Advertisement

ದೇಶದ್ರೋಹದ ವಿರುದ್ಧ ಮುಂದುವರಿದ ಕ್ರೋಧ

11:44 PM Feb 22, 2020 | Lakshmi GovindaRaj |

ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಿತ್ತಿ ಫ‌ಲಕ ಪ್ರದರ್ಶಿಸಿದ ಆರ್ದ್ರಾ ನಾರಾಯಣ್‌ ವಿರುದ್ಧದ ಆಕ್ರೋಶ ಮುಂದುವರಿದಿದೆ. ಇಂತಹ ದೇಶದ್ರೋಹಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯದ ಹಲವೆಡೆ ಹಿಂದೂಪರ, ಕನ್ನಡಪರ ಸಂಘಟನೆಗಳು ಶನಿವಾರವೂ ಪ್ರತಿಭಟನೆ ನಡೆಸಿದವು. ಜೊತೆಗೆ, ವಿವಿಧ ರಾಜಕೀಯ ಪಕ್ಷಗಳ ನಾಯಕರ, ವಿವಿಧ ಕ್ಷೇತ್ರಗಳ ಗಣ್ಯರ ಖಂಡನಾ ಹೇಳಿಕೆಗಳು ಶನಿವಾರವೂ ದಾಖಲಾದವು. ದೇಶದ್ರೋಹಿಗಳ ವಿರುದ್ಧ ರಾಜ್ಯಾದ್ಯಂತ ವ್ಯಕ್ತವಾದ ಕ್ರೋಧದ ಕಿಡಿಗಳಿವು.‌

Advertisement

ರಾಜ್ಯದಲ್ಲಿ ಮುಂದುವರಿದ ಪ್ರತಿಭಟನೆ
ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಿತ್ತಿ ಫ‌ಲಕ ಪ್ರದರ್ಶಿಸಿದ ಆರ್ದ್ರಾ ನಾರಾಯಣ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ದೇಶದ್ರೋಹಿ ಗಳನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಹಿಂದೂಪರ, ಕನ್ನಡಪರ ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿದವು.

ಪಾಕ್‌ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾಳನ್ನು ದೇಶದಿಂದ ಗಡೀಪಾರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿ ಕಾರಿಯವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಅಮೂಲ್ಯ, ಅರ್ದ್ರಾ ಹಾಗೂ ಕಾರ್ಯಕ್ರಮ ಸಂಘಟಕರ ಗಡಿಪಾರಿಗೆ ಒತ್ತಾಯಿಸಿ ಹೂವಿನಹಡಗಲಿಯಲ್ಲಿ ಎಬಿವಿಪಿ ಹಾಗೂ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಇದೇ ವೇಳೆ, ಮೂಡಿಗೆರೆಯ ಲಯನ್ಸ್‌ ವೃತ್ತದಲ್ಲಿ ಶ್ರೀರಾಮ ಸೇನೆ ಸಂಘಟನೆಯ ಕಾರ್ಯಕರ್ತರು, ದೊಡ್ಡಬಳ್ಳಾಪುರದ ಬಸ್‌ ನಿಲ್ದಾಣದಲ್ಲಿನ ಡಾ.ಅಂಬೇಡ್ಕರ್‌ ಪ್ರತಿಮೆ ಹಾಗೂ ನೆಲಮಂಗಲದ ಪರಿವೀಕ್ಷಣೆ ಮಂದಿರದ ಎದುರು, ಕರವೇ (ಪ್ರವೀಣ್‌ ಶೆಟ್ಟಿ ಬಣ) ಕಾರ್ಯಕರ್ತರು, ಮಧುಗಿರಿಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ಹೊರ ಹಾಕಿದರು. ಇದೇ ವೇಳೆ, ಬೆಂಗಳೂರು, ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ಹುಬ್ಬಳ್ಳಿ, ಕಲಬುರಗಿ, ಶಿವಮೊಗ್ಗ, ಉಡುಪಿ, ಮಂಗಳೂರು ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು. ಬ್ಯಾಡಗಿಯಲ್ಲಿ ಫೆ.25 ರಂದು ಪ್ರತಿಭಟನೆ ನಡೆಯಲಿದೆ.

ಅಮೂಲ್ಯ ಎನ್‌ ಕೌಂಟರ್‌ ಮಾಡಿ ದ್ರೆ 10 ಲಕ್ಷ ರೂ.!
ಹೊಸಪೇಟೆ: “ಪಾಕಿ ಸ್ತಾನ ಜಿಂದಾ ಬಾದ್‌’ ಘೋಷಣೆ ಕೂಗಿದ ಅಮೂಲ್ಯ ಲಿಯೋನಾಳನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬೇಡಿ. ಮಾಡಿದರೆ ನಾವೇ ಆಕೆಯ ಎನ್‌ಕೌಂಟರ್‌ ಮಾಡುತ್ತೇವೆ. ಇಲ್ಲವೇ ಎನ್‌ ಕೌಂಟರ್‌ ಮಾಡಿದವರಿಗೆ 10 ಲಕ್ಷ ರೂ.ಬಹುಮಾನ ನೀಡುತ್ತೇವೆ ಎಂದು ಶ್ರೀರಾಮ ಸೇನೆ ಬಳ್ಳಾರಿ ಜಿಲ್ಲಾಧ್ಯಕ್ಷ ಸಂಜೀವ ಮರಡಿ ಹೇಳಿದ್ದಾರೆ ಎನ್ನಲಾದ ವಿಡಿಯೋ ತುಣುಕು ಈಗ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಪಾಕ್‌ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಕ್ರಮ ಖಂಡಿಸಿ ಶ್ರೀರಾಮಸೇನೆ, ನಗರದ ರೋಟರಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರು ಈ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ದೇಶದ್ರೋಹಿ ಹೇಳಿಕೆ ನೀಡಿದ ಅಮೂಲ್ಯಗೆ ರಾಜ್ಯ-ಕೇಂದ್ರ ಸರ್ಕಾರಗಳು ಜಾಮೀನು ನೀಡಬಾರದು. ಒಂದೊಮ್ಮೆ ನೀಡಿದರೆ, ನಾವೇ ಆಕೆಯನ್ನು ಎನ್‌ಕೌಂಟರ್‌ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪ್ರಚೋದನಕಾರಿ ಭಾಷಣ: ಪಠಾಣ್‌ ವಿರುದ್ಧ ಪ್ರಕರಣ
ಕಲಬುರಗಿ: ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಕಾಯ್ದೆಗಳನ್ನು ವಿರೋಧಿಸಿ ನಡೆದ ಸಮಾವೇಶದಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದ ಮುಂಬೈನ ಮಾಜಿ ಶಾಸಕ, ಎಐಎಂಐಎಂ ಪಕ್ಷದ ವಕ್ತಾರ ವಾರಿಸ್‌ ಪಠಾಣ್‌ ವಿರುದ್ಧ ಕಲಬುರಗಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ನಗರದ ಪೀರ್‌ ಬಂಗಾಲಿ ಮೈದಾನದಲ್ಲಿ ಫೆ.15ರಂದು ಎಐಎಂಐಎಂ ಪಕ್ಷ ಆಯೋಜಿಸಿದ್ದ ಸಮಾವೇಶದಲ್ಲಿ ಪಠಾಣ್‌ ಅವರು, ವರ್ಗಗಳ ಮಧ್ಯೆ ದ್ವೇಷ ಹುಟ್ಟಿಸುವ ಭಾಷಣ ಮಾಡಿದ್ದಾರೆ.

ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲೆ ಶ್ವೇತಾ ಓಂಪ್ರಕಾಶ ರಾಠೊಡ ಎಂಬುವರು ಭಾಷಣದ ವಿಡಿಯೋ, ಆಡಿಯೋ ಸಾಕ್ಷ ಸಮೇತ ಫೆ.21ರಂದು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ನಡುವೆ, ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಕಲಬುರಗಿ ಮಹಾನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಅವರಿಗೆ ದೂರವಾಣಿ ಕರೆ ಮಾಡಿ ಪ್ರಕರಣದ ಮಾಹಿತಿ ಪಡೆದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಶತ್ರು ದೇಶದ ಗುಣಗಾನ ಮಾಡುವ ಅಮೂಲ್ಯನಂತವರ ಮಾನಸಿಕತೆ ಬಹಳ ಅಪಾಯಕಾರಿ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಕೆ ತನ್ನ ಬೆನ್ನ ಹಿಂದೆ ಮಾರ್ಗದರ್ಶಕರ ತಂಡವೇ ಇದೆ ಅಂದಿದ್ದಳು. ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸಮಾಜದ ಒಳಗಿರುವ ಶತ್ರುಗಳನ್ನು ನಿಗ್ರಹಿಸುವ ಹೊಣೆಗಾರಿಕೆ ಸಮಾಜದ್ದೇ ಆಗಿದೆ.
-ಸಿ.ಟಿ.ರವಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next