Advertisement

ಗುತ್ತಿಗೆ ಸಿಬ್ಬಂದಿ ಸೇವೆ ಮುಂದುವರಿಸಿ

05:43 PM Apr 05, 2022 | Team Udayavani |

ಹಾವೇರಿ: ಕೋವಿಡ್‌ ಸಮಯದಲ್ಲಿ ರೋಗಿಗಳ ಚಿಕಿತ್ಸೆ ಹಾಗೂ ಆರೈಕೆಗಾಗಿ ಗುತ್ತಿಗೆ ಆಧಾರದಲ್ಲಿ ಆರೋಗ್ಯ ಇಲಾಖೆಯಿಂದ ನೇಮಿಸಿಕೊಂಡಿರುವ ಸಿಬ್ಬಂದಿ ಸೇವೆ ಮುಂದುವರೆಸಬೇಕು ಎಂದು ಒತ್ತಾಯಿಸಿ ವೈದ್ಯರು, ನರ್ಸ್‌, ವಿವಿಧ ತಂತ್ರಜ್ಞರು ಹಾಗೂ ಡಿ-ಗ್ರೂಪ್‌ ನೌಕರರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾಸ್ಪತ್ರೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಗೆ ಹೊಸಮಠ ಬಸವಶಾಂತಲಿಂಗ ಸ್ವಾಮೀಜಿ ಚಾಲನೆ ನೀಡಿದರು.

ಗುತ್ತಲ ರಸ್ತೆ ಮೂಲಕ ಪುರಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಪ್ರತಿಭಟನಾ ರ್ಯಾಲಿ ನಂತರ ಎಂ.ಜಿ. ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಕೆಲಹೊತ್ತು ರಸ್ತೆ ತಡೆ ನಡೆಸಿದರು. ತದನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟಿಸಿದರು.

ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, 2020ರ ಮಾರ್ಚ್‌ನಲ್ಲಿ ಕೋವಿಡ್‌ ಉಲ್ಬಣಿಸಿದ ಪರಿಣಾಮ ರಾಜ್ಯದ 18 ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಯು ಗುತ್ತಿಗೆ ಆಧಾರದಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸೇವೆಗಾಗಿ ತುರ್ತು ನೇಮಕಾತಿ ಮಾಡಿಕೊಂಡಿತು.

ಮೊದಲಿಗೆ ಆರು ತಿಂಗಳಿಗೆ ಇದ್ದ ಸೇವಾವಧಿಯನ್ನು ಕೋವಿಡ್‌ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಆರು, ಮೂರು ತಿಂಗಳಿಗೊಮ್ಮೆ ಎಂಬಂತೆ ಮುಂದುವರೆಸಲಾಗಿತ್ತು. ಆದರೆ ಇದೀಗ ಕೋವಿಡ್‌ ಪ್ರಕರಣಗಳು ಕಡಿಮೆ ಆಗಿರುವ ಹಿನ್ನೆಲೆ 6,463 ಗುತ್ತಿಗೆ ಮತ್ತು ಹೊರಗುತ್ತಿಗೆ ಕೊರೊನಾ ವಾರಿಯರ್‌ ಗಳನ್ನು ಏಕಾಏಕಿ ಕೈಬಿಟ್ಟಿದ್ದು ಖಂಡನೀಯ ಎಂದು ದೂರಿದರು.

Advertisement

ಕೋವಿಡ್‌ ಸಮಯದಲ್ಲಿ ಅನೇಕರು ಮನೆ ಬಿಟ್ಟು ಹೊರಗೆ ಬರದಂತಹ ಸ್ಥಿತಿಯಲ್ಲಿ ನಾವು ಸರ್ಕಾರದ ಸೂಚನೆಯಂತೆ ಜೀವದ ಹಂಗು ತೊರೆದು ರೋಗಿಗಳ ಆರೈಕೆಯಲ್ಲಿ ತೊಡಗಿದ್ದೆವು. ಪ್ರಧಾನಮಂತ್ರಿಗಳು ಸಹ ನಮ್ಮ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಎರಡು ವರ್ಷಗಳ ಕಾಲ ಕೋವಿಡ್‌ ಸಮಯದಲ್ಲಿ ನಮ್ಮ ಆರೋಗ್ಯವನ್ನು ಲೆಕ್ಕಿಸದೇ ಕೋವಿಡ್‌ ರೋಗಿಗಳ ಸೇವೆಯಲ್ಲಿ ತೊಡಗಿದ್ದೆವು. ಅಲ್ಲದೇ ಸರ್ಕಾರ ನೀಡುವ ವೇತನವನ್ನೇ ನಮ್ಮ ಕುಟುಂಬಗಳು ಇದೀಗ ಅವಲಂಭಿಸಿವೆ.

ಈಗ ಏಕಾಏಕಿ ಕೋವಿಡ್‌ ನಿಯಂತ್ರಣಕ್ಕೆ ಬಂದಿದೆ ಎನ್ನುವ ಕಾರಣಕ್ಕೆ ನಮ್ಮನ್ನು ಸರ್ಕಾರ ಕಡೆಗಣಿಸಿ ಬೀದಿಗೆ ತಳ್ಳಿದ್ದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಕೋವಿಡ್‌ ನಿಯಂತ್ರಣಕ್ಕೆ ಬಂದ ಸಮಯದಲ್ಲಿಯೂ ನಾವು ಕೆಲಸವಿಲ್ಲದೇ ಖಾಲಿ ಕುಳಿತಿಲ್ಲ. ಆರೋಗ್ಯ ಇಲಾಖೆಯ ಸೂಚನೆಯಂತೆ ಲಸಿಕಾಕರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿದ್ದೇವೆ. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಕೊರೊನಾ ವಾರಿಯರ್ಗಳಾಗಿ ಕೆಲಸ ಮಾಡಿರುವ ನಮ್ಮನ್ನು ಕೂಡಲೇ ಮುಂದುವರೆಸಲು ಆದೇಶಿಸಬೇಕು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಸಿಬ್ಬಂದಿಗಳನ್ನು ಕಳೆದ 10 ವರ್ಷಗಳಿಂದ ಯಾವ ರೀತಿ ಪ್ರತಿವರ್ಷ ಮುಂದುವರೆಸಿ ಆದೇಶಿಸುತ್ತಿರೋ ಅದೇ ರೀತಿ ನಮ್ಮನ್ನು ಪ್ರತಿ 6 ತಿಂಗಳಿಗೊಮ್ಮೆ ಮುಂದುವರೆಸಿ ಆದೇಶಿಸಬೇಕು. ಕೋವಿಡ್‌ ರಿಸ್ಕ್ ಭತ್ಯೆ ಬಿಡುಗಡೆ ಮಾಡಬೇಕು. ಸೇವಾಭದ್ರತೆ ಒದಗಿಸಬೇಕು. ಮುಂದೆ ಸರ್ಕಾರದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಮಯದಲ್ಲಿ ನಮ್ಮ ಸೇವೆಯನ್ನು ಆದ್ಯತೆ ಮೇರೆಗೆ ಪರಿಗಣಿಸಿ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿದರು.

ಡಾ| ಚೇತನ ಪಾಟೀಲ, ಡಾ| ವೀರೇಶ ಗುತ್ತಲ, ನರ್ಸಿಂಗ್‌ ಆಫೀಸರ್‌ ರಾಮಚಂದ್ರ ಕಲ್ಲೇರ, ಸುಜಾತಾ ಡಿ, ಪ್ರವೀಣ ಭಂಗಿ, ಪಿರುಸಾಬ್‌ ದೊಡ್ಡಮನಿ, ಅಶ್ವಿ‌ನಿ ಕೆ.ವೈ, ಜ್ಯೋತಿ ಚಿಗಳ್ಳಿ, ಸುನಿತಾ ಕಲ್ಲೇರ, ಕೆ.ಸಿ. ಅಭಿಲಾಷ, ರಾಘು ಎಚ್‌. ಸೇರಿದಂತೆ ಇತರರು ಇದ್ದರು.

ಶಾಸಕ ಮಾನೆ ಬೆಂಬಲ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸಿ ಇದೀಗ ಕೆಲಸ ಕಳೆದುಕೊಂಡ ಕೊರೊನಾ ವಾರಿಯರ್ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಭೇಟಿ ನೀಡಿ ಬೆಂಬಲಿಸಿದರು.

ಕೊರೊನಾ ನಿಯಂತ್ರಣದಲ್ಲಿ ನಿಮ್ಮ ಪಾತ್ರ ಮಹತ್ವದ್ದಾಗಿತ್ತು. ಆ ಸಂದರ್ಭದಲ್ಲಿ ನಿಮ್ಮ ಸೇವೆ ಬಳಿಸಿ ಇದೀಗ ಒಮ್ಮೆಲೇ ಸೇವೆಯಿಂದ ಕೈ ಬಿಡುವುದು ಸರಿಯಲ್ಲ. ನಿಮ್ಮ ಕಷ್ಟ ನನಗೂ ಅರ್ಥವಾಗುತ್ತದೆ. ಮಾನವೀಯತೆ ದೃಷ್ಟಿಯಿಂದ ನಿಮ್ಮ ನೋವಿಗೆ ಸರ್ಕಾರ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚರಿಸುವಲ್ಲಿ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next