ಬೆದ್ರಡ್ಕ: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ವಾರ್ಷಿಕ ಮಹಾಸಭೆಯು ಮೇ 12ರಂದು ಬೆದ್ರಡ್ಕ ಸಮೀಪದ ಪುಳ್ಕೂರು ಶ್ರೀ ಮಹಾದೇವ ದೇವಾಲಯದಲ್ಲೂ, ಶ್ರೀ ನೃಸಿಂಹ ಜಯಂತಿಯನ್ನು ಮೇ 17ರಂದು ಮಧೂರು ಗಾಳಿ ಮಂಟಪದ ಗೋಪಾಲಕೃಷ್ಣ ಹೊಳ್ಳ ಅವರ ನಿವಾಸದಲ್ಲಿ ಜರಗಲಿದೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಯಶಸ್ಸಿಗೆ ಸಹಕರಿಸುವಂತೆ ಕಾಸರಗೋಡು ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಅವರು ಕರೆಯಿತ್ತರು.
ಬೆದ್ರಡ್ಕ ಸಮೀಪ ಉಡುವದ ರಾಮ ಹೇರಳ ಅವರ ಮನೆಯಲ್ಲಿ ಜರಗಿದ ಸಂಪರ್ಕ ಸಭೆಯಲ್ಲಿ ಈ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಯು.ರಾಮಚಂದ್ರ ಹೇರಳ,ಶ್ಯಾಮ ರಾವ್ ನೀರಾಳ, ರಾಮ ಹೇರಳ ಉಡುವ,ಗೋಪಾಲಕೃಷ್ಣ ಅಡಿಗ ಮುಟ್ಟತ್ತೋಡಿ ಮುಂತಾದವರು ಉಪಸ್ಥಿತರಿದ್ದರು.
ವಾರ್ಷಿಕ ಮಹಾಸಭೆಯಲ್ಲಿ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಉಪಾಧ್ಯ ಸಾಲಿಗ್ರಾಮ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಲಿಗ್ರಾಮದ ಗುರುನರಸಿಂಹ ದೇಗುಲದ ಧರ್ಮದರ್ಶಿಗಳಾದ ಅಶೋಕ ಕುಮಾರ್ ಹೊಳ್ಳ ಅವರು ಗುರು ಸಂದೇಶ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಧಾರ್ಮಿಕ ಮುಂದಾಳುಗಳಾದ ಶಿವರಾಮ ಕಾರಂತ ದೇಶಮಂಗಲ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು.
ವರದಿ, ಲೆಕ್ಕಪತ್ರ ಮಂಡನೆ ಮಾಡಲಾಗುವುದು. ಅಲ್ಲದೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಸಮಾಜದ ಯುವ ಪ್ರತಿಭೆಗಳಿಂದ ಯಕ್ಷಗಾನ ಪ್ರದರ್ಶನ ಜರಗಲಿದೆ ಎಂಬುದಾಗಿ ಅಂಗಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ವಿವರಣೆ ನೀಡಿದರು.ಪ್ರಶಾಂತ ಹೇರಳ ಸ್ವಾಗತಿಸಿದರು.ಬಿ.ಕೃಷ್ಣ ಕಾರಂತ ವಂದಿಸಿದರು.