ಧಾರವಾಡ: ಹುಬ್ಬಳ್ಳಿ-ಧಾರವಾಡ ನಾಗರಿಕಪರಿಸರ ಸಮಿತಿ ಸಹಯೋಗದಲ್ಲಿ ಡಾ| ಎಂ.ಎಂ. ಕಲಬುರ್ಗಿ 82ನೇ ಜನ್ಮದಿನ ಪ್ರಯುಕ್ತ “ನಾವು ಕಂಡಂತೆ: ಡಾ|ಎಂ. ಎಂ.ಕಲಬುರ್ಗಿ’ ಗ್ರಂಥ ಬಿಡುಗಡೆ ಸಮಾರಂಭ ನಗರದ ಪರಿಸರ ಭವನದಲ್ಲಿ ಶನಿವಾರ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ ಮಾತನಾಡಿ, ನಾವು ಲಿಂಗ ಆಗಬಾರದು. ಬದಲಾಗಿ ಜಂಗಮ ಆಗಬೇಕು. ಅದಕ್ಕಾಗಿ ಕಲಬುರ್ಗಿಯವರ ಆಲೋಚನೆಗಳನ್ನು ನಾವೆಲ್ಲ ಮುಂದುವರಿಸಬೇಕಿದೆ. ಹೀಗಾಗಿ ಎಂ.ಎಂ. ಕಲಬುರ್ಗಿ ಟ್ರಸ್ಟ್ ನಿರ್ಮಿಸಲು ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ. ಸರ್ಕಾರ ಸೂಕ್ತ ರೀತಿ ಸ್ಪಂದಿಸಿದಲ್ಲಿ ಟ್ರಸ್ಟ್ ವತಿಯಿಂದ ಉತ್ತಮ ಕಾರ್ಯಗಳು ನಡೆಯಲಿವೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಮಲ್ಲೇಪುರಂ ವೆಂಕಟೇಶ ಮಾತನಾಡಿ,ಸಂಶೋಧನೆ ಎನ್ನುವುದು ಕೆಂಡದ ಮೇಲಿನ ನಡಿಗೆ ಇದ್ದಂತೆ. ಆದರೆ ಎಂ.ಎಂ. ಕಲಬುರ್ಗಿ ಅವರು ಅತ್ಯಂತ ಶಿಸ್ತಿನಿಂದ ನಡೆಸುವ ಮೂಲಕ ಸಮಗ್ರ ಸಂಪುಟಗಳ ನೇತಾರನಂತೆ ಕಂಡಿದ್ದರು. ಸತ್ಯ ನಿಷ್ಠುರತೆ, ಶೋಧನೆ ಜತೆಗೆ ಹಲವು ಸಮಸ್ಯೆಗಳನ್ನು ಎದುರಿಸಿದರೂ ವೃತ್ತಿನಿಷ್ಠೆಗೆ ಭಂಗ ಬರದಂತೆ ದುಡಿದವರು ಕಲಬುರ್ಗಿ. ಕನ್ನಡದ ಪ್ರಜ್ಞೆಯೊಂದಿಗೆ ಅದನ್ನು ವಿಸ್ತರಿಸಿದ ಮತ್ತೂಬ್ಬ ಕುಲಪತಿ ಈವರೆಗೂ ಕಂಡಿಲ್ಲ ಎಂದರು.
ಸಂಶೋಧನಾ ಜಗತ್ತಿನಲ್ಲಿ ಶಂ.ಭಾ. ಜೋಶಿ, ಬೆಟಗೇರಿ ಕೃಷ್ಣ ಶರ್ಮರಂತೆ ಡಾ|ಎಂ.ಎಂ. ಕಲಬುರ್ಗಿ ಮುಖ್ಯರಾಗಿದ್ದರು. ಹೊಸ ಹಾಗೂ ಹಳೆಗನ್ನಡದ ಅಂತರಶಿಸ್ತೀಯ ಅಧ್ಯಯನ, ಶಾಸನ, ಕಾವ್ಯ, ಚರಿತ್ರೆ, ಗದ್ಯ ಹೀಗೆ ಸಾಹಿತ್ಯ ಪ್ರಕಾರದ ಎಲ್ಲವನ್ನೂ ಆವಾಹಿಸಿಕೊಂಡು ಸಂಶೋಧನೆ ಕೈಗೊಂಡಿದ್ದರು.
ತಮಿಳು, ತೆಲುಗು ಹಾಗೂ ಮರಾಠಿ ಆಕ್ರಮಣ ಕುರಿತು ಡಾ| ಕಲಬುರ್ಗಿ ಹಾಕಿಕೊಟ್ಟ ದಿಕ್ಸೂಚಿ ಮತ್ತು ನೇಪಾಳದಲ್ಲಿ ಕನ್ನಡದ ಕುರುಹು ಕುರಿತು ಶಂ.ಭಾ. ಜೋಶಿ ಅವರ ಸಂಶೋಧನೆ ಮುಂದುವರಿಸಬೇಕಿದೆ ಎಂದು ಹೇಳಿದರು.
ಡಾ| ಗುರುಪಾದ ಮರಿಗುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ| ಕಲಬುರ್ಗಿ ಇಲ್ಲದ ನಂತರ ಸಂಶೋಧನಾ ಕ್ಷೇತ್ರ ಬರಿದಾಗಿದೆ. ಕಲಬುರ್ಗಿ ಅವರಿಗೆ ಎಲ್ಲ ರಂಗಗಳ ಜನರೊಂದಿಗೆ ಸಂಬಂಧಗಳಿತ್ತು. ಬೇರೆ ವಿದ್ವಾಂಸರ ಜೊತೆಯಲ್ಲಿ ಹೊಂದಿದ ಒಡನಾಟದ ವಿವರಣೆಗಳು ಈ ಕೃತಿಯಲ್ಲಿವೆ. ಆಪ್ತ ಸಂಬಂಧಗಳ ವಿವರಣೆಗಳಿವೆ ಎಂದರು.
ಹಿರಿಯ ಸಾಹಿತಿಗಳಾದ ಡಾ| ಬಾಳಣ್ಣ ಶೀಗಿಹಳ್ಳಿ, ಡಾ| ಜಿ.ಎಂ. ಹೆಗಡೆ, ವೆಂಕಟೇಶ ಮಾಚಕನೂರ, ಉಮಾದೇವಿ ಕಲಬುರ್ಗಿ, ವಿಜಯ ಕಲಬುರ್ಗಿ, ಎಸ್.ಎ. ಪಾಟೀಲ, ಸವಿತಾ ಕನವಳ್ಳಿ, ವಿ.ಸಿ. ಸವಡಿ, ರಾಜಶೇಖರ ಉಪ್ಪಿನ, ಅಶೋಕ ನಿಡವಣಿ, ಕಲಬುರ್ಗಿ ಕುಟುಂಬಸ್ಥರು ಇದ್ದರು. ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ಶಶಿಧರ ತೋಡಕರ ವಂದಿಸಿದರು.