Advertisement
ಹಾಸ್ಪಾರೆ ಮತ್ತು ಕಲ್ಲುಗುಡ್ಡೆ ಪ್ರದೇಶದಲ್ಲಿ ತೋಡೊಂದು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಇಲ್ಲಿನ ಮಲೆಕುಡಿಯ ಸಮುದಾಯ ಹಾಗೂ ಸ್ಥಳೀಯರು ಇದೇ ದಾರಿಯನ್ನು ಅವಲಂಬಿಸಿದ್ದು, ಮಳೆಗಾಲದಲ್ಲಿ ಸಂಪರ್ಕಕ್ಕೆ ನರಕಯಾತನೆ ಅನುಭವಿಸಿಕೊಂಡು ಬರುತ್ತಿದ್ದರು. ತೋಡಿಗೆ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಈ ಭಾಗದ ಜನರು ಸಂಬಂಧಪಟ್ಟ ಇಲಾಖೆಗೆ ಹಾಗೂ ಜನಪ್ರತಿನಿಧಿಗಳಿಗೆ ಈ ಹಿಂದೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ 2015ರಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ 6 ಲಕ್ಷ ರೂ. ಮಂಜೂರಾಗಿತ್ತು. ಈ ಅನುದಾನದಲ್ಲಿ ಸೇತುವೆ ನಿರ್ಮಾಣದ ಕೆಲಸಗಳು ಪ್ರಾರಂಭವಾಗಿ, ಬಳಿಕ ಅನುದಾನದ ಕೊರತೆಯಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು.
ಕಾಮಗಾರಿಯ ಸಂದರ್ಭ ರಸ್ತೆಯ ಎರಡೂ ಬದಿಯನ್ನು ಅಗೆದು ಪಿಲ್ಲರ್‌ಗಳನ್ನು ಸ್ಥಾಪಿಸಲಾಗಿತ್ತು. ಸೇತುವೆಯ ಎರಡೂ ಬದಿಯಿಂದ ಮಣ್ಣು ತೆಗೆದು ಕಲ್ಲಿನಿಂದ ಕಟ್ಟಿಕೊಡದ ಹಿನ್ನೆಲೆಯಲ್ಲಿ ಮೂಲ ಸಂಚಾರಕ್ಕೂ ತೊಡಕಾಗಿದೆ. ಹಾಸ್ಪಾರೆ – ಕಲ್ಲುಗುಡ್ಡೆ ಭಾಗಕ್ಕೆ ಈಗ ವಾಹನ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಎರಡು ದಿನಗಳ ಹಿಂದೆ ಸುರಿದ ಮಳೆಗೆ ಸೇತುವೆಯ ಬದಿಗಳಲ್ಲಿ ಇದ್ದ ಮಣ್ಣು ಕೊಚ್ಚಿಕೊಂಡು ಹೋದ ಪರಿಣಾಮ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.
Related Articles
ರಸ್ತೆಯನ್ನು ಗೆದಿರುವ ಪರಿಣಾಮ ಈ ಭಾಗದ ಜನರು ದಿನನಿತ್ಯ ಕೃಷಿ ಉತ್ಪನ್ನಗಳನ್ನು ತಲೆಹೊರೆಯಲ್ಲಿ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಇಲ್ಲಿ ಕೆಲವು ಮನೆಗಳಲ್ಲಿ ಅಂಗವಿಕಲರಿದ್ದು, ಅವರಿಗೆ ತೀರಾ ಸಂಕಷ್ಟ ಎದುರಾಗಿದೆ. ವಯೋವೃದ್ಧರು, ಅಂಗವಿಕಲರನ್ನು ಆಸ್ಪತ್ರೆಗಳಿಗೆ ಎತ್ತಿಕೊಂಡೇ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಉದ್ಭವಿಸಿರುವ ಸಮಸ್ಯೆಯನ್ನು ಅರಿತು ಸಂಬಂಧಪಟ್ಟ ಇಲಾಖೆ ಸೇತುವೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
Advertisement
ಎರಡು ದಿನಗಳಲ್ಲಿ ಆರಂಭಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಸೇತುವೆಯ ಬದಿಗೆ ಮಣ್ಣು ಹಾಕಿ ರಸ್ತೆಗೆ ಸಮತಟ್ಟು ಮಾಡಿ ಕೊಡಲು ಬಾಕಿ ಉಳಿದಿದೆ. ಅದನ್ನು ಎರಡು ದಿವಸದಲ್ಲಿ ಗುತ್ತಿಗೆದಾರರು ಕೆಲಸ ಪ್ರಾರಂಭಿಸಲಿದ್ದಾರೆ.
– ಹರೀಶ್
ಇಂಜಿನಿಯರ್ ನಿರ್ಮಿತಿ ಕೇಂದ್ರ ಕಾನೂನು ಹೋರಾಟ
ಸ್ಥಳೀಯ ತೋಡಿಗೆ ಸೇತುವೆ ನಿರ್ಮಾಣವಾಗಬೇಕೆಂದು ಅನೇಕ ವರ್ಷಗಳಿಂದ ಶ್ರಮಿಸುತ್ತಿದ್ದೇವೆ. ಅನೇಕ ಬಾರಿ ನಾನು ಕಚೇರಿಗೆ ಅಲೆದಾಡಿದ್ದೇನೆ. ಈಗ ಸೇತುವೆ ಕಾಮಗಾರಿ ಪೂರ್ಣಗೊಂಡರೂ ರಸ್ತೆಯನ್ನು ಅಗೆದು ಸೇತುವೆಯ ಬದಿ ಕಟ್ಟಿಕೊಡದಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಇದರಿಂದ ಈ ಭಾಗದ ಜನರು ಸಹಿತ ಅಂಗವಿಕಲರಿಗೆ ಸಮಸ್ಯೆಯಾಗಿದೆ. ಕಾಮಗಾರಿ ಪೂರ್ಣಗೊಳಿಸದಿದ್ದರೆ ಕಾನೂನು ರೀತಿಯ ಹೋರಾಟ ಅನಿವಾರ್ಯ.
– ಜನಾರ್ದನ
ಸ್ಥಳೀಯರು ತೇಜೇಶ್ವರ್ ಕುಂದಲ್ಪಾಡಿ