ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ವಿಭಾಗದ ಆರು ಜಿಲ್ಲೆಗಳನ್ನು ಒಳಗೊಂಡ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠ ಕಲಬುರಗಿ ಜಿಲ್ಲೆಗೆ ಮಂಜೂರು ಮಾಡಿದೆ ಎಂದು ಕಲಬುರಗಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ರಾಜಕುಮಾರ್ ಎಸ್.ಕಡಗಂಚಿ ತಿಳಿಸಿದರು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿರುವ ಅಸೋಸಿಯೇಷನ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರ ಸಂರಕ್ಷಣಾ ಕಾಯ್ದೆ-2019ರ ಕಲಂ 42 ಅಡಿಯಲ್ಲಿ ಈ ಆಯೋಗ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಗ್ರಾಹಕರು ಈ ಆಯೋಗದ ವ್ಯಾಪ್ತಿಗೆ ಬರಲಿದ್ದಾರೆ. ಬೆಂಗಳೂರು ಹೊರತುಪಡಿಸಿದರೆ ಕಲಬುರಗಿ ಜಿಲ್ಲೆಗೆ ಪ್ರಪ್ರಥಮವಾಗಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಂಜೂರಾಗಿದೆ. 50 ಲಕ್ಷ ರೂ.ಕ್ಕೂ ಅಧಿಕ ಪರಿಹಾರ ಬಯಸುವ ಗ್ರಾಹಕರು ಈ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂದರು.
ಆಯಾ ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಗ್ರಾಹಕರ ಹಿತರಕ್ಷಣಾ ವೇದಿಕೆಯಲ್ಲಿ ಸೂಕ್ತ ಪರಿಹಾರ ದೊರಕದ ಗ್ರಾಹಕರು ಈ ಆಯೋಗದ ಎದುರು ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದರು.
ಬಾರ್ ಅಸೋಸಿಯೇಷನ್ ಉಪಾಧ್ಯಕ್ಷೆ ಪತ್ರುಬಿ ಎ.ಕೆ.ಶಹಾ, ಪ್ರಧಾನ ಕಾರ್ಯದರ್ಶಿ ಪಿ.ಎನ್. ಕಪನೂರ್, ಜಂಟಿ ಕಾರ್ಯದರ್ಶಿ ದೇವನಾಥ ಎಸ್.ಮಾಳಗಿ, ಖಜಾಂಚಿ ವಿಶ್ವಾರಾಧ್ಯ ಕೆ.ಇಜೇರಿ ಹಾಗೂ ಅಸೋಸಿಯೇಷನ್ ಪದಾಧಿಕಾರಿಗಳು ಇದ್ದರು.