Advertisement

ಸಮಕಾಲೀನ ಸ್ಥಿತಿಯ ಕೈಗನ್ನಡಿ ಅಂಧಯುಗ

03:11 PM Jan 19, 2018 | |

 ಹಿಂದಿಯ ಲೇಖಕ ಧರ್ಮವೀರ ಭಾರತಿಯವರು ಬರೆದ ಯುದ್ಧ ವಿರೋಧಿ ನಾಟಕ ಅಂಧಯುಗ. ಮಹಾಭಾರತ ಯುದ್ಧದ ಕೊನೆಯ ದಿನವನ್ನು ರೂಪಕವಾಗಿಟ್ಟುಕೊಂಡು ದೇಶ ವಿಭಜನೆಯಾದ ಕಾಲದಲ್ಲಿ ಉಂಟಾದ ಕಲಹ, ಹಿಂಸೆ, ರಕ್ತಪಾತಗಳ ಹಿಂದಿನ‌ ಅಮಾನವೀತೆಯನ್ನೂ ,ಕ್ರೌರ್ಯವನ್ನೂ ಚಿತ್ರಿಸುವುದು ಈ ನಾಟಕದ ಉದ್ದೇಶ. ಶಿಕಾರಿಪುರ ಗುಡಿತಂಡದ ಕಲಾವಿದರು ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ಅಭಿನಯಿಸಿ ತೋರಿಸಿದರು. ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ತಿಪ್ಪೇಸ್ವಾಮಿ ಅನುವಾದಿಸಿದ ನಾಟಕವನ್ನು ಇಕ್ಬಾಲ್‌ ಅಹಮದ್‌ ನಿರ್ದೇಶಿಸಿದರು. 

Advertisement

ಸ್ವಾರ್ಥ, ಸೇಡು,ಅಸೂಯೆಗಳಿಗೆ ಜ್ವಲಂತ ಉದಾಹರಣೆ ಅಶ್ವತ್ಥಾಮ. ಈ ಗುಣಗಳನ್ನು ಹೊತ್ತುಕೊಂಡೇ ಚಿರಂಜೀವಿಯಾಗುವ ಆತ ಮನುಷ್ಯ ಕುಲಕ್ಕೆ ಒಂದು ಕೆಟ್ಟ ಮಾದರಿಯಾಗಿ ನಿಲ್ಲುತ್ತಾನೆ. ಯುಧಿಷ್ಠಿರನ ಮೇಲೆ ಸೇಡು ತೀರಿಸಿಕೊಳ್ಳಲು ಅಶ್ವತ್ಥಾಮ ಕುದಿಯುತ್ತಿರುತ್ತಾನೆ. ಯುದ್ಧದ ಕೊನೆಯ ದಿವಸ ಪಾಂಡವರು ಗೆಲ್ಲುವ ಸೂಚನೆ ಕಂಡಾಗ ಅದನ್ನು ಸಹಿಸಕೊಳ್ಳಲಾರದೆ ವಿದುರ, ಮಾತುಲ, ಕೃತವರ್ಮರು ಎಷ್ಟು ಹೇಳಿದರೂ ಕೇಳದೆ, ಧರ್ಮಜನೂ ಯುದ್ಧದಲ್ಲಿ ಅಧರ್ಮದ ದಾರಿಯಲ್ಲೇ ನಡೆದಿರುವಾಗ ತನಗೆ ಧರ್ಮದ ಹಂಗೇಕೆ ಎನ್ನುತ್ತ, ಪಾಂಡವರು ಗಾಢ ನಿದ್ದೆಯಲ್ಲಿರುವ ಹೊತ್ತು ನೋಡಿ ಅವರನ್ನು ಕೊಲ್ಲಬೇಕೆಂದು ಶಿಬಿರಕ್ಕೆ ರೋಷಾವೇಶನಾಗಿ ನುಗ್ಗುತ್ತಾನೆ. ಆದರೆ ಕತ್ತಲಲ್ಲಿ ಪಾಂಡವರ ಐದು ಮಕ್ಕಳನ್ನು ಕೊಂದು ಶಿಶು ಹತ್ಯೆ ಪಾಪಗೈಯುತ್ತಾನೆ. ವ್ಯಾಸರ ಶಾಪಕ್ಕೆ ಗುರಿಯಾಗಿ ರೋಗರುಜಿನಗಳನ್ನು ಹೊತ್ತುಕೊಂಡು ಬದುಕುವ ನರಕ ಸದೃಶ ಬಾಳು ಆತನದಾಗುತ್ತದೆ. ಹಿಂದು ಮುಂದು ಯೋಚಿಸದೆ ಪಾಪದ ಕೆಲಸಗಳಿಗೆ ಮುನ್ನುಗ್ಗುವ ಮೂಲಕ ಅಂಧಯುಗದ ಸೃಷ್ಟಿಗೆ ಕಾರಣರಾಗುವವರಿಗೆ ಅಶ್ವತ್ಥಾಮನೊಂದು ಪಾಠ.  ತಂದೆ,ತಾಯಿ ಮತ್ತು ಅಣ್ಣಂದಿರನ್ನು ಪ್ರತಿಭಟಿಸಿ ಯುದ್ಧಕ್ಕೆ ಸೇರದೇ ನಿಂತವನು ದೃತರಾಷ್ಟ್ರನ ದಾಸಿಪುತ್ರ ಯುಯುತ್ಸು. ಆದರೆ ನೂರು ಮಂದಿ ಕೌರವರೂ ಸತ್ತು ಹೋಗಿ ಉಳಿದ ಒಬ್ಬನೇ ಒಬ್ಬ ಮಗನ ಸಾವಿಗೆ ಹೊಟ್ಟೆಕಿಚ್ಚಿನ ಬೆಂಕಿಯಲ್ಲಿ ಉರಿಯುವ ಗಾಂಧಾರಿ ಕಾರಣಳಾಗುತ್ತಾಳೆ. ಪಾಂಡವರ ಗೆಲುವನ್ನು ಸಹಿಸಿಕೊಳ್ಳಲಾರದೆ ಅವರನ್ನು ಭೇಟಿಯಾಗುವ ನೆಪದಲ್ಲಿ ಯುಯುತ್ಸುವಿನ ಜತೆಗೆ ಅವರ ಶಿಬಿರಕ್ಕೆ ಹೋಗಿ, ಅವರನ್ನು ತನ್ನ ನೋಟದಿಂದಲೇ ಕೊಲ್ಲುವೆನೆಂದು ಕಣ್ಣಿನ ಪಟ್ಟಿ ಬಿಚ್ಚಿಕೊಳ್ಳುವ ಆಕೆಯ ಮುಂದೆ ಮೊದಲು ಕಾಣಿಸಿಕೊಳ್ಳುವ ಯುಯುತ್ಸು ಸಾವಿಗೀಡಾಗುವುದು ಬಹು ದೊಡ್ಡ ದುರಂತ. 

ಕಾವ್ಯರೂಪದಲ್ಲಿರುವ ಈ ನಾಟಕದಲ್ಲಿ ನಿಧಾನ ಗತಿಯಲ್ಲಿದ್ದ ಸಂಭಾಷಣೆಗಳ ನಿರ್ವಹಣೆಯು ವಸ್ತುವಿನ ದುರಂತಪೂರ್ಣ ಧ್ವನಿಗೆ ಪೂರಕವಾಗಿತ್ತು. ನಟರ ಅಭಾವದಿಂದಾಗಿ ಒಬ್ಬೊಬ್ಬ ನಟರು ಎರಡೆರಡು ಪಾತ್ರಗಳನ್ನು ನಿರ್ವಹಿಸಿದರು. ಪ್ರಹರಿ, ಧೃತರಾಷ್ಟ್ರ, ಗಾಂಧಾರಿ, ಸಂಜಯ, ವಿದುರ, ವ್ಯಾಸ, ಮಾತುಲ, ಕೃತವರ್ಮ ಎಲ್ಲರೂ ಅಭಿನಯ, ಹಾವಭಾವ ಮತ್ತು ಚಲನವಲನಗಳಲ್ಲಿ ಪಾತ್ರೋಚಿತ ಎಚ್ಚರಿಕೆ ವಹಿಸಿದರು. ಒಂದೇ ರೀತಿಯ ಆಲೋಚನೆ ಮತ್ತು ಉದ್ದೇಶಗಳಿರುವ ಪಾತ್ರಗಳನ್ನು ಹಗ್ಗದ ಸೂತ್ರದಿಂದ ಬಂಧಿಸಿದ್ದು ಸಾಂಕೇತಿಕವಾಗಿದ್ದು, ತಮ್ಮ ಅಂಧತೆಯ ಮಿತಿಗಳಿಂದ ಬಿಡಿಸಿಕೊಳ್ಳಲಾಗದ ಅವರ ಮಾನಸಿಕ ಸ್ಥಿತಿಯನ್ನು ಅದು ಸೂಚಿಸಿತು. ಸಾರ್ವತ್ರಿಕ ಸಂದೇಶವಿರುವ ನಾಟಕವಾದ್ದರಿಂದ ವೇಷ ಭೂಷಣಗಳಲ್ಲಿ ಭಾರತೀಯತೆಗಿಂತ ಪಾಶ್ಚಾತ್ಯ ಕ್ರಮವನ್ನೇ ಹೆಚ್ಚು ಅನುಸರಿಸಲಾಗಿತ್ತು. ನಿರೂಪಕನಂತೆ ಅಲ್ಲಲ್ಲಿ ರಂಗದ ಮೇಲೆ ಕಥೆ ಹೇಳುತ್ತ ಬಂದ ಸಮರ್ಥ ಗಾಯಕನಿಂದ ಮೂಡಿಬಂದ ಜಾನಪದ ದಾಟಿಯ ಹಾಡುಗಳು ಸುಶ್ರಾವ್ಯವಾಗಿದ್ದವು. ಯಾವುದೇ ರಂಗಸಜ್ಜಿಕೆಯಿಲ್ಲದೆ,ಉದ್ದಕ್ಕೂ ಸರಳ ಬೆಳಕಿನ ಪ್ರಯೋಗ ಮತ್ತು ಹಿನ್ನೆಲೆಯ ಶಬ್ದಗಳ‌ ಮೂಲಕ ನಾಟಕ ಪ್ರದರ್ಶಿತಗೊಂಡಿತು. ತಾಂತ್ರಿಕತೆಗಿಂತ ಹೆಚ್ಚು ಅಭಿನಯಕ್ಕೆ ಅವಕಾಶ ನೀಡಿದ ನಾಟಕವಿದು. 

ಡಾ| ಪಾರ್ವತಿ ಜಿ.ಐತಾಳ್‌ 

Advertisement

Udayavani is now on Telegram. Click here to join our channel and stay updated with the latest news.

Next