ಹೊಸದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 11,400 ಕೋಟಿ ರೂ. ಹಗರಣದ ನಂತರ ಬ್ಯಾಂಕಿಂಗ್ ಅವ್ಯವಹಾರಗಳ ಸರಣಿಯೇ ಹೊರಬೀಳುತ್ತಿದ್ದು, ಇದೀಗ 2011ರಿಂದಲೂ 200 ಕೋಟಿ ರೂ. ಸಾಲ ಮರುಪಾವತಿ ಮಾಡದೇ ಸುಸ್ತಿದಾರರಾಗಿರುವ ಸಿಂಭೌಲಿ ಶುಗರ್ಸ್ ಲಿ. ಕಂಪನಿಯ ಸಿಎಂಡಿ ಗುರ್ಮೀತ್ ಸಿಂಗ್ ಮಾನ್ ಹಾಗೂ ಇತರರ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ. ಮೀರತ್ ಶಾಖೆಯಲ್ಲಿ 2011 ಹಾಗೂ 2015ರಲ್ಲಿ ಒಟ್ಟು 200 ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂಡಿ ಗುರ್ಮೀತ್ ಸಿಂಗ್ ಜತೆಗೆ, ಉಪ ವ್ಯವಸ್ಥಾಪಕ ನಿರ್ದೇಶಕ ಗುರ್ಪಾಲ್ ಸಿಂಗ್ ಮತ್ತು ಇತರ ಎಂಟಿ ಸಿಎಫ್ಒಗಳು, ನಿರ್ದೇಶಕರು ಮತ್ತು ಕಾರ್ಯನಿರ್ವಾಹಕೇತರ ನಿರ್ದೇಶಕರನ್ನೂ ಸಿಬಿಐ ದೂರಿನಲ್ಲಿ ಉಲ್ಲೇಖೀಸಿದೆ.
ಆಸಕ್ತಿಕರ ಸಂಗತಿಯೆಂದರೆ ಈ ಕಂಪನಿಯ ಮಂಡಳಿ ನಿರ್ದೇಶಕರಲ್ಲಿ ಪಂಜಾಬ್‌ನ ಕಾಂಗ್ರೆಸ್ ಮುಖಂಡರೂ ಇದ್ದು, ಅವರ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ. 2011ರಲ್ಲಿ 5200 ಕಬ್ಬು ಬೆಳೆಗಾರರಿಗೆ ಹಣ ನೀಡಲು ಖಾತೆ ತೆರೆದು 150 ಕೋಟಿ ರೂ. ವರ್ಗಾವಣೆ ಮಾಡಲಾಗಿತ್ತು. ಆದರೆ ಬ್ಯಾಂಕ್‌ನಿಂದ ಹಣ ವರ್ಗಾವಣೆಯಾದ ಮೇಲೆ ಅದನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ. ನಂತರ ಈ ಸಾಲ ತೀರಿಸಲು 110 ಕೋಟಿ ರೂ. ಮತ್ತೂಂದು ಸಾಲವನ್ನೂ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಲ್ಲಿ ಮಾಡಲಾಗಿದೆ.
ವಿದೇಶಿ ಆಸ್ತಿ ಮೇಲೆ ಕಣ್ಣು:ನೀರವ್ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು 17 ಹೆಚ್ಚು ದೇಶಗಳಿಗೆ, ನೀರವ್ ಸ್ವತ್ತಿನ ಬಗ್ಗೆ ಮಾಹಿತಿ ಕೇಳಿ ನ್ಯಾಯಾಂಗ ವಿನಂತಿ ಕಳುಹಿಸಲು ನಿರ್ಧರಿಸಿದೆ. ಈ ದೇಶಗಳಲ್ಲಿ ನೀರವ್ ಹಾಗೂ ಚೋಕ್ಸಿಯ ವಹಿ ವಾಟುಗಳಿರುವುದು ಪತ್ತೆಯಾಗಿದೆ. ಈಗಾಗಲೇ ಕೆಲವು ದೇಶಗಳಿಗೆ ಕಳುಹಿಸಲಾಗಿದ್ದು, ಇತರ ದೇಶಗಳಿಗೆ ವಿನಂತಿ ಕಳುಹಿಸಲು ಇ.ಡಿ. ಮುಂಬಯಿ ನ್ಯಾಯಾಲಯದ ಮೊರೆ ಹೋಗಿದೆ. ಮಾಹಿತಿ ಲಭ್ಯವಾದ ನಂತರದಲ್ಲಿ ಇವುಗಳನ್ನೂ ಜಪ್ತಿ ಮಾಡುವ ಬಗ್ಗೆ ನಿರ್ಧರಿಸಲಾಗುತ್ತದೆ.
16 ಬ್ಯಾಂಕ್‌ಗಳಿಗೆ ಇ.ಡಿ ಪತ್ರ: ಪಿಎನ್‌ಬಿ ಹೊರತಾಗಿ ನೀರವ್ ಪ್ರಕರಣಕ್ಕೆ ಸಂಬಂಧಿಸಿ ಇತರ 16 ಬ್ಯಾಂಕ್‌ಗಳಿಗೂ ಜಾರಿ ನಿರ್ದೇಶ ನಾಲಯ ಪತ್ರ ಬರೆದಿದ್ದು, ನೀರವ್ ಮತ್ತು ಅವರ ಮಾವ ಮೆಹುಲ್ ಚೋಕ್ಸಿಗೆ ನೀಡಲಾದ ಎಲ್ಲ ಸಾಲದ ವಿವರಗಳನ್ನೂ ಒದಗಿಸುವಂತೆ ಸೂಚಿಸಿದೆ. ಅಂದಾಜಿನ ಪ್ರಕಾರ ವಿವಿಧ ಪ್ರಕರಣಗಳಲ್ಲಿ ಬ್ಯಾಂಕ್‌ಗಳಿಗೆ ಉಂಟಾದ ನಷ್ಟದ ಮೊತ್ತ 20 ಸಾವಿರ ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನೊಂದೆಡೆ ಇತರ ಬ್ಯಾಂಕ್‌ಗಳು ಅತ್ಯಂತ ಕಡಿಮೆ ಪ್ರಮಾಣದ ಅಡಮಾನವನ್ನಿಟ್ಟುಕೊಂಡು ಸಾಲ ನೀಡಿರುವ ಸಾಧ್ಯತೆಯಿದ್ದು, ಇದರಿಂದ ಈಗ ಆಸ್ತಿ ಜಪ್ತಿ ಮಾಡಿದರೂ ಅಷ್ಟು ಸಾಲದ ಮೊತ್ತದ ಸ್ವತ್ತು ಸಿಗುವುದಿಲ್ಲ ಎಂಬ ಭೀತಿ ಎದುರಾಗಿದೆ. ಕೇವಲ ಶೇ. 12ರಷ್ಟು ಮೌಲ್ಯದ ಅಡಮಾನದ ಆಧಾರದಲ್ಲಿ ಸಾಲ ನೀಡಲಾಗಿದೆ.
ಪಿಎನ್‌ಬಿ ನಿರ್ದೇಶಕರ ವಿಚಾರಣೆ ಮುಂದು ವರಿಕೆ: ಹಗರಣ ಸಂಬಂಧ ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ.ಬ್ರಹ್ಮಾಜಿ ರಾವ್‌ರನ್ನು ಎರಡನೇ ದಿನವೂ ಸಿಬಿಐ ವಿಚಾರಣೆ ಮುಂದುವರಿಸಿದೆ. ರಾವ್ ಮುಂಬಯಿ ವಲಯಕ್ಕೆ ನಿರ್ದೇಶಕರಾಗಿ ದ್ದಾರೆ. ಇವರೊಂದಿಗೆ ಬ್ಯಾಂಕ್‌ನ ಇತರ ಅಧಿಕಾ ರಿ ಗಳನ್ನೂ ವಿಚಾರಣೆ ಮಾಡುತ್ತಿದೆ. ಆದರೆ ಇವರನ್ನು ಆರೋಪಿಗಳು ಎಂದು ಪರಿಗಣಿಸ ಲಾಗುತ್ತಿಲ್ಲ. ಬದಲಿಗೆ ಪ್ರಕರಣ ನಡೆದದ್ದು ಹೇಗೆ ಮತ್ತು ಅದು ಹೊರಗೆ ಬಂದಿದ್ದು ಹೇಗೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ವಜ್ರ ಉದ್ಯಮಕ್ಕೆ ಹಗರಣದಿಂದ ಬಾಧೆಯಿಲ್ಲ
ವಜ್ರ ಉದ್ಯಮಿ ನೀರವ್ ಪಿಎನ್‌ಬಿ ಬಹುಕೋಟಿ ರೂ. ಮೋಸ ಮಾಡಿದ ಪ್ರಕರಣದಿಂದ ವಜ್ರ ವ್ಯಾಪಾರದ ಮೇಲೆ ಯಾವುದೇ ಪರಿ ಣಾಮ ಉಂಟಾಗದು ಎಂದು ಸೂರತ್‌ನ ವಜ್ರ ಉದ್ಯಮಿಗಳು ಹೇಳಿದ್ದಾರೆ. ಇನ್ನೊಂದೆಡೆ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬ್ಯಾಂಕ್‌ನ ಸಾಲ ನೀಡಿಕೆ ಹೆಚ್ಚಾಗಲಿದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ. ಸೂರತ್‌ನಲ್ಲಿ 6 ಸಾವಿರ ವಜ್ರ ಸಂಸ್ಕರಣೆ ಉದ್ಯಮಿಗಳಿ ದ್ದಾರೆ. ಈ ಪೈಕಿ ಸುಮಾರು 100 ದೊಡ್ಡ ಉದ್ಯಮಗಳಷ್ಟೇ ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತವೆ. ಆದರೆ ಉಳಿದ ಸಣ್ಣ ಸಂಸ್ಥೆಗಳು ಖಾಸಗಿ ಹೂಡಿಕೆದಾರರನ್ನು ನೆಚ್ಚಿಕೊಂಡಿವೆ ಎಂದು ವಜ್ರ ಮತ್ತು ಆಭರಣ ರಫ್ತು ಉತ್ತೇಜನ ಕೌನ್ಸಿಲ್‌ನ ಪ್ರಾದೇಶಿಕ ಅಧ್ಯಕ್ಷ ದಿನೇಶ್ ನವಾಡಿಯಾ ಹೇಳಿದ್ದಾರೆ.