ಶಿವಮೊಗ್ಗ: ಲೌಕಿಕ ವ್ಯವಹಾರದ ಜೊತೆಗೆ ನಾವು ಪಾರಮಾರ್ಥಿಕತೆ ಬಗ್ಗೆಯೂ ಚಿಂತನ-ಮಂಥನ ನಡೆಸಿ ಸಮನ್ವಯದೊಂದಿಗೆ ಆಧ್ಯಾತ್ಮಿಕ ಜಾಗೃತಿ ಮೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾಡಿನ ಧಾರ್ಮಿಕ ಪರಂಪರೆಗೆ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಬೆಂಗಳೂರಿನ ಉದ್ಯಮಿ ಕೇಶವ ರಂಗ ಪೈ ಹೇಳಿದರು.
ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜ ಹಾಗೂ ಶ್ರೀ ವಾಗೇಶ್ವರಿ ಮಹಿಳಾ ಮಂಡಳಿ ಆಶ್ರಯದಲ್ಲಿ ಈಚೆಗೆ ಇಲ್ಲಿನ ಓಟಿ ರಸ್ತೆಯ ಲಕ್ಷ್ಮಿ ವೆಂಕಟರಮಣ ದೇವಮಂದಿರದಲ್ಲಿ ಆಯೋಜಿಸಲಾಗಿದ್ದ ಘರ್ ಘರ್ (ಮನೆ ಮನೆಗೆ) ಭಜನೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶಿವಮೊಗ್ಗದ ಜಿಎಸ್‌ಬಿ ಸಮಾಜ ಕಳೆದೊಂದು ವರ್ಷದಿಂದ ಪ್ರತಿ ಶುಕ್ರವಾರ ಸಂಜೆ ನಗರದ ಬೇರೆ-ಬೇರೆ ಮನೆಗಳಲ್ಲಿ ನಿರಂತರವಾಗಿ ಭಜನಾ ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ. ಪ್ರತಿ ಮನೆಯಲ್ಲಿಯೂ ಭಜನೆಯಿಂದ ಸಾಮಾಜಿಕ ಪರಿವರ್ತನೆ ಆಗುತ್ತದೆ. ಭಜನಾ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೂ ನಾವು ಹಸ್ತಾಂತರಿಸಿ ಆರೋಗ್ಯಪೂರ್ಣ, ಸುಸಂಸ್ಕೃತ ಸಮಾಜ ರೂಪಿಸಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೃಢ ಭಕ್ತಿಯಿಂದ ಭಗವಂತನನ್ನು ಆರಾಧಿಸಿದರೆ ಆತನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದರು. ಜಿಎಸ್‌ಬಿ ಸಮಾಜದ ಕಾರ್ಯದರ್ಶಿ ಸದಾನಂದ ನಾಯಕ್ ಮಾತನಾಡಿ ತಪಸ್ಸು, ಯಜ್ಞ, ಯಾಗಾದಿ ಮಾಡಲು ಸಾಧ್ಯವಾ ಗದಿದ್ದರೂ ನಿತ್ಯವೂ ಇಚ್ಛಾಶಕ್ತಿಯಿಂದ ಭಜನೆ ಮೂಲಕ ಭಗವಂತನ ನಾಮಸ್ಮರಣೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದರು.
ಸಮಾಜದ ಅಧ್ಯಕ್ಷ ಭಾಸ್ಕರ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ವಾಗೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಕಿರಣ್ ಮಾಯಿ, ಪ್ರತಿಮಾ ನಾಯಕ್, ನಳಿನಿ ಕಾಮತ್, ಸಂತೃಪ್ತಿ, ಅನಿತ ಮತ್ತಿತರರು ಭಾಗವಹಿಸಿದ್ದರು. ರಮೇಶ್ ಶಣೈ ಸ್ವಾಗತಿಸಿದರು. ಬಿ.ಎಸ್.ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ಕಿರಣ್ ಪೈ ನಿರೂಪಿಸಿದರು. ಮನೋಹರ್ ಕಾಮತ್ ವಂದಿಸಿದರು