Advertisement

IPL 2023: ಮಗನಿಗೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಆಪ್ತ ಸಲಹೆ

11:35 PM Apr 17, 2023 | Team Udayavani |

ಮುಂಬಯಿ: ಬಹಳ ಸಮಯ ಕಾದ ಬಳಿಕ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ ಪದಾರ್ಪಣೆ ಮಾಡಿದರು.

Advertisement

ಅರ್ಜುನ್‌ ಆಟವನ್ನು ಕಾಣಲು ಸಚಿನ್‌ಪರಿವಾರವೇ ವಾಂಖೇಡೆಯಲ್ಲಿ ನೆರೆದಿತ್ತು. ಈ ಸಂದರ್ಭದಲ್ಲಿ ಸಚಿನ್‌ ತೆಂಡುಲ್ಕರ್‌ ತಮ್ಮ ಮಗನಿಗೆ ಕೆಲವು ಆತ್ಮೀಯ ಸಲಹೆಗಳನ್ನು ನೀಡಿದರು. “ಅರ್ಜುನ್‌, ನೀನಿಂದು ಕ್ರಿಕೆಟ್‌ ಪಯಣದಲ್ಲಿ ಮತ್ತೂಂದು ಪ್ರಮುಖ ಹೆಜ್ಜೆ ಇಟ್ಟಿರುವೆ. ನಿನ್ನನ್ನು ತುಂಬಾ ಪ್ರೀತಿಸುವ ಮತ್ತು ಕ್ರಿಕೆಟ್‌ ಬಗ್ಗೆ ಅತ್ಯಂತ ಒಲವನ್ನು ಹೊಂದಿರುವ ನಿನ್ನ ತಂದೆಯ ಹಾಗೆ ನೀನು ಕೂಡ ಕ್ರಿಕೆಟ್‌ಗೆ ಯೋಗ್ಯವಾದ ಗೌರವ ನೀಡುವೆ, ಆಗ ಕ್ರಿಕೆಟ್‌ ಕೂಡ ಅದೇ ಪ್ರೀತಿ, ಗೌರವವನ್ನು ನಿನಗೆ ನೀಡುತ್ತದೆ’ ಎಂದು ಸಚಿನ್‌ ತೆಂಡುಲ್ಕರ್‌ ಟ್ವೀಟ್‌ ಮಾಡಿದ್ದಾರೆ.

“ನೀನು ಇಲ್ಲಿಯ ತನಕ ಬರಲು ಕಠಿನ ಪರಿಶ್ರಮಪಟ್ಟಿರುವೆ. ಇದನ್ನು ಮುಂದುವರಿಸುವ ನಂಬಿಕೆ ಇದೆ. ಇದು ಸುಂದರ ಪಯಣವೊಂದರ ಆರಂಭ. ಆಲ್‌ ದಿ ಬೆಸ್ಟ್‌’ ಎಂದು ಸಚಿನ್‌ ತಮ್ಮ ಮಗನಿಗೆ ಶುಭ ಹಾರೈಸಿದ್ದಾರೆ.

ತಂದೆ-ಮಗನ ಮೊದಲ ಜೋಡಿ
ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಪದಾರ್ಪಣೆಯೊಂದಿಗೆ ಇತಿಹಾಸವೊಂದು ನಿರ್ಮಾಣಗೊಂಡಿತು. ಐಪಿಎಲ್‌ನಲ್ಲಿ ತಂದೆ-ಮಗ ಆಡಿದ ಮೊದಲ ನಿದರ್ಶನ ಇದಾಗಿದೆ. ಸಚಿನ್‌ ತೆಂಡುಲ್ಕರ್‌ 2008ರ ಆರಂಭಿಕ ಪಂದ್ಯಾವಳಿಯಿಂದ 2013ರ ತನಕ 6 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಅರ್ಜುನ್‌ ಅವರನ್ನು 2021ರ ಹರಾಜಿನಲ್ಲಿ 20 ಲಕ್ಷ ರೂ. ಮೂಲ ಬೆಲೆಗೆ ಮುಂಬೈ ಖರೀದಿಸಿತ್ತು. ಆದರೆ ಐಪಿಎಲ್‌ ಪದಾರ್ಪಣೆಗೆ ಇಷ್ಟು ಕಾಲ ಕಾಯಬೇಕಾಯಿತು.

“ಇದೊಂದು ಅಮೋಘ ಕ್ಷಣ. 2008ರಿಂದ ನಾನು ಬೆಂಬಲಿಸುತ್ತ ಬಂದಿರುವ ತಂಡವನ್ನು ಇಂದು ಪ್ರತಿನಿಧಿಸುತ್ತಿದ್ದೇನೆ. ಭಾರತ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮ ಅವರಿಂದ ಕ್ಯಾಪ್‌ ಪಡೆದದ್ದು ಅತ್ಯಂತ ಖುಷಿಯ ಸಂಗತಿ’ ಎಂಬುದಾಗಿ ದೇಶಿ ಕ್ರಿಕೆಟ್‌ನಲ್ಲಿ ಗೋವಾ ತಂಡವನ್ನು ಪ್ರತಿನಿಧಿಸುವ ಅರ್ಜುನ್‌ ಹೇಳಿದರು.

Advertisement

ರವಿವಾರದ ಕೋಲ್ಕತಾ ಎದುರಿನ ಪಂದ್ಯದಲ್ಲಿ 23 ವರ್ಷದ ಎಡಗೈ ಬೌಲಿಂಗ್‌ ಆಲ್‌ರೌಂಡರ್‌ ಅರ್ಜುನ್‌ ತೆಂಡುಲ್ಕರ್‌ ಮುಂಬೈ ಪರ ಬೌಲಿಂಗ್‌ ಆರಂಭಿಸಿ 2 ಓವರ್‌ ಎಸೆದರು. 17 ರನ್‌ ನೀಡಿದರು. ಆದರೆ ಯಾವುದೇ ಯಶಸ್ಸು ಸಂಪಾದಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next