ಬೆಂಗಳೂರು: ನಗರದ ಸಂಚಾರದಟ್ಟಣೆ ತಗ್ಗಿಸಲು ಬಿಬಿಎಂಪಿ, ಸರ್ಕಾರದ ಸಹಯೋಗದಲ್ಲಿ ರಾಜಾಜಿನಗರ 1ನೇ ಬ್ಲಾಕ್‌ನಿಂದ ದೊಡ್ಡಗೊಲ್ಲರಹಟ್ಟಿವರೆಗೆ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಜಿ. ಪದ್ಮಾವತಿ ತಿಳಿಸಿದ್ದಾರೆ.
ರಾಜಾಜಿನಗರದಿಂದ ತುಮಕೂರು ರಸ್ತೆಗೆ ಪರ್ಯಾಯ ರಸ್ತೆ ಕಲ್ಪಿಸುವ ಸಂಬಂಧ ಸೋಮವಾರ ಶಾಸಕರಾದ ಗೋಪಾಲಯ್ಯ, ಮುನಿರತ್ನ, ಸಂಸದ ಡಿ.ಕೆ. ಸುರೇಶ್, ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿಸಮಿತಿ ಅಧ್ಯಕ್ಷ ಭದ್ರೇಗೌಡ ಸೇರಿದಂತೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಅವರು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, “ಬೋವಿಪಾಳ್ಯದಿಂದ ಸುಮನಹಳ್ಳಿ ಹೊರವರ್ತುಲ ರಸ್ತೆವರೆಗೂ ಮೇಲ್ಸೇತುವೆ ನಿರ್ಮಿಸಲಾಗುತ್ತದೆ.
ಈ ವೇಳೆ ಯಾವುದೇ ಮರ ಕಡಿಯುವುದಿಲ್ಲ. ಪಾರ್ಕ್‌ಗೂ ಹಾನಿ ಆಗುವುದಿಲ್ಲ. ಎರಡೂ ಬದಿ ಮೇಲ್ಸೇತುವೆ ನಿರ್ಮಾಣ ಮಾಡುತ್ತೇವೆ. ಈ ಯೋಜನೆ ಬಗ್ಗೆ ರೂಪುರೇಷೆ ಈಗಾಗಲೇ ಸಿದ್ಧಗೊಂಡಿದೆ,” ಎಂದು ಹೇಳಿದರು. “ಪಾಲಿಕೆ ಬಜೆಟ್‌ನಲ್ಲೂ ಯೋಜನೆ ಬಗ್ಗೆ ಪ್ರಸ್ತಾಪಿಸಲಾಗುವುದು. ಮುಂದಿನ ವಾರ ಅಧಿಕಾರಿಗಳೊಂದಿಗೆ ಈ ಸಂಬಂಧ ಸಭೆ ನಡೆಸಲಾಗುವುದು.
ಹೊರವರ್ತುಲ ರಸ್ತೆಯಿಂದ ಸಂಸದ ಡಿ.ಕೆ. ಸುರೇಶ್ ಮತ್ತು ಮುನಿರತ್ನ ಅವರ ಅನುದಾನದಲ್ಲಿ ಕಾಮಗಾರಿ ಮುಂದುವರಿಯಲಿದೆ. ಇದೊಂದು ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಇದು ಯಶಸ್ವಿಯಾದರೆ ನಗರದಲ್ಲಿ ಬಹುತೇಕ ವಾಹನದಟ್ಟಣೆ ನಿವಾರಣೆಯಾಗಲಿದೆ,” ಎಂದು ತಿಳಿಸಿದರು. “ಅದೇ ರೀತಿ, ಬೋವಿಪಾಳ್ಯದಿಂದ ಕಮಲಾನಗರದ ಸೇತುವೆವರೆಗೂ ಬಿಬಿಎಂಪಿಯಿಂದ ಸೇತುವೆ ನಿರ್ಮಾಣವಾಗಲಿದೆ.
ಸುಮನಹಳ್ಳಿ ಹೊರವರ್ತುಲದಿಂದ ದೊಡ್ಡಗೊಲ್ಲರಹಟ್ಟಿವರೆಗೆ ಶಾಸಕರು ಮತ್ತು ಸಂಸದರ ಅನುದಾನದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ,” ಎಂದು ಹೇಳಿದರು. “ರಾಜಾಜಿನಗರದಿಂದ ದೊಡ್ಡಗೊಲ್ಲಹಟ್ಟಿವರೆಗೂ ಮೇಲ್ಸೇತುವೆ ನಿರ್ಮಿಸಿ ನಂತರ ನೈಸ್ ರಸ್ತೆಗೆ ಲಿಂಕ್ ಮಾಡಲಾಗುವುದು. ಇದರಿಂದ ಮೈಸೂರು, ತುಮಕೂರು, ಮಾಗಡಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ,” ಎಂದರು.