Advertisement

Bengaluru Kambala; ಕಂಬಳಕ್ಕೆ ಸರ್ಕಾರದಿಂದ 1 ಕೋಟಿ ಸಹಾಯಧನ ಮುಂದುವರಿಕೆ: ಡಿಕೆ.ಶಿವಕುಮಾರ್

02:14 PM Oct 11, 2023 | Team Udayavani |

ಬೆಂಗಳೂರು: 20 ಕಂಬಳಗಳಿಗೆ ತಲಾ 5 ಲಕ್ಷದಂತೆ 1 ಕೋಟಿ ಸಹಾಯಧನವನ್ನು ಈ ಹಿಂದಿನಂತೆ ನೀಡಲಾಗುವುದು. ದೇಸಿ ಹಾಗೂ ಐತಿಹಾಸಿಕವಾದ ಕಂಬಳ ಕ್ರೀಡೆಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

Advertisement

ನಗರದ ಅರಮನೆ ಮೈದಾನದಲ್ಲಿ ಬುಧವಾರ ಬೆಳಿಗ್ಗೆ ಬೆಂಗಳೂರು ಕಂಬಳ- ನಮ್ಮ ಕಂಬಳದ ಕರೆಪೂಜೆ (ಗುದ್ದಲಿ ಪೂಜೆ) ನೆರವೇರಿಸಿ ಮಾತನಾಡಿದ ಅವರು “ಕಂಬಳಕ್ಕೆ ಸಹಾಯಧನ ಬಿಡುಗಡೆ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಜತೆ ಚರ್ಚೆ ನಡೆಸಲಾಗುವುದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಾಜಗಳ ಸಂಘಟನೆಗೆ ಒಂದು ನೆಲೆ ಬೇಕು ಎಂದು ಶಾಸಕ ಅಶೋಕ್ ರೈ ಮನವಿ ಮಾಡಿದ್ದು, ಎಲ್ಲರೂ ಒಟ್ಟಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದು ಹೇಳಿದರು.

ಮನುಷ್ಯನ ಬಳಿ ತೆಗೆದುಕೊಂದು ಹೋಗಲು ಏನೂ ಇಲ್ಲ, ತನ್ನ ಬಳಿ ಇರುವುದನ್ನೆಲ್ಲಾ ಬಿಟ್ಟು ಹೋಗಲೇಬೇಕು. ಆದರೆ ನಮ್ಮ ಸಂಸ್ಕೃತಿಯನ್ನು ಉಳಿಸಿ, ಪರಿಚಯಿಸಬೇಕು ಎಂದು ಶಾಸಕ ಅಶೋಕ್ ರೈ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರು ಒಂದಾಗಿರುವುದು ಸಂತೋಷದ ವಿಚಾರ ಎಂದರು.

ಉಳಿಪೆಟ್ಟು ಬೀಳದೆ ಯಾವುದೇ ಶಿಲೆ ಪ್ರತಿಮೆ ಆಗುವುದಿಲ್ಲ. ಭೂಮಿ ಉಳದೆ ಯಾವುದೇ ಬೆಳೆ ಬೆಳೆಯಲು ಆಗುವುದಿಲ್ಲ. ಅದರಂತೆ ಅರಮನೆ ಮೈದಾನದಲ್ಲಿ ಒಂದಷ್ಟು ಅಭಿವೃದ್ದಿ ಕೆಲಸಗಳನ್ನು ಈ ನೆಪದಲ್ಲಿ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಂತಹ ಸದಾನಂದ ಗೌಡರು, ಹ್ಯಾರಿಸ್ ಅವರು ಬೆಂಗಳೂರಿನಲ್ಲಿ ನಾಯಕರಾಗಿ ಬೆಳೆದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:Hamas War: ವ್ಹೀಲ್ ಚೇರ್ ನಲ್ಲಿ ಕುಳಿತು ಇಸ್ರೇಲ್ ಮೇಲೆ ಪ್ರತೀಕಾರ; ಈತನೇ ಹೊಸ ಬಿನ್ ಲಾಡೆನ್

Advertisement

“ಕರ್ನಾಟಕದ ಕರಾವಳಿ ಭಾಗ ಈ ದೇಶದ ದೊಡ್ಡ ಆಸ್ತಿ. ಉದ್ದಿಮೆ, ಶಿಕ್ಷಣ, ಹೋಟೆಲ್ ಉದ್ಯಮ, ಪ್ರವಾಸೋದ್ಯಮ, ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ತಮ್ಮ ಸಂಪ್ರದಾಯವನ್ನು ಬೆಂಗಳೂರಿನ ಜನತೆಗೂ ಪರಿಚಯಿಸಲು ಹೊರಟಿರುವ ಶಾಸಕ ಅಶೋಕ್ ರೈ ಅವರ ಕೆಲಸ ಶ್ಲಾಘನೀಯ” ಎಂದು ತಿಳಿಸಿದರು.

ಈ ದೇಶಕ್ಕೆ ದೊಡ್ಡ ಆಸ್ತಿಯೇ ನಮ್ಮ ಸಂಸ್ಕೃತಿ. ಅದೇ ರೀತಿ ದಕ್ಷಿಣ ಕನ್ನಡ ಶ್ರೀಮಂತ ಜನಪದ ಆಚರಣೆಗಳನ್ನು ಹೊಂದಿದೆ. ದಕ್ಷಿಣ ಕನ್ನಡದ ಆಚರಣೆ ಬೆಂಗಳೂರಿನಲ್ಲೂ ನಡೆಯಬೇಕು ಎನ್ನುವ ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗಲು ಎಲ್ಲರೂ ಒಗ್ಗಟ್ಟಾಗಿ ಸೇರಿ ಮಾದರಿ ಕೆಲಸ ಮಾಡುತ್ತಿದ್ದೀರಿ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯುವಕರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು. ಸಾವಿರಾರು ಯುವಕರು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಐತಿಹಾಸಿಕ ಕಂಬಳ ಆಯೋಜನೆ ಮಾಡುತ್ತಿರುವುದಕ್ಕೆ ನಮ್ಮ ಸಹಕಾರ ಎಂದಿಗೂ ಇರುತ್ತದೆ. ದೇವರು ವರ, ಶಾಪ ಎರಡೂ ನೀಡದೆ ಅವಕಾಶ ನೀಡುತ್ತಾನೆ, ಈ ಅವಕಾಶ ಬಳಸಿಕೊಳ್ಳಿ ಎಂದು ತಿಳಿಸಿದರು.

ದಕ್ಷಿಣ ಕನ್ನಡದ ಜನರು ಅವರ ಸಂಸ್ಕೃತಿ ಉಳಿಸಿಕೊಳ್ಳಲು ಬದ್ದತೆಯಿಂದ ಇಲ್ಲಿ ಸೇರಿದ್ದಾರೆ ನಮ್ಮ ಕಂಬಳ- ಬೆಂಗಳೂರು ಕಂಬಳಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ಸರ್ಕಾರ ನೀಡುತ್ತದೆ. ನಡೆ ಮುಂದೆ, ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದು ಮುನ್ನಡೆಯ ಬೇಕು. ಯಾವುದೇ ಅಡಚಣೆಗಳಿಗೆ ಕುಗ್ಗಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next