Advertisement

ಇನ್ನೆರಡು ತಿಂಗಳಲ್ಲಿ ಉದನೆ ಸೇತುವೆ ನಿರ್ಮಾಣ ಪೂರ್ಣ

11:24 PM Mar 25, 2021 | Team Udayavani |

ಪುತ್ತೂರು: ಬಹು ನಿರೀಕ್ಷಿತ ಉದನೆ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.

Advertisement

ಕಡ್ಯ ಕೊಣಾಜೆ ಗ್ರಾಮದ ಉದನೆಯಲ್ಲಿ ಹರಿಯುವ ಗುಂಡ್ಯ ಹೊಳೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್‌) ವತಿಯಿಂದ 13.68 ಕೋ. ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ದಶಕಗಳ ಬೇಡಿಕೆ : 

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ನ್ನು ಕಡ್ಯ ಕೊಣಾಜೆ ಅಥವಾ ನೂಜಿಬಾಳ್ತಿಲದಿಂದ ಸಂಪರ್ಕಿಸಲು ಗುಂಡ್ಯ ಹೊಳೆಗೆ ಸೇತುವೆ ನಿರ್ಮಿಸಬೇಕು ಎನ್ನುವ ಬೇಡಿಕೆ ದಶಕಗಳಿಂದಲೇ ಇತ್ತು. ಪ್ರಸ್ತುತ ಸಂಪರ್ಕಕ್ಕಾಗಿ ತೂಗು ಸೇತುವೆ ಇದ್ದು ಪಾದಚಾರಿ ನಡಿಗೆ ಹಾಗೂ ದ್ವಿಚಕ್ರ ವಾಹನಗಳ ಓಡಾಟಕ್ಕೆ ಮಾತ್ರ ಇಲ್ಲಿ ಅವಕಾಶ ಇದೆ.

ಹೊಸ ಸೇತುವೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾದಲ್ಲಿ ಎಲ್ಲ ಮಾದರಿಯ ವಾಹನಗಳ ಓಡಾಟಕ್ಕೆ ಅನುಕೂಲವಾಗಲಿದೆ. ಉದನೆ, ಶಿರಾಡಿ, ಗುಂಡ್ಯ ಭಾಗದ ಜನರಿಗೆ ಕಡಬ ತಾಲೂಕು ಕೇಂದ್ರ ಸಂಪರ್ಕಿಸಲು ಸಹಕಾರಿಯಾಗಲಿದೆ. ಉದನೆ-ಪುತ್ತಿಗೆ-ಕಲ್ಲುಗುಡ್ಡೆ ಮೂಲಕ ಸಂಪರ್ಕ ಸುಲಭವಾಗಲಿದೆ. ಕಡ್ಯ ಕೊಣಾಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪುತ್ತಿಗೆ ಭಾಗದ ಜನರಿಗೂ ಇದರಿಂದ ಅನುಕೂಲವಾಗಲಿದೆ.

Advertisement

ಎರಡು ತಿಂಗಳಲ್ಲಿ ಪೂರ್ಣ :

2017ರ ಡಿ.5 ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ. ರಮಾನಾಥ ರೈ ಅವರು ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.  ಕಾಸರಗೋಡಿನ ಲೋಫ್‌ ಕನ್‌ಸ್ಟ್ರಕ್ಷನ್‌ ಸಂಸ್ಥೆ ಗುತ್ತಿಗೆ ವಹಿಸಿಕೊಂಡಿತು. 2020ರ ಮಾರ್ಚ್‌ ನೊಳಗೆ ಸೇತುವೆ ಪೂರ್ಣಗೊಳ್ಳಬೇಕು ಎಂಬ ಗಡುವು ವಿಧಿಸಲಾಗಿದ್ದರೂ ನಿರೀಕ್ಷಿತ ಅವಧಿಯೊಳಗೆ ಪೂರ್ತಿಯಾಗಿಲ್ಲ. ಕೋವಿಡ್‌ ಕೂಡ ಕಾಮಗಾರಿಗೆ ಅಡ್ಡಿ ಉಂಟು ಮಾಡಿತು. ಇದೀಗ ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದ್ದು ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಕೆಆರ್‌ಡಿಸಿಎಲ್‌ ಅಧಿಕಾರಿಗಳು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಮೊದಲು ದೋಣಿ ಬಳಿಕ ತೂಗು ಸೇತುವೆ :

ಗುಂಡ್ಯ ಹೊಳೆಗೆ ತೂಗುಸೇತುವೆ ನಿರ್ಮಾಣವಾಗುವ ಮೊದಲು ಹೊಳೆ ದಾಟಲು ನಾಡದೋಣಿ ಆಸರೆಯಾಗಿತ್ತು. ಜನರ ಒತ್ತಾಯದ ಹಿನ್ನೆಲೆಯಲ್ಲಿ 25 ವರ್ಷಗಳ ಹಿಂದೆ ತೂಗುಸೇತುವೆ ನಿರ್ಮಾಣಗೊಂಡಿತ್ತು.  ಉಭಯ ದಿಕ್ಕಿನ ಪ್ರದೇಶಗಳಿಗೆ ನಡೆದುಕೊಂಡು ತೆರಳಲು, ದ್ವಿಚಕ್ರ ವಾಹನ ಓಡಾಟಕ್ಕೆ ಈ ತೂಗು ಸೇತುವೆಯೇ ಆಧಾರವೆನಿಸಿದೆ. ಈಗ ತೂಗು ಸೇತುವೆ ಸನಿಹದಲ್ಲೇ ಹೊಸ ಸೇತುವೆ ನಿರ್ಮಾಣಗೊಂಡಿದೆ.

ಸಂಪರ್ಕ ರಸ್ತೆಗೆ ತಾಂತ್ರಿಕ ತೊಡಕು :

ಸೇತುವೆ ಒಟ್ಟು 56 ಮೀಟರ್‌ ಉದ್ದವಿದೆ. 10.50 ಮೀ.ಅಗಲವಿದೆ. ಫಿಲ್ಲರ್‌ ಕಾಮಗಾರಿ, ಸ್ಲಾÂಬ್‌ ಅಳವಡಿಕೆ ಪೂರ್ಣಗೊಂಡು ಸೇತುವೆ ಭಾಗದ ಕಾಮಗಾರಿ ಪೂರ್ಣಗೊಂಡಿದೆ. ಎರಡು ಬದಿಯಲ್ಲಿ ಸೇತುವೆಗೆ ಸಂಪರ್ಕ ಕಲ್ಪಿಸುವ ತಲಾ 100 ಮೀಟರ್‌ ರಸ್ತೆ ನಿರ್ಮಾಣಕ್ಕೆ ಕೆಲವು ತಾಂತ್ರಿಕ ತೊಡಕು ಉಂಟಾಗಿದ್ದು ಅದನ್ನು ಬಗೆಹರಿಸುವ ಕಾರ್ಯ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಸಂಪರ್ಕ ಪಡೆದುಕೊಳ್ಳುವ 100 ಮೀಟರ್‌ ದೂರವು ಅರಣ್ಯ ವ್ಯಾಪ್ತಿಗೆ ಒಳಪಟ್ಟಿದ್ದು ಕ್ಲಿಯೆರೆನ್ಸ್‌ಗಾಗಿ ಕೆಆರ್‌ಡಿಸಿಎಲ್‌ ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ಇನ್ನೊಂದು ಬದಿಯಲ್ಲಿ ಮೂವರು ಹಕ್ಕುದಾರರ ಭೂಮಿಯನ್ನು ಭೂ-ಸ್ವಾಧೀನ ಮಾಡಿಕೊಂಡು ಪರಿಹಾರ ನೀಡಬೇಕಿದ್ದು ಜಿಲ್ಲಾಧಿಕಾರಿ ಹಂತದಲ್ಲಿ ದರ ಪಟ್ಟಿ ಅಂತಿಮ ಪ್ರಕ್ರಿಯೆ ನಡೆಯುತ್ತಿದೆ. ಇವೆಲ್ಲವೂ ಇತ್ಯರ್ಥಗೊಂಡಲ್ಲಿ ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಉದನೆ ಸೇತುವೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿ ಇದೆ. ಸಂಪರ್ಕ ರಸ್ತೆ ಜಾಗ ಅರಣ್ಯ ವ್ಯಾಪ್ತಿಗೆ ಸೇರಿರುವುದರಿಂದ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಇನ್ನೆರಡು ತಿಂಗಳಲ್ಲಿ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಹೇಮಂತ್‌ ಕುಮಾರ್‌,  ಎಇಇ, ಕೆಆರ್‌ ಡಿಸಿಎಲ್‌ ಹಾಸನ ವಿಭಾಗ

 

ವಿಶೇಷ  ವರದಿ

Advertisement

Udayavani is now on Telegram. Click here to join our channel and stay updated with the latest news.

Next