ಮಂಗಳೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಶ್ರೀರಾಮನ ಮೂರ್ತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೇಶದ ವಿವಿಧೆಡೆಯಿಂದ ಶಿಲೆಗಳನ್ನು ಸಂಗ್ರಹಿಸಲಾಗಿದ್ದು, ಉತ್ತಮ ಶಿಲೆ ಗುರುತಿಸಿ ರಾಮದೇವರ ಮೂರ್ತಿ
ನಿರ್ಮಿಸಲಾಗುವುದು ಎಂದು ಪೇಜಾವರ ಮಠಾಧೀಶ, ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಆರಂಭಿಕ ಹಂತದಲ್ಲಿ ವೇದಿಕೆ (ಫ್ಲ್ಯಾಟ್ ಫಾರ್ಮ್) ನಿರ್ಮಾಣ ಮಾಡಿ, ಸುತ್ತಲೂ ಕಂಬಗಳನ್ನು ಇಟ್ಟು ಗೋಡೆಗಳನ್ನು ಕಟ್ಟಲಾಗುತ್ತಿದ್ದು, ಛಾವಣಿಯೂ ನಿರ್ಮಾಣವಾಗಲಿದೆ. ಮೂರ್ತಿ ನಿರ್ಮಾಣಕ್ಕೆ ಕರ್ನಾಟಕದ ಹೆಗ್ಗಡದೇವನ ಕೋಟೆಯಿಂದ ಐದು ಶಿಲೆಗಳು, ತಮಿಳುನಾಡಿನ ಮಹಾಬಲಿಪುರದಿಂದ ಎರಡು ಶಿಲೆ, ನೇಪಾಳದಿಂದ ಎರಡು ಶಿಲೆಗಳು ಮತ್ತು ಕಾರ್ಕಳದಿಂದ ಒಂದು ಶಿಲೆ ಸಂಗ್ರಹಿಸಲಾಗಿದೆ. ಸೂಕ್ತ ಶಿಲೆಯಲ್ಲಿ ರಾಮದೇವರ ವಿಗ್ರಹ ನಿರ್ಮಾಣ ಮಾಡಿ, ನಿಗದಿತ ದಿನದಂದೇ ಪ್ರಾಣ ಪ್ರತಿಷ್ಠೆ ಕಾರ್ಯ ನಡೆಯಲಿದೆ ಎಂದರು.
ರಾಮ ಮಂದಿರ ನಿರ್ಮಾಣವಾದಂತೆ ರಾಮ ರಾಜ್ಯದ ಕನಸು ಕೂಡ ನನಸಾಗಬೇಕು. ಆ ದಿಸೆಯಲ್ಲಿ ನಾವೆಲ್ಲ ಶ್ರಮಿಸಬೇಕು. ಸಮಾಜದಲ್ಲಿ ಶಾಂತಿ, ಸುಭಿಕ್ಷೆ, ಕ್ಷೇಮ, ಸಮೃದ್ಧಿ ಸಮಾಜದಲ್ಲಿ ನೆಲೆಸಲಿ ಎಂದರು.