ಚಾಮರಾಜನಗರ : ”ಸಿದ್ದರಾಮಯ್ಯ ಜ್ಯೋತಿಷ್ಯ ಹೇಳುತ್ತಾರಾ? ಅನ್ನ ಭಾಗ್ಯ ಯೋಜನೆ ಯಶಸ್ವಿಯಾಗಿದ್ದಾರೆ ನೀವ್ಯಾಕೆ ವಿಪಕ್ಷದಲ್ಲಿ ಕೂರುತ್ತಿದ್ದಿರಿ?” ಎಂದು ಶುಕ್ರವಾರ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಅನ್ನಭಾಗ್ಯ ಯೋಜನೆ ನಿಲ್ಲಿಸುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಶ್ರೀನಿವಾಸ್ ಪ್ರಸಾದ್ ಈ ಪ್ರತಿಕ್ರಿಯೆ ನೀಡಿದ್ದಾರೆ.
”28 ಲೋಕಸಭಾ ಕ್ಷೇತ್ರಗಳ ಪೈಕಿ 1 ರಲ್ಲಿ ಮಾತ್ರ ಗೆದ್ದಿದ್ದೀರಿ. ನಿಮ್ಮ ಅನೇಕ ಮಂತ್ರಿಗಳು ಸೋತಿದ್ದಾರೆ. ಲೋಕಸಭೆ ಹಾಗು ವಿಧಾನಸಭೆಯಲ್ಲಿ ಹೀನಾಯಸ್ಥಿತಿ ತಲುಪಿದ್ದೀರಿ. ಯಾರು ಹೋಗಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ” ಎಂದು ”ಸರ್ಕಾರ ನಡೆಸಲು ಆಗದಿದ್ದರೆ ಬಿಟ್ಟು ಹೋಗಿ” ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
”ದಾವಣಗೆರೆಯಲ್ಲಿ 6 ಲಕ್ಷ ಜನ ಸೇರಿ ಮೈಸೂರು ಪಾಕ್ ತಿನ್ನ್ಕೊಂಡು ನಿಮಗೆ ಟಾನಿಕ್ ಕೊಟ್ಟರಲ್ಲಾ? ಇನ್ನಾದರು ಚಾಮುಂಡೇಶ್ವರಿಯಲ್ಲಿ ನಿಲ್ಲುತ್ತೇನೆ ಅಂತ ಹೇಳುತ್ತೀರಾ? ನಿಮಗೆ ಆ ಧೈರ್ಯ ಬಂದಿದೆಯಾ? ಅದರ ಬಗ್ಗೆ ಮಾತನಾಡಪ್ಪ, ಉಳಿದಿದ್ದು ಯಾಕೆ ಮಾತಾಡುತ್ತೀಯಾ?, 6 ಲಕ್ಷ ಜನ ಟಾನಿಕ್ ಕೊಟ್ರು ಸಿದ್ದರಾಮಯ್ಯ ಇನ್ನೂ ಕ್ಷೇತ್ರದ ಹುಡುಕಾಟದಲ್ಲಿದ್ದು, ರಾಜಕೀಯ ಅಲೆಮಾರಿಯಾಗಿದ್ದಾರೆ” ಎಂದರು.
ಕಾಂಗ್ರೆಸ್‌ಗೆ ಗುಲಾಂನಬಿ ಅಜಾದ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ”ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಸಂದಿಗ್ದ ಪರಿಸ್ಥಿತಿಯಲ್ಲಿದೆ. ಕಾಂಗ್ರೆಸ್ ನ ಶಕ್ತಿ ಕುಂದಿದೆ.ಒಂದೆರೆಡು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ ಎಂದು ಗುರುತಿಸಲು ಸಹಾ ಆಗುತ್ತಿಲ್ಲ. ನೂರು ವರ್ಷ ಇತಿಹಾಸ ಇರುವ ಕಾಂಗ್ರೆಸ್ ಇಂದು ಬಹಳ ಶೋಚನಿಯ ಸ್ಥಿತಿಯಲ್ಲಿದೆ. ಕಾಂಗ್ರೆಸ್ ನಲ್ಲಿ ಹಿರಿಯರು ಯಾರು ಕಾಣುತ್ತಿಲ್ಲ.ಸೋನಿಯಾ ಗಾಂಧಿ ಆರೋಗ್ಯ ದೃಷ್ಟಿಯಿಂದ ಎಐಸಿಸಿ ಅಧ್ಯಕ್ಷರಾಗುವುದಿಲ್ಲ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಕೈಯಲ್ಲಿ ಆಗುತ್ತಿಲ್ಲ, ಅಸಹಾಯಕತೆ ತೋರಿಸುತ್ತಿದ್ದಾರೆ” ಎಂದರು.