ಜೇವರ್ಗಿ: ಕಳೆದ ಕೆಲ ದಿನಗಳಿಂದ ಪಟ್ಟಣಕ್ಕೆ ಕಲುಷಿತ ನೀರು ಪೂರೈಸುತ್ತಿರುವುದರಿಂದ ಸ್ಥಳೀಯ ಜನತೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಿಸುತ್ತಿದ್ದಾರೆ. ತಾಲೂಕಿನ ಕಟ್ಟಿಸಂಗಾವಿ ಹತ್ತಿರದ ಭೀಮಾ ನದಿಯಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ.
ಕೆಲವು ಬಡಾವಣೆ ಹೊರತುಪಡಿಸಿ ಉಳಿದ ಎಲ್ಲ ವಾರ್ಡ್‌ಗಳಿಗೆ ಭೀಮಾನದಿಯ ನೀರೆ ಆಸರೆ. ಬೇಸಿಗೆ ಸಂದರ್ಭದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದಾಗಲೂ ಕಲುಷಿತ ನೀರು ಪೂರೈಕೆಯಾಗಿರಲಿಲ್ಲ. ಕಳೆದ ಕೆಲ ದಿನಗಳಿಂದ ಮಾತ್ರ ಪಟ್ಟಣಕ್ಕೆ ನಿತ್ಯ ಕಲುಷಿತಗೊಂಡ ನೀರು ಪೂರೈಕೆ ಆಗುತ್ತಿರುವುದರಿಂದ ಸ್ಥಳೀಯರು ಆತಂಕಪಡುವಂತೆ ಆಗಿದೆ.
ಬಸ್ ಡಿಪೋ ಹತ್ತಿರದ ಫಿಲ್ಟರ್ ಬೆಡ್ ಬಳಿ ನೀರು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆಯಾದರೂ ಕಲುಷಿತ ನೀರನ್ನೇ ಜನರು ನಿತ್ಯ ಕುಡಿಯುವಂತಾಗಿದೆ. ಪಟ್ಟಣದಲ್ಲಿ ಬಹುತೇಕ ಕಡೆ ನೀರಿನ ಪೈಪ್ ಒಡೆದು ಮಳೆ ನೀರು, ಚರಂಡಿ ನೀರು ಸೇರಿ ಕಲುಷಿತಗೊಳ್ಳುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ಜನತೆ ಫಿಲ್ಟರ್ ನೀರು ಖರೀದಿಸುವಂತಹ ಅನಿವಾರ್ಯತೆ ಎದುರಾಗಿದೆ. ಪ್ರತಿ ಕ್ಯಾನ್ ನೀರಿಗೆ 30ರಿಂದ 40ರೂ. ನಿಗದಿ ಮಾಡಲಾಗಿದೆ. ಭೀಮಾನದಿಯ ನೀರನ್ನು ಕೇವಲ ಬಟ್ಟೆ ತೊಳೆಯಲು ಮಾತ್ರ ಬಳಸುವಂತಾಗಿದೆ. ಶುದ್ಧ ನೀರಿನ ಘಟಕ ಸ್ಥಾಪಿಸಿ: ಕೋವಿಡ್ ಆತಂಕದಲ್ಲಿರುವ ನಮಗೆ ಕಲುಷಿತ ನೀರು ಪೂರೈಕೆ ಮತ್ತಷ್ಟು ಭಯ ಹುಟ್ಟಿಸಿದೆ. ಸ್ನಾನ ಮಾಡೋದಕ್ಕೂ ಈ ನೀರು ಯೋಗ್ಯವಿಲ್ಲ. ಕೂಡಲೇ ಸಂಬಂಧಪಟ್ಟವರು ಶುದ್ಧ ನೀರು ಪೂರೈಸುವುದರ ಜತೆಗೆ ಪಟ್ಟಣದಲ್ಲಿ ವಾರ್ಡ್‌ಗೊಂದು ಶುದ್ಧ ನೀರಿನ ಘಟಕ ಸ್ಥಾಪಿಸಬೇಕು ಎಂದು ಸ್ಥಳೀಯ ಮುಖಂಡ ಭವಾನಿಸಿಂಗ್ ಠಾಕೂರ ಆಗ್ರಹಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ ಕೊಳ್ಳಗಳಿಂದ ನೀರು ಭೀಮಾ ನದಿ ಸೇರಿದೆ. ಇದರಿಂದ ನೀರು ಕಲುಷಿತಗೊಂಡಿದ್ದು, ನೀರು ಶುದ್ಧೀಕರಣ ಘಟಕದಲ್ಲಿ ಕೆಲ ಪ್ರಯೋಗ ನಡೆಸಿ, ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.
ಲಕ್ಷ್ಮೀಶ, ಜೇವರ್ಗಿ, ಮುಖ್ಯಾಧಿಕಾರಿ, ಪುರಸಭೆ
-ವಿಜಯಕುಮಾರ ಎಸ್.ಕಲ್ಲಾ