Advertisement

ಕಲಬುರಗಿ: ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯ ಎರಡು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಸ್ಥಳಾಂತರ

03:37 PM Jun 24, 2020 | sudhir |

ಕಲಬುರಗಿ: ಗುರುವಾರ(ಜೂ.25)ದಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ‌ ಸಿದ್ಧತೆ ಮಾಡಿಕೊಂಡಿದ್ದು, ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯಲ್ಲಿ ಬರುತ್ತಿದ್ದ ಎರಡು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಲಾಗಿದೆ.

Advertisement

ಜಿಲ್ಲಾದ್ಯಂತ 43,714 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 136 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಇದರಲ್ಲಿ ಎರಡು ಪರೀಕ್ಷಾ ಕೇಂದ್ರಗಳು ಕಂಟೈನ್ಮೆಂಟ್ ಝೋನ್ ನಲ್ಲಿ ಬರುತ್ತಿದ್ದು, ಎರಡೂ ಕೇಂದ್ರಗಳನ್ನು ಪಕ್ಕದ ಗ್ರಾಮಗಳಿಗೆ ಸ್ಥಳಾಂತರ ಮಾಡಲಾಗಿದೆ.

ಆಳಂದ ತಾಲೂಕಿನ ಅಂಬಲಗಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರವನ್ನು ಮುದ್ದಡಗಾ ಸರ್ಕಾರಿ ಪ್ರೌಢಶಾಲೆಗೆ ಮತ್ತು ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರವನ್ನು ದೇಗಲಮಡಿ ಸರ್ಕಾರಿ ಪ್ರೌಢ ಶಾಲೆಗೆ ಸ್ಥಳಾಂತರಿಸಲಾಗಿದೆ. ಪರೀಕ್ಷಾ ಕೇಂದ್ರ ಬದಲಾವಣೆ ಬಗ್ಗೆ ಆಯಾ ವಿದ್ಯಾರ್ಥಿಗಳಿಗೆ ಈಗಾಗಲೇ ಮಾಹಿತಿ ಮುಟ್ಟಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿಯಾಗಿ 21 ಪರೀಕ್ಷಾ ಬ್ಲಾಕ್ ಗಳು ಮತ್ತು ಪ್ರತಿ ತಾಲೂಕಿನಲ್ಲಿ ಎರಡು ಮೀಸಲು ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ವಿತರಿಸಲು 86,164 ಮಾಸ್ಕ್ ಗಳು ಹಾಗೂ ಸ್ಯಾನಿಟೈಸರ್, ತಪಾಸಣೆಗೆಂದು 250 ಥರ್ಮಲ್ ಸ್ಕ್ರೀನಿಂಗ್ ಗನ್ ಗಳು ಸಂಗ್ರಹಿಸಿ, ಆಯಾ ಪರೀಕ್ಷಾ ಕೇಂದ್ರಗಳ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next