Advertisement

ಮುಂದುವರಿದ ನಾಮಪತ್ರ ಸಲ್ಲಿಕೆ ಭರಾಟೆ

12:21 PM Apr 22, 2018 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಶನಿವಾರವೂ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ಆರ್‌. ರೆಡ್ಡಿ ಜಯನಗರದಿಂದ ಹಾಗೂ ಗೋವಿಂದರಾಜನಗರ ಕ್ಷೇತ್ರದಿಂದ ಪ್ರಿಯಕೃಷ್ಣ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.

Advertisement

ನಾಮಪತ್ರ ಸಲ್ಲಿಕೆಗೂ ಮುನ್ನ ಸೌಮ್ಯಾ ರೆಡ್ಡಿ ಅವರು ಶನಿವಾರ ಬೆಳಗ್ಗೆ ಜಯನಗರದ ಮಯ್ನಾ ಹೋಟೆಲ್‌ ಬಳಿಯ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಆರ್‌.ರೋಷನ್‌ ಬೇಗ್‌, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಳಿಕ ಸಹೋದರ ರಾಜ್‌ಕುಮಾರ್‌ ಆರ್‌. ರೆಡ್ಡಿ, ಪಾಲಿಕೆ ಸದಸ್ಯ ಮೊಹಮ್ಮದ್‌ ರಿಜ್ವಾನ್‌, ಕಾಂಗ್ರೆಸ್‌ ಮುಖಂಡ ಯು.ಬಿ.ವೆಂಕಟೇಶ್‌ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೌಮ್ಯಾರೆಡ್ಡಿ, ಕ್ಷೇತ್ರದಲ್ಲಿ ಜನರ ಸ್ಪಂದನೆ ಉತ್ತಮವಾಗಿದೆ. ಹೋರಾಟದ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ರಾಜಕೀಯ ಕ್ಷೇತ್ರ ಪ್ರವೇಶಿಸುತ್ತಿದ್ದೇನೆ. ಸಮಾಜದಲ್ಲಿ ಏನಾದರೂ ಬದಲಾವಣೆ ತರಬೇಕೆಂಬ ಆಸೆ ಬಾಲ್ಯದಿಂದಲೂ ಇತ್ತು. ನಿರುದ್ಯೋಗ ನಿವಾರಣೆ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಸೇರಿದಂತೆ ಸಮಾಜಮುಖೀ ಕಾರ್ಯಗಳಲ್ಲಿ ಸಕ್ರಿಯವಾಗಿದ್ದೇನೆ. ಪಕ್ಷ ಸಂಘಟನೆಯಲ್ಲೂ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.

ಗೋವಿಂದರಾಜನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಪ್ರಿಯಕೃಷ್ಣ  ಅವರು ಸಹ  ವಸತಿ ಸಚಿವ ಎಂ.ಕೃಷ್ಣಪ್ಪ ಹಾಗೂ ಕಾಂಗ್ರೆಸ್‌ ಪಾಲಿಕೆ ಸದಸ್ಯರು ಮತ್ತು  ಮುಖಂಡರ ಜತೆ ಕ್ಷೇತ್ರದಲ್ಲಿ ಮೆರವಣಿಗೆ ನಡೆಸಿ ನಂತರ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು ಮತ್ತೂಮ್ಮೆ ಜನತೆ ಆರ್ಶೀವಾದ ಮಾಡುವ ಭರವಸೆಯಿದೆ ಎಂದು ಹೇಳಿದರು. ಪ್ರಿಯಕೃಷ್ಣ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದರಾದರೂ ಶನಿವಾರವೂ ಮತ್ತೂಂದು ಸೆಟ್‌ ನಾಮಪತ್ರ ಸಲ್ಲಿಸಿದರು.

ಚಿಕ್ಕಪೇಟೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಡಾ.ಡಿ.ಹೇಮಚಂದ್ರ ಸಾಗರ್‌, ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಎಸ್‌.ಮಂಜುನಾಥ್‌ ಶನಿವಾರ  ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ, ಎಚ್‌.ಎಸ್‌. ಮಂಜುನಾಥ್‌, 27 ವರ್ಷ ವಯಸ್ಸಿನವಾದ ನನಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. ಕಾಂಗ್ರೆಸ್‌ ಪಕ್ಷ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಯುವಕರನ್ನು ಪ್ರೋತ್ಸಾಹಿಸುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಹೇಳಿದರು.

Advertisement

ರವಿಕೃಷ್ಣಾರೆಡ್ಡಿ ನಾಮಪತ್ರ ಸಲ್ಲಿಕೆ: ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರವಿಕೃಷ್ಣಾರೆಡ್ಡಿ ಅವರು ನಾಮಪತ್ರ ಸಲ್ಲಿಸಿದರು. “ಒಂದು ಓಟು ಕೊಡಿ- ನೋಟು ಕೊಡಿ’ ಅಭಿಯಾನದ ಮೂಲಕ ಸಂಗ್ರಹಿಸಿದ ದೇಣಿಗೆ ಹಣದಿಂದ ಠೇವಣಿ ಪಾವತಿಸಿದ್ದು ವಿಶೇಷವಾಗಿತ್ತು. ರಾಗಿಗುಡ್ಡದ ಬಳಿಯಿಂದ ಪಾದಯಾತ್ರೆಯಲ್ಲಿ ತೆರಳಿ ಅವರು ನಾಮಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಭ್ಯರ್ಥಿಗಳು ಚುನಾವಣೆಯಲ್ಲಿ ಅಕ್ರಮ, ಅನಾಚಾರ ಎಸಗಿ ಆಯ್ಕೆಯಾಗಿ ಮುಂದೆ ಮತ್ತಷ್ಟು ಭ್ರಷ್ಟಾಚಾರ ನಡೆಸಲು ಅಣಿಯಾಗುತ್ತಿದ್ದಾರೆ. ಇದಕ್ಕೆ ಅಂತ್ಯ ಹಾಡಬೇಕಿದೆ. ಹಾಗಾಗಿ ಜಯನಗರದಲ್ಲಿ ನಾವು ಮಾದರಿ ಚುನಾವಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಸೌಮ್ಯಾ ಆರ್‌.ರೆಡ್ಡಿ (54.89 ಲಕ್ಷ ರೂ.) (ಕಾಂಗ್ರೆಸ್‌)
ಜಯನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ಆರ್‌. ರೆಡ್ಡಿ ಅವರ ಒಟ್ಟು ಆಸ್ತಿ ಮೌಲ್ಯ 54.89 ಲಕ್ಷ ರೂ. ತಮ್ಮ ಪತಿಯ ಬಳಿ ಬಿಡಿಗಾಸು ನಗದು ಇಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿರುವ ಅವರು 4.70 ಲಕ್ಷ ರೂ. ಮೌಲ್ಯದ ಕಾರು ಹೊಂದಿದ್ದಾರೆ. 28 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ದಂಪತಿ 5.60 ಲಕ್ಷ ರೂ. ಸಾಲ ಹೊಂದಿದ್ದಾರೆ.
ನಗದು    10,136 ರೂ.
ಚಿನ್ನಾಭರಣ    950 ಗ್ರಾಂ
ಬೆಳ್ಳಿ    5 ಕೆ.ಜಿ
ಚರಾಸ್ತಿ     54,89,064
ಸ್ಥಿರಾಸ್ತಿ     ಇಲ್ಲ

ವಿ.ರವಿಕೃಷ್ಣಾರೆಡ್ಡಿ (1.91 ಕೋಟಿ ರೂ.) (ಪಕ್ಷೇತರ)
ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಿ.ರವಿಕೃಷ್ಣಾರೆಡ್ಡಿ ಅವರ ಒಟ್ಟು ಆಸ್ತಿ ಮೌಲ್ಯ 1,91,08,294 ಕೋಟಿ ರೂ. ಆಗಿದ್ದು, ಶುಕ್ರವಾರ ಜಯನಗರದ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದಾರೆ. ಅದರಂತೆ ಅವರ ಪತ್ನಿ ಸುಪ್ರಿಯಾ ರೆಡ್ಡಿ ಅವರು 37,96,054 ರೂ. ಚರಾಸ್ತಿ, 4,99,25,000 ರೂ. ಸ್ಥಿರಾಸ್ತಿ ಹೊಂದಿದ್ದು, 12.60 ಲಕ್ಷ ರೂ. ಮೌಲ್ಯದ ಚಿನ್ನಾಭರಣದೊಂದಿಗೆ 22,42,446 ರೂ. ಸಾಲ ಹೊಂದಿದ್ದಾರೆ. ಜತೆಗೆ ಪುತ್ರಿ ಅಮೃತರೆಡ್ಡಿ ಅವರ ಹೆಸರಿನಲ್ಲಿ 1,61,954 ರೂ. ಚಿರಾಸ್ತಿ ಹೊಂದಿದ್ದಾರೆ. 
ನಗದು    20,000
ಚಿನ್ನಾಭರಣ    ಇಲ್ಲ
ಸ್ಥಿರಾಸ್ತಿ    1.15 ಕೋಟಿ ರೂ.
ಚರಾಸ್ತಿ    76.08 ಲಕ್ಷ ರೂ.
ಸಾಲ    71.21 ಲಕ್ಷ ರೂ.

ಡಿ.ಹೇಮಚಂದ್ರ ಸಾಗರ್‌ (63.22 ಕೋಟಿ ರೂ.) (ಜೆಡಿಎಸ್‌)
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿರುವ ಡಿ.ಹೇಮಚಂದ್ರ ಸಾಗರ್‌ ಒಟ್ಟು 63.22 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಶುಕ್ರವಾರ ಅವರು ತಮ್ಮ ಬೆಂಬಲಿಗರೊಂದಿಗೆ ಸಲ್ಲಿಸಿದ ನಾಮಪತ್ರದಲ್ಲಿ ಆಸ್ತಿ ಘೋಷಿಸಿದ್ದಾರೆ. ಪತ್ನಿ ಗೀತಾ ಎಚ್‌.ಸಾಗರ್‌ ಅವರ ಹೆಸರಿನಲ್ಲಿ 16.97 ಕೋಟಿ ರೂ. ಚರಾಸ್ತಿ, 10 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದು, 1.24 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಹೊಂದಿದ್ದಾರೆ. 
ನಗದು    2.33 ಲಕ್ಷ ರೂ.
ಚಿನ್ನಾಭರಣ    2643.15 ಗ್ರಾಂ
ಬೆಳ್ಳಿ    31.71 ಕೆ.ಜಿ.
ಸ್ಥಿರಾಸ್ತಿ    43.32 ಕೋಟಿ ರೂ.
ಚರಾಸ್ತಿ    19.90 ಕೋಟಿ ರೂ.

ಎಚ್‌.ಎಸ್‌.ಮಂಜುನಾಥ್‌ (10.18 ಲಕ್ಷ) (ಕಾಂಗ್ರೆಸ್‌)
ಮಹಾಲಕ್ಷ್ಮೀ ಲೇಔಟ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಚ್‌.ಎಸ್‌.ಮಂಜುನಾಥ್‌ ಒಟ್ಟು 10.18 ಲಕ್ಷ ರೂ. ಮೌಲ್ಯದ ಆಸ್ತಿ ಹೊಂಧಿರುವುದಾಗಿ ತಿಳಿಸಿದ್ದಾರೆ. ಯಾವುದೇ ಸ್ಥಿರಾಸ್ಥಿ ಹೊಂದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿರುವ ಅವರು, ತಂದೆ ಹೆಸರಲ್ಲಿ 2.14 ಎಕರೆ ಜಮೀನು ಹೊಂದಿದ್ದು, ತಾಯಿ ಬಳಿ 3.69 ಲಕ್ಷ ಬೆಲೆ ಬಾಳುವ ಬಂಗಾರ ಹೊಂದಿದ್ದು, ತಂದೆ ಬಳಿ 15 ಸಾವಿರ ರೂ. ಬೆಲೆ ಬಾಳುವ ಬಂಗಾರದ ಉಂಗುರ ಇದೆ ಎಂದು ಹೇಳಿದ್ದಾರೆ.
ಸಾಲ    4.82 ಲಕ್ಷ
ಬಂಗಾರ    1.68 ಲಕ್ಷ ಮೌಲ್ಯ
ಬೆಳ್ಳಿ    ಇಲ್ಲ
ಸ್ಥಿರಾಸ್ಥಿ    ಇಲ್ಲ
ಚರಾಸ್ಥಿ    10.18 ಲಕ್ಷ

Advertisement

Udayavani is now on Telegram. Click here to join our channel and stay updated with the latest news.

Next