Advertisement

ಬಡ ಕುಟುಂಬಕ್ಕೆ ಉಚಿತವಾಗಿ ಶೌಚಾಲಯ ನಿರ್ಮಾಣ

02:38 AM Jul 07, 2020 | Sriram |

ಬೆಳ್ತಂಗಡಿ: ಶೌಚಾಲಯವಿಲ್ಲದ ಬಡ ಕುಟುಂಬವೊಂದಕ್ಕೆ ಉಚಿತವಾಗಿ ಶೌಚಾಲಯ ನಿರ್ಮಿಸಿ ಕೊಟ್ಟು ಗಾರೆ ಕೆಲಸಗಾರರೊಬ್ಬರು ಆದರ್ಶ ಮೆರೆದಿದ್ದಾರೆ.

Advertisement

ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಕೆಲೆಂಜಿಲೋಡಿ ಎಂಬ ಗ್ರಾಮಾಂತರ ಪ್ರದೇಶದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬವೊಂದು ಶೌಚಾಲಯವಿಲ್ಲದೆ ಸಂಕಷ್ಟದಲ್ಲಿತ್ತು. ಇದನ್ನು ಗಮನಿಸಿ ಪಂಚಾಯತ್‌ ಸದಸ್ಯರೊಬ್ಬರು ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸಿ ಕೊಟ್ಟಿದ್ದರೂ ಗಾರೆ ಕೆಲಸದವರಿಗೆ ವೇತನ ನೀಡಲೂ ಸಾಧ್ಯವಾಗದೆ ಸಂಕಷ್ಟ ಉಂಟಾಗಿತ್ತು.

ವಿಷಯ ತಿಳಿದ ಅದೇ ಊರಿನ ನಾರಾಯಣ ಗೌಡ ಮತ್ತವರ ತಂಡ ಕೂಡಲೇ ಕಾರ್ಯಪ್ರವೃತ್ತವಾಗಿ ಶೌಚಾ ಲಯ ನಿರ್ಮಿಸಿಕೊಟ್ಟಿದೆ. ನಾರಾಯಣ ಗೌಡ ವೃತ್ತಿಯಲ್ಲಿ ಗಾರೆ ಕೆಲಸದವರು. ಬೆಳ್ತಂಗಡಿ ತಾಲೂಕು ವಿಪತ್ತು ನಿರ್ವಹಣ ಘಟಕದ ಸದಸ್ಯರೂ ಆಗಿದ್ದಾರೆ. ಇತ್ತೀಚೆಗಷ್ಟೆ ತರಬೇತಿ ಮುಗಿಸಿದ್ದರು. ಇದೀಗ ತನಗೆ ತಿಳಿದಿರುವ ಕೌಶಲದ ಮುಖಾಂತರ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ತಲೆಹೊರೆಯಲ್ಲಿ ಎರಡು ಕಿ.ಮೀ. ಕಚ್ಚಾ ವಸ್ತು ಸಾಗಣೆ!
ಶೌಚಾಲಯ ನಿರ್ಮಿಸಬೇಕಾಗಿದ್ದ ಮನೆ ಗ್ರಾಮಾಂತರ ಪ್ರದೇಶದಲ್ಲಿದ್ದು, ಯಾವುದೇ ವಾಹನ ಬರಲಾರದಷ್ಟು ದುರ್ಗಮ ಸ್ಥಳದಲ್ಲಿತ್ತು. ಹಾಗಾಗಿ ಎರಡು ಕಿಲೋ ಮೀಟರ್‌ ದೂರದಿಂದ ಅಗತ್ಯ ವಸ್ತುಗಳನ್ನು ತಲೆಹೊರೆಯಲ್ಲಿ ಸಾಗಿಸಬೇಕಾದ ಅನಿವಾರ್ಯವಿತ್ತು. ಅದು ವೆಚ್ಚದಾಯಕವಾದ್ದರಿಂದ ಬಡ ಕುಟುಂಬ ಇಲ್ಲಿಯವರೆಗೆ ಶೌಚಾಲಯ ನಿರ್ಮಿಸಲು ಹೋಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next