ಬೆಂಗಳೂರು: ರಾಜ್ಯದಲ್ಲಿ ಅನರ್ಹ ಶಾಸಕರಿಂದ ಖಾಲಿಯಾಗಿರುವ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್‌ನಲ್ಲಿ ಉದ್ಭವಿಸಿದ್ದ ನಾಯಕತ್ವ ಗೊಂದಲಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಪಕ್ಷದ ಪದಾಧಿಕಾರಿಗಳ ಆಯ್ಕೆ ಹಾಗೂ ವಿಶೇಷವಾಗಿ ಪ್ರತಿಪಕ್ಷದ ನಾಯಕನ ಆಯ್ಕೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಪಕ್ಷದ ವಲಯದಲ್ಲಿ ಸಾಕಷ್ಟು ಬೆಳವಣಿಗೆ ನಡೆದಿದ್ದವು. ಈಗ ದಿಢೀರ್ ಎಂದು ಉಪ ಚುನಾವಣೆ ಘೋಷಣೆ ಆಗಿರುವುದರಿಂದ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆ ಕುರಿತು ಅನುಮಾನ ಕಾಡುತ್ತಿದೆ.
ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಎಚ್.ಕೆ.ಪಾಟೀಲ್ ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರು. ಸಿದ್ದರಾಮಯ್ಯ ಅವರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಗೆ ಅವಕಾಶ ದೊರೆತಿರಲಿಲ್ಲ. ಆದರೆ, ಡಾ.ಜಿ.ಪರಮೇಶ್ವರ್‌ರಿಗೆ ಸೋನಿಯಾ ಗಾಂಧಿ ಭೇಟಿಗೆ ಅವಕಾಶ ನೀಡಿದ್ದು, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್ ಬಹಿರಂಗವಾಗಿಯೇ ತೊಡೆ ತಟ್ಟುವ ಪ್ರಯತ್ನ ಮಾಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಈಗ ಉಪ ಚುನಾವಣೆ ಎದುರಾಗಿರುವುದರಿಂದ 15 ಕ್ಷೇತ್ರಗಳಲ್ಲಿ ಕನಿಷ್ಠ 8 ಸ್ಥಾನಗಳನ್ನಾದರೂ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ರಾಜ್ಯ ಕಾಂಗ್ರೆಸ್ ನಾಯಕರ ಮೇಲಿದೆ. ಆದರೆ, ಚುನಾವಣೆಗೆ ಯಾರ ನೇತೃತ್ವ ಎನ್ನುವ ಗೊಂದಲ ಪಕ್ಷದ ವಲಯದಲ್ಲಿದೆ. ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಾಮೂಹಿಕ ನಾಯಕತ್ವದ ಜಪ ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ನೇತೃತ್ವ ವಹಿಸಿಕೊಳ್ಳದಿದ್ದರೆ, ಬಹುತೇಕ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳೂ ಅವರ ಆಪ್ತ ವಲಯದಿಂದ ಕೇಳಿ ಬರುತ್ತಿವೆ.
ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಅನರ್ಹಗೊಂಡಿರುವ ಬಹುತೇಕರು, ಸಿದ್ದರಾಮಯ್ಯ ಆಪ್ತರು ಎನ್ನುವುದು ಗುಟ್ಟಾಗಿ ಏನು ಉಳಿದಿಲ್ಲ. ಈ ಚುನಾವಣೆಯಲ್ಲಿ ತಮ್ಮ ಆಪ್ತರೆನಿಸಿಕೊಂಡವರನ್ನು ಸೋಲಿಸದೇ ಇದ್ದರೆ, ಮತ್ತೆ ಸಿದ್ದರಾಮಯ್ಯ ಅವರ ಮೇಲೆಯೇ ಕಾಂಗ್ರೆಸ್ ವಲಯದಲ್ಲಿಯೇ ಆರೋಪಗಳು ಕೇಳಿ ಬರುವ ಸಾಧ್ಯತೆ ಇದೆ. ಹೀಗಾಗಿ ಸಿದ್ದರಾಮಯ್ಯಗೆ ಸ್ಪಷ್ಪ ನಾಯಕತ್ವ ದೊರೆಯದಿದ್ದರೆ ಮುಂಚೂಣಿಯಲ್ಲಿ ನಿಂತು ಅನರ್ಹರನ್ನು ಸೋಲಿಸಲು ಪಣ ತೊಡುತ್ತಾರಾ ಎನ್ನುವುದೂ ಪ್ರಶ್ನಾರ್ಹವಾಗಿದೆ.
ಒಂದು ವೇಳೆ, ಸಿದ್ದರಾಮಯ್ಯ ಮುಂಚೂಣಿಯಲ್ಲಿ ನಿಂತರೆ, ಗೆಲುವಿನ ಶ್ರೇಯಸ್ಸು ಅವರಿಗೆ ದೊರೆತರೆ, ಅನಾಯಾಸವಾಗಿ ಕಾಂಗ್ರೆಸ್ ಹೈಕಮಾಂಡ್ ಅವರ ಅಣತಿಯಂತೆಯೇ ನಡೆದುಕೊಳ್ಳುವ ಸಾಧ್ಯತೆ ಇದೆ. ಆಗ ಮೂಲ ಕಾಂಗ್ರೆಸ್ಸಿಗರಿಗೆ ಮತ್ತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಪ್ರತಿಪಕ್ಷದ ನಾಯಕನ ಸ್ಥಾನ ಮರೀಚಿಕೆಯಾಗಿ ಸಿದ್ದರಾಮಯ್ಯನವರ ಹಿಡಿತಕ್ಕೆ ಹೋಗುವ ಸಾಧ್ಯತೆ ಇದೆ.
ಹೊಣೆಗಾರಿಕೆ ಗೊಂದಲ: ಉಪ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಈಗಾಗಲೇ ಕೆಪಿಸಿಸಿ ವತಿಯಿಂದ ವೀಕ್ಷಕರನ್ನು ನೇಮಕ ಮಾಡಲಾಗಿದ್ದು, ಅವರನ್ನೇ ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಯನ್ನಾಗಿ ಮಾಡುವ ಸಾಧ್ಯತೆ ಇದೆ. ಆದರೆ, ಚುನಾವಣೆ ಸಿದ್ಧªತೆ ಕುರಿತಂತೆ ನಡೆಯುತ್ತಿರುವ ಎಲ್ಲ ಸಭೆಗಳಿಂದಲೂ ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಅಂತರ ಕಾಯ್ದುಕೊಳ್ಳುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಈಗಿರುವ ಪರಿಸ್ಥಿತಿಯಲ್ಲಿ ಪಕ್ಷದ ಅಧಿಕೃತವಾಗಿ ಯಾರ ನಾಯಕತ್ವದಲ್ಲಿ ನಡೆಯಲಿದೆ ಎಂದು ಘೋಷಣೆ ಮಾಡದಿದ್ದರೂ, ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ, ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕ ಆಗಿರುವುದರಿಂದ ಇಬ್ಬರೂ ಒಟ್ಟಾಗಿ ಎಲ್ಲ ಚಟುವಟಿಕೆ ನಡೆಸುತ್ತಿರುವುದರಿಂದ ಪರೋಕ್ಷವಾಗಿ ಸಿದ್ದರಾಮಯ್ಯ ಅವರೇ ಉಪ ಚುನಾವಣೆ ನೇತೃತ್ವ ವಹಿಸಿಕೊಂಡಂತೆ ನಡೆದುಕೊಳ್ಳುತ್ತಿದ್ದಾರೆ.
ಶನಿವಾರ ಹೊಸಕೋಟೆಯಲ್ಲಿ ನಡೆದ ಬೃಹತ್ ಸಮಾವೇಶಕ್ಕೆ ಡಾ.ಜಿ.ಪರಮೇಶ್ವರ್ ಹಾಗೂ ವೀರಪ್ಪ ಮೊಯ್ಲಿ ಸೇರಿ ಕೆಲವು ನಾಯಕರು ಅಂತರ ಕಾಯ್ದುಕೊಳ್ಳುವ ಮೂಲಕ ಚುನಾವಣೆ ಸೋಲು ಗೆಲುವಿನ ಹೊಣೆಯನ್ನು ಸಿದ್ದರಾಮಯ್ಯ ಅವರ ಮೇಲೆಯೇ ಹೊರಿಸುವ ಲೆಕ್ಕಾಚಾರವನ್ನೂ ಅಲ್ಲಗಳೆಯುವಂತಿಲ್ಲ.
* ಶಂಕರ ಪಾಗೋಜಿ