ಬೆಳ್ಳಾರೆ: ಸುಳ್ಯ ತಾಲೂಕು ಕೇಂದ್ರದಿಂದ ತಲಕಾವೇರಿಗೆ ಅತಿ ಹತ್ತಿರದ ಕಚ್ಚಾ ರಸ್ತೆ ಹಾದಿಯಾದ ತೊಡಿಕಾನ – ಪಟ್ಟಿ – ಭಾಗ ಮಂಡಲ ಸಂಪರ್ಕಕ್ಕೆ ಪಟ್ಟಿ ಎಂಬಲ್ಲಿಯ ಗೇಟ್‌ಗೆ ಹಾಕಲಾಗಿದ್ದ ಬೀಗವನ್ನು ಕೊಡಗು ಅರಣ್ಯ ಇಲಾಖೆ ಬುಧವಾರ ತೆರವುಗೊಳಿಸಿದೆ.
ಪಟ್ಟಿ ಅರಣ್ಯಕ್ಕೆ ಮೇಲಾಧಿಕಾರಿಗಳು ಬಂದಿದ್ದ ಸಂದರ್ಭದಲ್ಲಿ ವಾಹನವೊಂದು ಈ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಕಂಡು, ಗೇಟ್‌ಗೆ ಬೀಗ ಜಡಿ ಯಬೇಕು. ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಈ ಮಾರ್ಗವಾಗಿ ಸಂಚಾರಕ್ಕೆ ಅವಕಾಶ ಕೊಡಬಾರದು. ಅಂಥವರು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಅರಣ್ಯ ಸಿಬಂದಿಗೆ ಸೂಚಿಸಿದ್ದರು.
ಮೇಲಧಿಕಾರಿಗಳ ಸೂಚನೆಯಂತೆ ಕೊಡಗು ಅರಣ್ಯ ಇಲಾಖೆ ಸಿಬಂದಿ ರಸ್ತೆಗೆ ಅಡ್ಡಲಾಗಿ ಸಂಕೋಲೆ ಕಟ್ಟಿ, ಬೀಗ ಜಡಿದು ಪ್ರವಾಸಿಗರ ಮತ್ತು ಭಕ್ತರ ಸಂಚಾರಕ್ಕೆ ತಡೆಯೊಡ್ಡಿದ್ದರು. ಇದರಿಂದ ಸಮಸ್ಯೆ ಎದುರಿಸುತ್ತಿದ್ದ ಸ್ಥಳೀಯರು ಪ್ರತಿಭಟನೆಗೂ ಸಿದ್ಧತೆ ನಡೆಸಿದ್ದರು. ಹದಿನೈದು ವರ್ಷಗಳ ಹಿಂದೆಯೂ ಅರಣ್ಯ ಇಲಾಖೆ ಈ ಗೇಟ್‌ಗೆ ಬೀಗ ಹಾಕಿದ್ದಾಗ ತೀವ್ರ ಪ್ರತಿಭಟನೆ ನಡೆಸಲಾಗಿತ್ತು. ಆ ಬಳಿಕ ಇಲಾಖೆ ಗೇಟ್ ತೆರವುಗೊಳಿಸಿತ್ತು.
ಸಂಪರ್ಕ ರಸ್ತೆ ಬಂದ್ ಮಾಡಿದ್ದರಿಂದ ಆಗುತ್ತಿರುವ ಸಮಸ್ಯೆಗಳ ಕುರಿತು, ಸುಳ್ಯ ತಾಲೂಕಿನ ತೊಡಿಕಾನ
ಶ್ರೀ ಮಲ್ಲಿಕಾರ್ಜುವ ದೇವಸ್ಥಾನಕ್ಕೆ ಸಂಬಂಧಿಸಿದ ಈ ಐತಿಹಾಸಿಕ ರಸ್ತೆ ಕುರಿತಾಗಿ ದಾಖಲೆಗಳನ್ನು ಉಲ್ಲೇಖೀಸಿ ಉದಯವಾಣಿ ಸುದಿನ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರವೇ ಗೇಟ್‌ನ ಬೀಗ ತೆರವುಗೊಳಿಸಿ, ಹಗಲು ಹೊತ್ತಿನಲ್ಲಿ ಭಕ್ತರ ಮತ್ತು ಪ್ರವಾಸಿಗರ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.