Advertisement
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಪುರೋಲಾ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಮೇಘಸ್ಫೋಟದಿಂದ ದಿಢೀರ್ ಪ್ರವಾಹ ಉಂಟಾಗಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲವಾದರೂ ಅಪಾರ ಪ್ರಮಾಣದ ಹಾನಿ ವರದಿಯಾಗಿದೆ. ಹಲವಾರು ಮನೆಗಳು ಮತ್ತು ರಸ್ತೆಗಳು ಹಾನಿಗೀಡಾಗಿವೆ. ಉತ್ತರಕಾಶಿಯ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹಲವಾರು ವಾಹನಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲಕಾನಂದ ನದಿ ಅಪಾಯದ ಮಟ್ಟ ತಲುಪಿದೆ.
Related Articles
Advertisement
45 ಪ್ರಯಾಣಿಕರ ರಕ್ಷಣೆ
ಉತ್ತರಪ್ರದೇಶ-ಉತ್ತರಾಖಂಡ ಗಡಿಯಲ್ಲಿ ಬರುವ ಮಂಡವಾಲಿಯಲ್ಲಿ ಕೊಟವಾಲಿ ನದಿ ನೀರಿನ ಪ್ರವಾಹದಲ್ಲಿ ಸರ್ಕಾರಿ ಬಸ್‌ವೊಂದು ಕೊಚ್ಚಿಹೋಗಿದ್ದು, ಅದರಲ್ಲಿದ್ದ ಎಲ್ಲ 45 ಪ್ರಯಾಣಿಕರನ್ನೂ ರಕ್ಷಿಸಲಾಗಿದೆ. ನಂತರ ಭಾರೀ ಯಂತ್ರಗಳ ನೆರವಿನಿಂದ ಬಸ್ಸನ್ನೂ ಮೇಲಕ್ಕೆತ್ತಲಾಗಿದೆ. ಇನ್ನು, ಗುಜರಾತ್‌ನ ಜುನಾಗಢದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ರಾಜಸ್ಥಾನದ 114 ಡ್ಯಾಂಗಳು ಭರ್ತಿಯಾಗಿವೆ. ಒಡಿಶಾದಲ್ಲಿ ಮುಂದಿನ 2 ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಯಾವತ್ಮಲ್‌ನಲ್ಲಿ 2 ಸಾವು; 45 ಮಂದಿಯ ರಕ್ಷಣೆ
ಮಹಾರಾಷ್ಟ್ರದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಪಾಲರ್, ಥಾಣೆ, ರಾಯಗಢ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ಭಾನುವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಯಾವತ್ಮಾಲ್ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಮನೆಯೊಂದರ ಗೋಡೆ ಕುಸಿದು ಇಬ್ಬರು ಸಾವಿಗೀಡಾಗಿದ್ದಾರೆ.
ಮಹಾಗಾಂವ್‌ನಲ್ಲಿ 45ಕ್ಕೂ ಅಧಿಕ ಮಂದಿ ಪ್ರವಾಹದಲ್ಲಿ ಸಿಲುಕಿದ್ದಾರೆ. ಇವರನ್ನು ವಾಯುಪಡೆ ಕಾಪ್ಟರ್‌ಗಳ ಮೂಲಕ ರಕ್ಷಿಸಲಾಗಿದೆ. ಶನಿವಾರ ಬೆಳಗ್ಗೆಯೇ ಸುರಿದ ಧಾರಾಕಾರ ಮಳೆಯಿಂದ ಮುಂಬೈನ ಕುರ್ಲಾ, ಚೆಂಬೂರು ಮತ್ತು ಅಂಧೇರಿಯಲ್ಲಿ ರಸ್ತೆಗಳು, ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಇದೇ ವೇಳೆ, ಬುಧವಾರ ರಾತ್ರಿ ಭೂಕುಸಿತಕ್ಕೆ ಸಾಕ್ಷಿಯಾದ ಇರ್ಶಲ್‌ವಾಡಿ ಗ್ರಾಮದಲ್ಲಿ ಶೋಧ ಕಾರ್ಯ ಶನಿವಾರವೂ ಮುಂದುವರಿದಿದೆ. ಈವರೆಗೆ ಒಟ್ಟು 26 ಮಂದಿಯ ಮೃತದೇಹ ಪತ್ತೆಯಾಗಿದೆ. ಇನ್ನೂ 86 ಮಂದಿ ನಾಪತ್ತೆಯಾಗಿದ್ದಾರೆ.
ಮಹಾಕಾಲ ಜಲಾವೃತಗೊಂಡಿಲ್ಲ: ಜಿಲ್ಲಾಧಿಕಾರಿ
ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಮಹಾಕಾಲೇಶ್ವರ ದೇಗುಲ ಜಲಾವೃತಗೊಂಡಿದೆ ಎಂಬಂತಹ ವಿಡಿಯೊಗಳು ಸಾಮಾಜಿಕ ತಾಣಗಳಲ್ಲಿ ಓಡಾಡುತ್ತಿವೆ. ಆದರೆ ಹಾಗೆ ಆಗಿಲ್ಲ, ಇಂತಹ ಸುಳ್ಳು ಹಬ್ಬಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರತೀ ವರ್ಷದಂತೆ ಮಳೆಬಂದಿದೆ, ಹಾಗಾಗಿ ನಂದಿಮಂಟಪದಲ್ಲಿ ಸ್ವಲ್ಪ ನೀರು ಸೇರಿತ್ತು. ಅದನ್ನು ಹೊರಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.