರೆ ಉಂಟಾಗಿದೆ. ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ.

Advertisement

ಗುರುವಾಯನಕೆರೆ-ಕಾರ್ಕಳ ರಾಜ್ಯ ಹೆದ್ದಾರಿಯ ಗುರುವಾಯನಕೆರೆ ಶಕ್ತಿನಗರ ಸಮೀಪ ರಸ್ತೆ ಅಂಚಿನಲ್ಲಿ ಸಮತಟ್ಟು ಪ್ರದೇಶದಲ್ಲಿ ತುಂಬಿದ ನೀರು ರಸ್ತೆಗೆ ನುಗ್ಗಿದ ಪರಿಣಾಮ ರಸ್ತೆ ಹೊಳೆಯಂತಾಯಿತು.ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಚಿಕ್ಕಮಗಳೂರು ಸಾಗುವ ರಸ್ತೆಯ ಉಜಿರೆಯಲ್ಲಿ ತಾಸುಗಟ್ಟಲೆ ಮಳೆ ನೀರು ರಸ್ತೆಯ ಮೇಲೆ ಹರಿದಿದೆ.

ಸಂಪಾಜೆ: ಮರ ಬಿದ್ದು ರಸ್ತೆ ಸಂಚಾರ ಸ್ಥಗಿತ
ಅರಂತೋಡು: ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಬುಧವಾರ ಬೆಳಗ್ಗೆ ಕೊಡಗು ಸಂಪಾಜೆ ಅರಣ್ಯ ತಪಾಸಣೆ ಚೆಕ್‌ಪೋಸ್ಟ್‌ ಬಳಿ ರಸ್ತೆಗೆ ಮರ ಬಿದ್ದು, ಮಾಣಿ – ಮೈಸೂರು ರಸ್ತೆ ಸಂಚಾರ ವ್ಯತ್ಯಯವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬಂದಿ ಆಗಮಿಸಿ ಮರ ತೆರವುಗೊಳಿಸಿದ ಬಳಿಕ ಸಂಚಾರ ಸುಗಮಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next