Advertisement

Consumer Commission ಮಹತ್ವದ ತೀರ್ಪು: ಅಜ್ಜನ 9 ಲಕ್ಷ ರೂ. ಮೊಮ್ಮಗನಿಗೆ

08:32 PM Aug 09, 2023 | Team Udayavani |

ಧಾರವಾಡ : ತಂದೆಯು ಇಟ್ಟಿದ್ದ ಠೇವಣಿ ಹಣದ ಮೇಲಿನ ಹಕ್ಕು ಮಕ್ಕಳು ಸಾಬೀತುಪಡಿಸಲು ವಿಫಲರಾದರೆ ನಾಮಿನಿಯಾದ ಮೊಮ್ಮಗನಿಗೆ ಹಣ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗವು ಸೂಚಿಸಿದೆ.

Advertisement

ಧಾರವಾಡದ ಗೌಡರ ಓಣಿಯ ಕಿರಣ ಗಿರಿಯಪ್ಪನವರ ಅವರ ಅಜ್ಜ ವಿರುಪಾಕ್ಷಪ್ಪಾ ಗಿರಿಯಪ್ಪನವರ ಅವರು ಕೆಸಿಸಿ ಬ್ಯಾಂಕಿನಲ್ಲಿ 9 ಲಕ್ಷ ರೂ.ಗಳ ಠೇವಣಿ ಇರಿಸಿದ್ದರು. ಈ ಠೇವಣಿ ಅವಧಿ27/07/2023 ರಂದು ಮುಕ್ತಾಯ ಆಗಲಿದ್ದು, ಈ ಅವಧಿಯೊಳಗೆ ದೂರುದಾರನ ಅಜ್ಜ ವಿರುಪಾಕ್ಷಪ್ಪ 17-06-2022 ರಂದು ನಿಧನ ಹೊಂದಿದ್ದಾರೆ. ಮೃತರು ಈ ಠೇವಣಿಗೆ ಮೊಮ್ಮಗ ಕಿರಣ ಅವರನ್ನು ನಾಮ ನಿರ್ದೇಶನ ಮಾಡಿದ್ದರು. ಠೇವಣಿ ಹಣ ಕೊಡುವಂತೆ ಮೊಮ್ಮಗ ಬ್ಯಾಂಕಿಗೆ ಅರ್ಜಿ ಹಾಕಿದ್ದರು. ಅದರನ್ವಯ ಬ್ಯಾಂಕಿನವರು ಠೇವಣಿ ಹಣವನ್ನು ಕಿರಣ ಖಾತೆಗೆ ವರ್ಗಾಯಿಸಿದ್ದರು. ಈ ಮಧ್ಯೆ ಠೇವಣಿದಾರ ವೀರುಪಾಕ್ಷಪ್ಪನ ಮಗ ರಾಜೇಂದ್ರ ಮತ್ತು ಮಗಳು ಭುವನೇಶ್ವರಿ ಎದುರುದಾರ ಬ್ಯಾಂಕಿಗೆ ವಕೀಲರ ಮೂಲಕ ನೋಟಿಸು ಕೊಡಿಸಿ, ದೂರುದಾರನಿಗೆ ಠೇವಣಿ ಹಣ ನೀಡಬಾರದೆಂದು ಆಕ್ಷೇಪಿಸಿದ್ದರು.

ಈ ಆಕ್ಷೇಪಣೆಯನ್ನು ಪರಿಗಣಿಸಿ ಬ್ಯಾಂಕಿನವರು ದೂರುದಾರರಿಗೆ ಠೇವಣಿ ಹಣ ಕೊಟ್ಟಿರಲಿಲ್ಲ. ಅಂತಹ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ. ಹೀಗಾಗಿ ಬ್ಯಾಂಕಿನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೊಮ್ಮಗ ಕಿರಣ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ವಿಚಾರಣೆ ಕೈಗೊಂಡ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಒಳಗೊಂಡ ಆಯೋಗವು, ದೂರುದಾರ ಠೇವಣಿ ಹಣಕ್ಕೆ ಸಂಬಂಽಸಿದಂತೆ ನಾಮನಿರ್ದೇಶಿತ ಇದ್ದಾನೆ. ಕಾರಣ ಠೇವಣಿ ಹಣ ನಾಮಿನಿಯಾದ ಮೊಮ್ಮಗನಿಗೆ ಸಲ್ಲಿಬೇಕಾಗುತ್ತದೆ ಎಂದು ತೀರ್ಪು ನೀಡಿದೆ.

ಮಕ್ಕಳಾದ ರಾಜೇಂದ್ರ ಮತ್ತು ಭುವನೇಶ್ವರಿ ಸಲ್ಲಿಸಿದ ಆಕ್ಷೇಪಣೆಯನ್ನು ಗಮನದಲ್ಲಿಟ್ಟುಕೊಂಡು ಆಯೋಗದ ತೀರ್ಪು ಆದ 3 ತಿಂಗಳ ಒಳಗಾಗಿ ಈ ಇಬ್ಬರೂ ಆಕ್ಷೇಪಿತರು ಸಂಬಂಧಿಸಿದ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ಹೂಡಿ ತಮಗೂ ಆ ಠೇವಣಿ ಹಣದಲ್ಲಿ ಇರುವ ಹಕ್ಕಿನ ಬಗ್ಗೆ ಆದೇಶ ಪಡೆದು ಎದುರುದಾರ ಬ್ಯಾಂಕಿಗೆ ಹಾಜರುಪಡಿಸುವಂತೆ ಸೂಚಿಸಿ, ಅವರಿಬ್ಬರಿಗೂ ನೋಟಿಸು ನೀಡುವಂತೆ ಆಯೋಗವು ತೀರ್ಪಿನಲ್ಲಿ ಕೆಸಿಸಿ ಬ್ಯಾಂಕಿಗೆ ಸೂಚಿಸಿದೆ. ಮೂರು ತಿಂಗಳ ಒಳಗಾಗಿ ಈ ಠೇವಣಿಯಲ್ಲಿ ಹಕ್ಕನ್ನು ಸಾಬೀತು ಪಡಿಸಿ ಸಂಬಂಧಿಸಿದ ನ್ಯಾಯಾಲಯದಿಂದ ಮಕ್ಕಳು ಆದೇಶ ತರಲು ವಿಫಲರಾದಲ್ಲಿ ನಂತರ ನಾಮಿನಿಯಾದ ಮೊಮ್ಮಗನಿಗೆ 9 ಲಕ್ಷ ರೂ. ಠೇವಣಿ ಹಣ ಮತ್ತು ಅದರ ಮೇಲೆ ಬರುವ ಬಡ್ಡಿ ಸೇರಿಸಿ ನೀಡುವಂತೆ ಬ್ಯಾಂಕಿಗೆ ಆಯೋಗವು ಆದೇಶಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next