Advertisement

ಜಮೀನು ವ್ಯಾಜ್ಯ ಇತ್ಯರ್ಥಕ್ಕೆ “ಸಮಾಲೋಚನ ಅದಾಲತ್‌’

11:55 PM Jun 14, 2023 | Team Udayavani |

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಯೋಜನೆಗಳಲ್ಲಿ ಜಮೀನು ವ್ಯಾಜ್ಯ ಬಗೆಹರಿಸಿ ಕಾಮಗಾರಿ ತ್ವರಿತಗೊಳಿಸಲು ಲೋಕ್‌ ಅದಾಲತ್‌ ಮಾದರಿಯಲ್ಲಿ ಜಮೀನು ಮಾಲಕರ ಜತೆ ಸಮಾಲೋಚನೆ ಅದಾಲತ್‌ ನಡೆಸಲಾಗುವುದು ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ತಿಳಿಸಿದ್ದಾರೆ.

Advertisement

ಕರ್ನಾಟಕ ಗೃಹ ಮಂಡಳಿಯಲ್ಲಿ ಬುಧವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅನಂತರ ಅವರು ಮಾತನಾಡಿ, ಸೂರ್ಯ ನಗರ ಯೋಜನೆ ಸೇರಿದಂತೆ ಗೃಹಮಂಡಳಿಯ ಹತ್ತು ಯೋಜನೆಗಳಿಗೆ 4,615 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು ಈ ಪೈಕಿ ಸೂರ್ಯ ನಗರ ನಾಲ್ಕನೇ ಹಂತದ 700 ಎಕರೆ ಸೇರಿದಂತೆ ಒಟ್ಟು ಒಂದು ಸಾವಿರ ಎಕರೆಗೆ ಸಂಬಂಧಿ ಸಿದ ವ್ಯಾಜ್ಯದಿಂದ ಹತ್ತೂ ಯೋಜನೆಗಳಿಗೆ ಗ್ರಹಣ ಹಿಡಿದಂತಾಗಿದೆ. ಹೀಗಾಗಿ ರೈತರು ಹಾಗೂ ಜಮೀನು ಮಾಲಕರ ಜತೆ ಸಮಾಲೋಚನೆ ನಡೆಸಿ ಇತ್ಯರ್ಥಪಡಿಸಿ ಯೋಜನೆಗಳಿಗೆ ವೇಗ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಮೀನು ಸ್ವಾಧೀನ ಸೇರಿ ನ್ಯಾಯಾಲಯಗಳಲ್ಲಿ ಇರುವ ಪ್ರಕರಣ ವರ್ಷಗಟ್ಟಲೆ ನಡೆಯುತ್ತಿದೆ. ಇದಕ್ಕೆ ಕಾರಣ ಏನು ಎಲ್ಲಿ ಲೋಪ ಆಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆಯಲು ಕಾನೂನು ವಿಭಾಗದ ಜತೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ಸಗಟು ಹಂಚಿಕೆ ಬಗ್ಗೆ ಚಿಂತನೆ
ರಾಜ್ಯದ ಹಲವೆಡೆ ಗೃಹ ಮಂಡಳಿಯಿಂದ ರಚಿಸಿರುವ ಬಡಾವಣೆಗಳಲ್ಲಿ ಮನೆ ಹಾಗೂ ನಿವೇಶನಗಳಿಗೆ ಬೇಡಿಕೆ ಇಲ್ಲದಿರುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾವ ಆಗಿದ್ದು ಆ ರೀತಿಯ ಎಲ್ಲ ಬಡಾವಣೆಗಳ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಜಿಲ್ಲಾ ಮಟ್ಟದ ಜನತಾ ದರ್ಶನ ವೇಳೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯವಾಗಿ ಇರುವ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿ ಮೂಲ ಸೌಕರ್ಯ ಕೊರತೆ ಮತ್ತಿತರ ಸಮಸ್ಯೆ ಇದ್ದರೆ ಬಗೆಹರಿಸಿ ಅಗತ್ಯವಾದರೆ ಕೆಲವು ರಿಯಾಯಿತಿ ಸಹ ನೀಡಿ ಗೃಹ ಮಂಡಳಿ ನಿವೇಶನ, ಮನೆಗಳಿಗೆ ಬೇಡಿಕೆ ಬರುವಂತೆ ಮಾಡಲಾಗುವುದು. ಸರಕಾರಿ ನೌಕರರ ಸಂಘ ಸೇರಿದಂತೆ ಸಂಘ ಸಂಸ್ಥೆಗಳಿಗೆ ಸಗಟು ಹಂಚಿಕೆ (ಬಲ್ಕ… ಅಲಾಟ್‌ ಮೆಂಟ್‌ )ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next